ನಾಳೆ ಮೈಸೂರು ದಸರಾಕ್ಕೆ ಚಾಲನೆ
ಮೈಸೂರು

ನಾಳೆ ಮೈಸೂರು ದಸರಾಕ್ಕೆ ಚಾಲನೆ

October 9, 2018

ಮೈಸೂರು: ಅಕ್ಟೋಬರ್ 10ರಿಂದ 2018ರ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದೆ.
ಬುಧವಾರ ಬೆಳಿಗ್ಗೆ 7.05ರಿಂದ 7.35 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಅವರು ನಾಡ ಹಬ್ಬವನ್ನು ಉದ್ಘಾಟಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಅಧ್ಯಕ್ಷತೆ ವಹಿಸಲಿರುವ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರುವರು. ಸಚಿವರಾದ ಸಾ.ರಾ. ಮಹೇಶ್, ಡಾ.ಜಯಮಾಲ, ಸಿ.ಪುಟ್ಟ ರಂಗಶೆಟ್ಟಿ, ಎನ್.ಮಹೇಶ್, ರಾಜಶೇಖರ್, ಬಸವರಾಜ್ ಪಾಟೀಲ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗ ವಹಿಸುವರು. ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಚಾಮುಂಡಿಬೆಟ್ಟದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ಚಾಮುಂಡೇಶ್ವರಿ ಸನ್ನಿಧಿ ಶೃಂಗಾರಗೊಳ್ಳುತ್ತಿದೆ.

ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಮುಖ್ಯಮಂತ್ರಿಗಳು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಉದ್ಘಾಟಿಸಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನೂ ಪ್ರದಾನ ಮಾಡುವರು, ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್‍ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಸಚಿವರು, ಗಣ್ಯರು ಭಾಗವಹಿಸುವರು.

ಅದೇ ದಿನ ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಸಹಾಯವಾಣಿ, 9.30 ಗಂಟೆಗೆ ದಸರಾ ಕ್ರೀಡಾಜ್ಯೋತಿ, 11.30 ಗಂಟೆಗೆ ಕಲಾಮಂದಿರದಲ್ಲಿ ಚಲನ ಚಿತ್ರೋತ್ಸವ, ಮಧ್ಯಾಹ್ನ 2 ಗಂಟೆಗೆ ಲಲಿತ ಮಹಲ್ ಪಕ್ಕದ ಮುಡಾ ಮೈದಾನ ಮತ್ತು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನೂ ಗಣ್ಯರು ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ, ಸಂಜೆ 4 ಗಂಟೆಗೆ ಕಾಡಾ ಕಚೇರಿ ಆವರಣದಲ್ಲಿ ಪುಸ್ತಕ ಮಳಿಗೆ, 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ, 4.30ಕ್ಕೆ ಕುಪ್ಪಣ್ಣ ಪಾರ್ಕ್‍ನಲ್ಲಿ ಗಾಜಿನ ಮನೆ, ದಸರಾ ವಸ್ತು ಪ್ರದರ್ಶನ, 4.45ಕ್ಕೆ ವಾರ್ತಾ ಇಲಾಖೆ ವಸ್ತು ಪ್ರದರ್ಶನ ಹಾಗೂ ಸಂಜೆ 6.15 ಗಂಟೆಗೆ ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರಗಳಿಗೆ ಚಾಲನೆ ದೊರೆಯಲಿದೆ.

ವಿಜಯದಶಮಿ ಮೆರವಣಿಗೆ: ಮಧ್ಯಾಹ್ನ 2.30ರಿಂದ 3.16ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅರಮನೆ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 3.40ರಿಂದ 4.10ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ವಿಜಯದಶಮಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಚಾಲನೆ ನೀಡುವರು.

ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಚಿವ ಸಂಪುಟದ ಸದಸ್ಯರು ಈ ಸಂದರ್ಭ ಭಾಗವಹಿಸುವರು.

ಪಂಜಿನ ಕವಾಯತು: ಅಕ್ಟೋಬರ್ 19ರಂದು ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಆಕರ್ಷಕ ಪಂಜಿನ ಕವಾಯತು ಪ್ರದರ್ಶನದಲ್ಲಿ ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅವರು ಭಾಗವಹಿಸಿ, ಗೌರವ ವಂದನೆ ಸ್ವೀಕರಿಸುವರು.

Translate »