ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…
ಮೈಸೂರು

ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…

October 9, 2018

ಮೈಸೂರು:  ರೌಡಿಸಂ ಬಿಟ್ಟು ಸಹಜ ಜೀವನಕ್ಕೆ ಮರಳಿದ ರೌಡಿಗಳು ದಾರುಣವಾಗಿ ಹತ್ಯೆಯಾಗಿ ಮರುಕ ಉಂಟುಮಾಡುವಂತಹ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಅದೇ ರೀತಿ ತನ್ನ ರೌಡಿಸಂ ಬಿಟ್ಟು ಶಾಂತ ಸ್ವರೂಪನಾಗಿ ಅಡ್ಡಾಡುತ್ತಿದ್ದ ಸಾಕಾನೆ ರಂಗ ಇಂದು ಮುಂಜಾನೆ ಖಾಸಗಿ ಬಸ್ ಡಿಕ್ಕಿಯಿಂದ ಸಾವಿಗೀಡಾಗಿ, ಎಲ್ಲರೂ ಮರುಕ ಪಡುವಂತೆ ಮಾಡಿದ್ದಾನೆ.

ಈತ ಎರಡು ವರ್ಷಗಳ ಹಿಂದೆ ಸಾವನದುರ್ಗ ಅರಣ್ಯದಲ್ಲಿ ಸೆರೆಯಾಗುವ ಮುನ್ನ ‘ರೌಡಿ ರಂಗ’ ಎಂದೇ ಕರೆಯಲ್ಪಡುತ್ತಿದ್ದ. ರಾಮನಗರ, ಆನೆಕಲ್, ಬನ್ನೇರುಘಟ್ಟ ಅರಣ್ಯಗಳಲ್ಲಿ ತನಗೆ ಯಾರೂ ಸರಿಸಾಟಿ ಇಲ್ಲವೆಂಬಂತೆ ಸ್ವಚ್ಛಂದವಾಗಿ ಅಡ್ಡಾಡುತ್ತಿದ್ದ. ಆಗಿಂದಾಗ್ಗೆ ಕಾಡಂಚಿನ ಗ್ರಾಮಗಳಿಗೆ ನುಗ್ಗಿ ರೈತರು ಬೆಳೆದ ಬೆಳೆಯನ್ನು ಮನಸೋ ಇಚ್ಛೆ ತಿಂದು ತೇಗುತ್ತಿದ್ದ. ಹಾಗೇಯೇ ಹಾಳು ಮಾಡುತ್ತಿದ್ದ. ಈತ ರಾಮನಗರ ಜಿಲ್ಲೆಯ ಸಾವನದುರ್ಗ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಇಬ್ಬರನ್ನು ಕೊಂದು, ಕುಖ್ಯಾತಿ ಹೊಂದಿದ್ದ. ಸಾಮಾನ್ಯವಾಗಿ ಕಾಡಿನಿಂದ ಸೆರೆ ಹಿಡಿಯಲ್ಪಟ್ಟ ಆನೆಗಳಿಗೆ ಅರಣ್ಯ ಇಲಾಖೆಯವರು ನಾಮಕರಣ ಮಾಡುವುದು ಸಹಜ. ವಿಶೇಷವೆಂದರೆ ಇಂದು ಸಾವನ್ನಪ್ಪಿದ ರಂಗನಿಗೆ ಆತ ಸೆರೆಸಿಗುವ ಮುನ್ನ ಅರಣ್ಯ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ನಡೆಸಿದ ಆಟಾಟೋ ಪಾದಿಂದಾಗಿ ಗ್ರಾಮಸ್ಥರೇ ಆತನಿಗೆ ‘ರೌಡಿ ರಂಗ’ ಎಂದು ನಾಮಕರಣ ಮಾಡಿಬಿಟ್ಟಿದ್ದರು.

