ಅ.13ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ  ಬಾರಿಯ `ಓಪನ್ ಸ್ಟ್ರೀಟ್ ಫೆಸ್ಟಿವಲ್’
ಮೈಸೂರು, ಮೈಸೂರು ದಸರಾ

ಅ.13ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ  ಬಾರಿಯ `ಓಪನ್ ಸ್ಟ್ರೀಟ್ ಫೆಸ್ಟಿವಲ್’

October 9, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನಡುವೆ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಅ.13ರಂದು ಬೆಳಿಗ್ಗೆ 8 ರಿಂದ ರಾತ್ರಿ 9.30ರವರೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲು ಮುಂದಾಗಿದೆ.

ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆ(ಮೈಸೂರು ನ್ಯಾಯಾಲಯ)ಯಲ್ಲಿ  `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಆಯೋಜಿಸಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹೊರ ರಾಜ್ಯದ ಪ್ರವಾಸಿಗರು ಮತ್ತು ಯುವ ಸಮೂಹವನ್ನು ಸೆಳೆಯುವ ದೃಷ್ಟಿಯಿಂದ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಅನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ರುವುದು ಮಾತ್ರವಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ಬಾರಿ ದೇವರಾಜ ಅರಸು ರಸ್ತೆಯಲ್ಲಿ ಈ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಫೆಸ್ಟಿವಲ್ ಆಯೋಜಿಸುತ್ತಿರುವ ಜಾಗ ಜೋಡಿ ರಸ್ತೆಯಾಗಿದ್ದು, ಎರಡು ಕಡೆಯೂ 625 ಮೀಟರ್ ಉದ್ದದ ಜಾಗ ಲಭ್ಯವಿದೆ. ಟ್ರಾಫಿಕ್ ಕಿರಿಕಿರಿ ಕಡಿಮೆಯಿದೆ. ಇನ್ನು ವಾಹನ ನಿಲುಗಡೆಗೆ ಮಹಾರಾಜ ಕಾಲೇಜು ಅವರಣ, ಮೈದಾನಗಳನ್ನು ಬಳಸಿಕೊಳ್ಳಬಹುದಲ್ಲದೆ, ಈ ರಸ್ತೆಗೆ ಪಾರಂಪರಿಕ ಕಳೆಯೂ ಇದೆ. ಓಪನ್ ಸ್ಟ್ರೀಟ್ ಫೆಸ್ಟಿವಲ್ ಹಿಂದಿಗಿಂತಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಸೈಕಲ್ ಮತ್ತು ಬೈಕ್ ಸ್ಟಂಟ್, ಚಿತ್ರಸಂತೆ ಹಾಗೂ ಸ್ಟ್ರೀಟ್ ಆರ್ಟ್, ಮಕ್ಕಳ ಆಟಿಕೆ ವಿಭಾಗವನ್ನು ವಿಶೇಷವಾಗಿ ರೂಪಿಸಲಾಗುವುದು ಎಂದು ಸೇಫ್‍ವ್ಹಿಲ್ ಪ್ರಶಾಂತ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಕಳೆದ ಬಾರಿ ದಸರಾ ಮತ್ತು ಮಾಗಿ ಉತ್ಸವದಲ್ಲಿ ಆಯೋಜಿಸಿದ್ದ ಫೆಸ್ಟಿವಲ್‍ಗೆ ಪ್ರವಾಸಿಗರು ಮತ್ತು ಮೈಸೂರು ಜನತೆ ಹೆಚ್ಚಿನ ಪ್ರೋತ್ಸಾಹ ತೋರಿದ್ದು, ಕಾರ್ಯಕ್ರಮದ ರೂಪುರೇಷೆ ಕುರಿತು ಅಂತಿಮ ಚರ್ಚೆ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜನಾರ್ಧನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »