ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಓಪನ್ ಸ್ಟ್ರೀಟ್ ಫೆಸ್ಟಿವಲ್’ನಲ್ಲಿ ಯುವ ಸಮುದಾಯದ್ದು ಸಂಭ್ರಮವೋ ಸಂಭ್ರಮ. ಈ ರಸ್ತೆಯಲ್ಲಿ ಪಾಶ್ಚಿಮಾತ್ಯ ಸಂಪ್ರದಾಯದ ಡಿಜೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಯು ಅನಾವರಣಗೊಂಡು ಮೈಸೂರಿಗರು ಮಾತ್ರ ವಲ್ಲದೆ, ಪ್ರವಾಸಿಗರನ್ನು ಮುದಗೊಳಿಸಿತು.
ಇಂದು ಬೆಳಿಗ್ಗೆ 7 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆರಂಭವಾಯಿತಾದರೂ ಬೆಳಿಗ್ಗೆ 11 ಗಂಟೆಯ ನಂತರ ಸಂಪೂರ್ಣ ಕಳೆ ಕಟ್ಟಿತು. ಈ ರಸ್ತೆಯಲ್ಲಿ ಸೂಕ್ತ ಬೀದಿ ದೀಪ ವ್ಯವಸ್ಥೆ ಇಲ್ಲದ ಕಾರಣ ಸಂಜೆಯ ನಂತರ ಕತ್ತಲೆಯಲ್ಲಿ ನೆರೆದಿದ್ದ ಜನಜಂಗುಳಿ ಪರ ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದು ಮಾತ್ರವಲ್ಲದೆ ಈ ರಸ್ತೆ ಸಂಚಾರ ಬಂದ್ ಆದ ಪರಿಣಾಮ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡುತ್ತಿದ್ದ ದೃಶ್ಯವೂ ಕಂಡು ಬಂದವು. ಮೈಸೂರು ದಸರಾ ಮಹೋತ್ಸವಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಸೇರ್ಪಡೆಯಾಯಿತು.
ಯುವ ದಸರಾ ನಂತರ ಈ ಫೆಸ್ಟಿವಲ್‍ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆಯಿತು. ಕಳೆದ ಎರಡು ವರ್ಷ ದೇವರಾಜ ಅರಸು ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಸಲಾಯಿತು. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಈ ವರ್ಷವೂ ಕೂಡ ಈ ಫೆಸ್ಟಿವಲ್ ಆಯೋಜಿಸಿತು. ಆದರೆ ಈ ಬಾರಿ ದೇವರಾಜ ಅರಸು ರಸ್ತೆ ಬದಲಾಗಿ ಕೃಷ್ಣರಾಜ
ಬುಲೆವಾರ್ಡ್ ರಸ್ತೆಯಲ್ಲಿ ನ್ಯಾಯಾಲಯದ ಮುಂಭಾಗದಿಂದ ಪ್ರಾಚ್ಯವಸ್ತು ಸಂಗ್ರಹಾಲಯದವರೆಗೆ ಎರಡು ರಸ್ತೆಗಳಲ್ಲೂ ಸುಮಾರು 80 ಮಳಿಗೆಗಳನ್ನು ತೆರೆದು ಫೆಸ್ಟಿವಲ್ ಆಚರಿಸಲಾಯಿತು. ಅವುಗಳಲ್ಲಿ ತಿಂಡಿ-ತಿನಿಸು, ಪಾನೀಯ ಮತ್ತು ಪ್ಲೂವ್ ಮಾರ್ಕೆಟ್(ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳ ಮಳಿಗೆ) ಹಾಗೂ ಕರಕುಶಲ ವಸ್ತುಗಳ ಮಾರಾಟಕ್ಕೆ ತಲಾ 20ರಂತೆ 60 ಮಳಿಗೆಗಳು ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ವರ್ಕ್‍ಶಾಪ್ ನಡೆಸಲು 10 ಹಾಗೂ ಚಿತ್ರಸಂತೆಗೆ 10 ಮಳಿಗೆಗಳನ್ನು ಮೀಸಲಿಡಲಾಗಿತ್ತು.
ಇದರ ಜೊತೆಗೆ ಬೆಂಗಳೂರಿನಿಂದ 15 ಫುಡ್ ಟ್ರಕ್‍ಗಳನ್ನು ತರಿಸಲಾಗಿತ್ತು. ಒಟ್ಟಾರೆ ಕೃಷ್ಣರಾಜ ಬುಲೆವಾರ್ಡ್ ರಸ್ತೆ ಇಂದು ವಿವಿಧ ಅಂಗಡಿ ಮಳಿಗೆಗಳು ಹಾಗೂ ಮನ ರಂಜನೆ ಕಾರ್ಯಕ್ರಮಗಳಿಂದ ಹಬ್ಬದ ಕಳೆ ಕಟ್ಟಿತ್ತು. ಈ ಫೆಸ್ಟಿವಲ್‍ಗೆ ಯುವ ಸಮುದಾಯದವರು ಮಾತ್ರವಲ್ಲದೆ, ಎಲ್ಲಾ ವಯೋಮಾನದವರು ಆಗಮಿಸಿ, ಹಬ್ಬದ ಸವಿ ಸವಿದರು. ಹೆಚ್ಚಾಗಿ ಯುವ ಸಮುದಾಯದವರೇ ಆಗಮಿಸಿದ್ದು, ರಸ್ತೆಯುದ್ದಕ್ಕೂ ಕುಣಿದು ಕುಪ್ಪಳಿಸಿ, ಫೆಸ್ಟಿವಲ್ ಅನ್ನು ಕಲರ್‍ಫುಲ್ ಮಾಡಿದರು. ಮಕ್ಕಳು ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಹಿರಿಯರು ಯುವ ಸಮುದಾಯದ ಸಂಭ್ರಮವನ್ನು ಕಂಡು ಖುಷಿಪಟ್ಟರು. ಮಕ್ಕಳಿಂದ ವಯೋವೃದ್ಧರವರೆವಿಗೂ ಎಲ್ಲರಿಗೂ ಅಗತ್ಯವಿರುವ ವಸ್ತುಗಳ ಮಾರಾಟದ ವ್ಯವಸ್ಥೆ ಮಾಡಿದ್ದರಿಂದ ಮಳಿಗೆಗಳಲ್ಲಿ ವ್ಯಾಪಾರ ಜೋರಾಗೇ ಇತ್ತು. 8 ವರ್ಷದೊಳಗಿನ ಮಕ್ಕಳು ಆಟವಾಡಲು ವಿವಿಧ ಆಟಿಕೆಗಳ ವ್ಯವಸ್ಥೆ ಮಾಡಲಾಗಿತ್ತು. ಚಿತ್ರ ಬರೆಯುವ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.
ಈ ಫೆಸ್ಟಿವಲ್‍ನಲ್ಲಿ ಯಕ್ಷಗಾನ ಪಾತ್ರಧಾರಿ ಗೊಂಬೆ, ನಗಾರಿ ಭಾರಿಸುವ ಗೊಂಬೆ, ಚಿಂಪಾಂಜಿó ಗೊಂಬೆಗಳನ್ನು ಇಡಲಾಗಿತ್ತು. ಇವುಗಳ ಮುಂದೆ ನಿಂತು ಸೆಲ್ಫೀ ತೆಗೆದುಕೊಳ್ಳುವುದರಲ್ಲಿ ಎಲ್ಲಾ ವಯೋಮಾನದವರು ಮುಗಿಬಿದ್ದದ್ದು ಕಂಡು ಬಂತು. ಅದು ಮಾತ್ರವಲ್ಲದೆ, ರೋಬೋ ವೇಷಧಾರಿ, ಮರಗಾಲು ಕಲಾವಿದರು, ವೀರಗಾಸೆ, ಹುಲಿ ಕುಣಿತ ಕಲಾವಿದರೊಂದಿಗೂ ಸೆಲ್ಫೀ ತೆಗೆದುಕೊಳ್ಳುವಲ್ಲಿ ಜನರು ಮುಗಿಬಿದ್ದರು. ನಿರಂತರವಾಗಿ ಸೆಲ್ಫೀಗೆ ಪೋಸ್ ಕೊಟ್ಟ ಕಲಾವಿದರು ಸುಸ್ತಾದಂತೆ ಕಂಡು ಬಂತು.
ಆಲ್ಟ್ರಾನೇಟಿವ್ ಗ್ಯಾಲರಿಯಿಂದ ಓಪನ್ ಸ್ಟ್ರೀಟ್‍ನಲ್ಲಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಅವಕಾಶ ನೀಡಲಾಗಿತ್ತು. ಬಣ್ಣ ಮತ್ತು ಕ್ಯಾನ್ವಾಸ್ ಅನ್ನು ಸಂಸ್ಥೆ ವತಿಯಿಂದಲೇ ಉಚಿತವಾಗಿ ನೀಡಲಾಗಿತ್ತು. ಮಕ್ಕಳು ಅದರಲ್ಲಿ ಚಿತ್ರ ಬಿಡಿಸಿ ತೆಗೆದುಕೊಳ್ಳಬಹುದಾಗಿತ್ತು. ಸಾವಿರಾರು ಮಕ್ಕಳು ಚಿತ್ರ ಬಿಡಿಸಿ ಸಂಭ್ರಮಿಸಿದರು. ಇದರ ಜೊತೆಗೆ ಬಹು ಗಾತ್ರದ ಕ್ಯಾನ್ವಾಸ್ ಮೇಲೆ ಸಾವಿರಾರು ಮಕ್ಕಳು ಬಣ್ಣದಲ್ಲಿ ಹೆಜ್ಜೆ ಗುರುತು ಮೂಡಿಸಿದರು.
ಈ ರಸ್ತೆಯ 5 ಕಡೆ ಡಿಜೆ ಸಂಗೀತ ಏರ್ಪಡಿಸಲಾಗಿದ್ದು, ಕನ್ನಡ, ಹಿಂದಿ, ತೆಲುಗು, ಇಂಗ್ಲೀಷ್ ಸೇರಿದಂತೆ ಹಲವು ಹಾಡುಗಳಿಗೆ ಯುವ ಸಮುದಾಯದವರು ಹೆಜ್ಜೆ ಹಾಕಿದರು. ನಾನಾ ಕಾಲೇಜು ತಂಡಗಳು ಹಾಗೂ ನೃತ್ಯ ಪಟುಗಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಒಂದೆಡೆ ಪಾಶ್ಚಾತ್ಯ ಸಂಪ್ರದಾಯದ ಡಿಜೆ ಸಂಗೀತಕ್ಕೆ ಯುವಕ-ಯುವತಿಯರು ಬಿಂದಾಸ್ ಡ್ಯಾನ್ಸ್ ಮಾಡುತ್ತಿದ್ದರೆ, ಮತ್ತೊಂದು ಕಡೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಬಂಟ್ವಾಳದ ಶ್ರೀ ಶಾರದಾ ಆಟ್ರ್ಸ್ ಜಾನಪದ ಗೊಂಬೆ ಬಳಗ, ಚೆಂಡೆ ಬಳಗ ಕಲಾವಿದರು ಹುಲಿ ಕುಣಿತ, ಚೆಂಡೆ ಕುಣಿತ ಹಾಗೂ ಯಕ್ಷಗಾನ ಪ್ರದರ್ಶಿಸಿ, ಮನಗೆದ್ದರು.
ಇಂದು ಬೆಳಿಗ್ಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಚಾಲನೆ ನೀಡಿದ್ದರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್ ಇನ್ನಿತರರು ಸಚಿವರಿಗೆ ಸಾಥ್ ನೀಡಿದ್ದರು.