ರಸ್ತೆ ದಾಟುವುದು ಹಾಗೂ ರಸ್ತೆ ಬದಿಯಲ್ಲಿ ನಿಲ್ಲುವುದು ಈತನ ಹುಂಬುತನ. ಎಷ್ಟೇ ವಾಹನ ಸಂಚಾರವಿದ್ದರೂ ಹೆದರದೇ ನಿರಾಯಾಸವಾಗಿ ರಸ್ತೆ ದಾಟುತ್ತಿದ್ದ. ರಸ್ತೆ ಬದಿಯಲ್ಲಿ ನಿಂತು ಮರಗಳಿಂದ ಸೊಪ್ಪನ್ನು ಕಿತ್ತು ತಿನ್ನುತ್ತಿದ್ದ. ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಸ್ಥರಿಗೆ ಈತ ಮತ್ತು ಈತನ ಸ್ನೇಹಿತ ಸಿದ್ದ ಚಿರಪರಿಚಿತರು. ಇವರಿಬ್ಬರೂ ಬೆಳೆಗಳನ್ನು ತಿಂದು, ನಾಶ ಮಾಡುತ್ತಿದ್ದರೂ ಗ್ರಾಮಸ್ಥರಿಗೆ ಇವರ ಮೇಲೆ ಅದೇನೋ ಮಮಕಾರ. ರಂಗನ ಪುಂಡಾಟ ಹೆಚ್ಚಾದಾಗ ಈತನಿಗೆ ‘ರೌಡಿ ರಂಗ’ ಎಂದು ನಾಮಕರಣ ಮಾಡಿದ್ದರು. ಹಾಗೇ ಈತನ ಸ್ನೇಹಿತನಿಗೆ ಸಿದ್ದ ಎಂದು ಹೆಸರಿಟ್ಟರು. ರಂಗನ ಪುಂಡಾಟ ಹೆಚ್ಚಾಗಿ ಇಬ್ಬರನ್ನು ಕೊಂದ ನಂತರ, ಈತನನ್ನು ಸೆರೆ ಹಿಡಿದು ಉಪಟಳ ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಲಾರಂಭಿಸಿದರು.

ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಎರಡು ವರ್ಷಗಳ ಹಿಂದೆ ರೌಡಿ ರಂಗನ ಸೆರೆ ಕಾರ್ಯಾಚರಣೆ ಆರಂಭವಾಯಿತು. ಆ ಸಂದರ್ಭದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತನಗೆ ಸರಿಸಾಟಿಯೇ ಇಲ್ಲ ಎಂದು ಹೇಳಲ್ಪಡುವ ದಸರಾ ಆನೆ ಅಭಿಮನ್ಯು ಜೊತೆಗೆ ಕಾದಾಟಕ್ಕೆ ನಿಂತು ಅಭಿಮನ್ಯುವನ್ನು ಒಮ್ಮೆ ರೌಡಿ ರಂಗ ಹಿಮ್ಮೆಟ್ಟಿಸಿದ್ದ. ಕೊನೆಗೂ ಆತನ ಸೆರೆಯಾಯಿತು.

ಬನ್ನೇರುಘಟ್ಟದ ಶಿಬಿರದ ಕ್ರಾಲ್‍ನಲ್ಲಿ ಸುದೀರ್ಘ ಆರು ತಿಂಗಳ ಕಾಲ ಬಂಧಿಸಿಟ್ಟ ನಂತರವೇ ರೌಡಿ ರಂಗನನ್ನು ತಮ್ಮ ಹದ್ದುಬಸ್ತಿಗೆ ತೆಗೆದುಕೊಳ್ಳಲು ಮಾವುತರಿಗೆ ಸಾಧ್ಯವಾಯಿತು. ಈತನ ದೇಹದಾಢ್ರ್ಯ, ಆಕರ್ಷಕ ದಂತಗಳು, ಅಗಲ ಹಾಗೂ ಸಮತಟ್ಟಾದ ಬೆನ್ನು ಮತ್ತು ಎತ್ತರ ನೋಡಿದ ಅರಣ್ಯಾಧಿಕಾರಿಗಳು, ರಂಗನಿಗೆ ಸೂಕ್ತ ತರಬೇತಿ ನೀಡಿದರೆ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಆನೆಯಾಗಿ ಪರಿವರ್ತಿಸಬಹುದು ಎಂಬ ನಿರ್ಧಾರಕ್ಕೆ ಬಂದಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ವರ್ಷ ರಂಗನನ್ನು ದಸರಾ ಆನೆಗಳಾದ ಬಲರಾಮ, ಅಭಿಮನ್ಯು, ದ್ರೋಣ ಮುಂತಾದವುಗಳು ಆಶ್ರಯ ಪಡೆದಿರುವ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಒಂದು ಕಾಲದಲ್ಲಿ ತನ್ನ ಜೊತೆ ಕಾದಾಡಿ, ಸೆರೆ ಹಿಡಿದಿದ್ದ ದಸರಾ ಆನೆಗಳ ಒಡನಾಟದಲ್ಲಿ ಪಳಗಿದ ರಂಗ, ಇಂದು ಮುಂಜಾನೆ ಖಾಸಗಿ ಬಸ್ ಡಿಕ್ಕಿ ಹೊಡೆದು, ಸಾವಿಗೀಡಾಗಿದ್ದಾನೆ.

ರಂಗನ ಸಾವಿನಿಂದಾಗಿ ಮತ್ತಿಗೋಡು ಶಿಬಿರದಲ್ಲಿ ಸೂತಕದ ಛಾಯೆ ಆವರಿಸಿದೆ. ಅಲ್ಲಿನ ಮಾವುತರು, ಕಾವಾಡಿಗರು ರಂಗನ ಸಾವಿನ ಬಗ್ಗೆ ಮರುಗುತ್ತಿದ್ದಾರೆ. ಮತ್ತಿಗೋಡಿನಿಂದ ಮೈಸೂರಿಗೆ ಆನೆಗಳನ್ನು ಕರೆತಂದಿರುವವರೂ ದುಃಖ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಈತನ ಸ್ನೇಹಿತ ಸಿದ್ದ ಒಮ್ಮೆ ಹಳ್ಳವೊಂದನ್ನು ದಾಟುವ ಪ್ರಯತ್ನದಲ್ಲಿ ಕಾಲು ಮುರಿದುಕೊಂಡು, ನಡೆದಾಡಲು ಸಾಧ್ಯವಾಗದೇ ಸರಿಯಾದ ಆಹಾರವನ್ನೂ ತೆಗೆದುಕೊಳ್ಳದೆ ಸಾವನ್ನಪ್ಪಿದ್ದ. ಸಾವನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಇಂದು ರಂಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರೌಡಿ ರಂಗ ಮತ್ತು ಸಿದ್ದನ ಬಗ್ಗೆ ಮಾತುಕತೆಯಲ್ಲಿ ಮಗ್ನರಾಗಿದ್ದರು. ಹಲವರು ಸುದ್ದಿವಾಹಿನಿ ಜೊತೆ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧವನ್ನು ಪ್ರಶ್ನಿಸಿದ್ದ ವ್ಯಕ್ತಿ ಬಸ್‍ಗೆ ರಂಗ ಬಲಿಯಾದ…

ಮೈಸೂರು: ರಾಜ್ಯದ ಅಭಯಾರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧ ತೆರವಿಗಾಗಿ ಸಾಕಾನೆ ರಂಗನ ಸಾವಿಗೆ ಕಾರಣವಾದ ಕಲ್ಪಕ ಟ್ರಾವೆಲ್ಸ್‍ನ ಮಾಲೀಕ ನ್ಯಾಯಾಲಯದಲ್ಲಿ ಖಾಸಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾತ್ರಿ ವೇಳೆ ವಾಹನ ಸಂಚಾರದಿಂದಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕರ್ನಾಟಕ ಸರ್ಕಾರವು ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಹಾಗೆಯೇ ಬಂಡೀಪುರ ಮೂಲಕ ಕೇರಳಾಗೆ ತೆರಳುವ ರಸ್ತೆಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆವರೆಗೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿತ್ತು.

ರಾತ್ರಿ ಸಂಚಾರ ನಿಷೇಧದಿಂದಾಗಿ ಕೇರಳದಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟು ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅದೇ ವೇಳೆ ಕಲ್ಪಕ ಟ್ರಾವೆಲ್ಸ್‌ನ ಮಾಲೀಕರು ಕೂಡ ಖಾಸಗಿಯಾಗಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »