ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ
ಮೈಸೂರು, ಮೈಸೂರು ದಸರಾ

ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ

October 14, 2018

ಮೈಸೂರು:  ಬಾಲಿವುಡ್ ಗಾಯಕರಾದ ಬಾದ್‍ಶಾ, ಅಸ್ಥ ಗಿಲ್ ಹಾಗೂ ವಿವಿಧ ತಂಡ ಗಳ ಸಂಗೀತ ಝೇಂಕಾರ ಯುವ ದಸರಾದ ರಂಗು ಹೆಚ್ಚಿಸಿತ್ತು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ 2ನೇ ದಿನವಾದ ಶನಿವಾರ, ಪ್ರೇಕ್ಷಕರು ಕಿಕ್ಕಿರಿದಿದ್ದರು. ಮೈದಾನ ತುಂಬಿ, ಸುತ್ತಮುತ್ತಲಿನ ಸ್ಥಳಗಳಲ್ಲೂ ನಿಂತು ಕಾರ್ಯಕ್ರಮ ಸವಿದರು. ಬಾದ್‍ಶಾ ಹಾಗೂ ಅಸ್ಥ ಗಿಲ್ ಅವರ ಕಾರ್ಯಕ್ರಮ ತಡವಾಗಿ ಆರಂಭ ವಾದರೂ ಪ್ರೇಕ್ಷಕರು ಎತ್ತಲೂ ಕದಲದೆ ಕಾದು ಕುಳಿತಿದ್ದರು. ರಾತ್ರಿ ಸುಮಾರು 10 ಗಂಟೆಗೆ ವೇದಿಕೆ ಏರಿದ ಇವರು, `ತು ಮೇರಿ, ಮೇ ತೆರಾ…. ದಮ್ಮಾ.. ದಮ್ಮಾ.. ದಮ್ಮಾ.., ದಮ್ಮಾ ದಮ್ಮಾ ಲೋಗೆ.. ಸೇರಿದಂತೆ ಹಲವು ಗೀತೆ ಗಳನ್ನು ಹಾಡಿ ರಂಜಿಸಿದರು. ಬಾದಶಾ ಅವರು ಹಾಡಿದ ‘ವಾಕಿರ ಸ್ವಾಗ್’ ಆಧುನಿಕ ಶೈಲಿಯ ಗಾಯನಕ್ಕೆ ನೆರೆ ದಿದ್ದವರು ಸಂಭ್ರಮಿಸಿದರು.

ಕುಣಿಸಿದ ಲಗೋರಿ: ಗ್ರಾಮೀಣ ಕ್ರೀಡೆಯಾದ ಲಗೋರಿ ಹೆಸರಿನ ಸಂಗೀತ ತಂಡ ನೆರೆದಿದ್ದವರನ್ನು ತಾಳಕ್ಕೆ ತಕ್ಕಂತೆ ಆಡಿಸಿ, ಕುಣಿಸುವಲ್ಲಿ ಯಶಸ್ವಿಯಾಯಿತು. ಆಧುನಿಕ ಸಂಗೀತ ವಾದ್ಯಗಳ ನಾದದೊಂದಿಗೆ ಪ್ರಸಿದ್ಧ ಕವಿಗಳ ಸಾಹಿತ್ಯವನ್ನು ವಿಶಿಷ್ಟವಾಗಿ ಹಾಡಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಜಿ.ಪಿ.ರಾಜರತ್ನಂ ಅವರ `ಹೇಳ್ಕೊಳ್ಳೋಕ್ ಒಂದೂರು, ತಲೆ ಮೇಲೆ ಒಂದ್ ಸೂರು, ಮಲ್ಗಾಕೆ ಭೂಮ್ತಾಯಿ ಮಂಚ…’, `ಬ್ರಹ್ಮ ನಿಂಗೆ ಜೋಡುಸ್ತೀನಿ ಹೆಂಡ ಮುಟ್ಟಿದ್ ಕೈನಾ…’, `ತರವಲ್ಲ ತಗಿ ನಿನ್ನ ತಂಬೂರಿ…’ ಇನ್ನಿತರ ಗೀತೆಗಳನ್ನು ಹಾಡಿದ್ದು, ವಿಶಿಷ್ಟವಾಗಿತ್ತು. `ಮಾರಿಕಣ್ಣು ಹೋರಿ ಮ್ಯಾಗೆ, ಕಟುಕನ್ ಕಣ್ಣು ಕುರಿಮ್ಯಾಗೆ…’ ಹಾಡುತ್ತಿದ್ದಂತೆ ಕುಣಿಯುತ್ತಿದ್ದ ಯುವಕರಿಗೆ ಮತ್ತಷ್ಟು ಉತ್ಸಾಹ ಸಿಕ್ಕಂತಿತ್ತು. ಲಗೋರಿ ತಂಡದ ಬ್ರಾಂಡ್ ಸಾಂಗ್, `ಏನಯ್ಯಾ ನಿನ್ನ ಛಾಯೆ, ಏನಯ್ಯಾ ನಿನ್ನ ಮಾಯೆ, ನಿಮ್ ಲೋಕದಲ್ಲಿ ಒಂದೇ ಬ್ರಾಂಡು, ನಮ್ಮ ಲೋಕದಲ್ಲಿ ನೂರಾರು ಬ್ರಾಂಡು…’ ಎಂಬ ಸುರಪಾನದ ಹಾಗೂ ಆರ್ಕೆಸ್ಟ್ರಾಗಳ ಕಡೆಯಲ್ಲಿ ಹಾಡುವ `ಕುಲದಲ್ಲಿ ಕೀಳಾವುದೋ ಹುಚ್ಚಪ್ಪ, ಮತದಲ್ಲಿ ಮೇಲಾವುದೋ…’ ಹಾಡು ಹಾಡುತ್ತಿದ್ದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ಕಡೆಯಲ್ಲಿ ಕಲಾವಿದರು ವೇದಿಕೆಯಿಂದ ತೂರಿದ ಲಘುವಾದ ಚೆಂಡುಗಳನ್ನು ಪ್ರೇಕ್ಷಕರು ಕ್ಯಾಚ್ ಹಿಡಿದು ಸಂಭ್ರಮಿಸಿದರು.

ನೃತ್ಯ ವೈಭವ: ಮೈಸೂರಿನ ಅಂಬಾರಿ ಡ್ಯಾನ್ಸ್ ಸ್ಟುಡಿಯೋ ರಾವಣನ ಅವತಾರವನ್ನು ಪ್ರಸ್ತುತಪಡಿಸಿದರೆ, ಡಿವೈನ್ ಡ್ಯಾನ್ಸ್ ಅಕಾಡೆಮಿ ಕಲಾವಿದರು, ದರ್ಶನ್ ನಟನೆಯ `ಚಕ್ರವರ್ತಿ’ ಚಿತ್ರದ ಶೀರ್ಷಿಕೆ ಗೀತೆಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು. ಜೋಗಯ್ಯ ನೃತ್ಯ ತಂಡದವರು `ಅಕ್ಕಯ್ಯ ನೋಡು ಬಾರೆ ಚೆಲುವನಾ…’ ಗೀತೆಗೆ ನರ್ತಿಸಿದರು. ಎಸ್‍ಎಲ್‍ಡಿ ಡ್ಯಾನ್ಸ್ ಸ್ಟುಡಿಯೋ ಕಲಾವಿದರು `ನವಶಕ್ತಿ ವೈಭವ’ವನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟಿದರು. ವಿಜಯ ವಿಠಲ ಕಾಲೇಜಿನ ವಿದ್ಯಾರ್ಥಿಗಳು `ಕರುನಾಡೇ ಕೈಚಾಚಿದೆ ನೋಡೆ…’ ಹಾಡಿಗೆ ಅಮೋಘವಾಗಿ ನರ್ತಿಸಿ, ಕನ್ನಡ ನಾಡಿನ ಅಭಿಮಾನ ಸಾರಿದರು. ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಕಾಲೇಜು, ಮಂಡ್ಯದ ಭಾರತಿ ಕಾಲೇಜು, ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ವಿಭಿನ್ನ ನೃತ್ಯ ಪ್ರದರ್ಶಿಸಿ, ಯುವ ದಸರಾದ ಸಂಭ್ರಮ ಹೆಚ್ಚಿಸಿದವು.

ಪೀಪಿಯಿಂದ ಕಿರಿಕಿರಿ: ಯುವ ದಸರಾದಲ್ಲಿ ಪೀಪಿಯ ಕಿರಿಕಿರಿ ಹೆಚ್ಚಾಗಿತ್ತು. ಮಹಾರಾಜ ಮೈದಾನ ಹೊರಗೆ 30/40 ರೂ.ಗೆ ಕರ್ಕಶ ಶಬ್ದ ಹೊಮ್ಮಿಸುವ ಪೀಪಿಗಳನ್ನು ಕೊಳ್ಳುತ್ತಿದ್ದ ಯುವಕ-ಯುವತಿಯರು ಕಾರ್ಯಕ್ರಮದ ನಡುವೆಯೂ ಊದಿದ್ದು ಆಭಾಸವೆನಿಸಿತು.

Translate »