ರೈತರಿಗೆ ಬ್ಯಾಂಕ್‍ಗಳಿಂದ ನೋಟೀಸ್ ಕುರುಬೂರು ಶಾಂತಕುಮಾರ್ ಆರೋಪ
ಮೈಸೂರು

ರೈತರಿಗೆ ಬ್ಯಾಂಕ್‍ಗಳಿಂದ ನೋಟೀಸ್ ಕುರುಬೂರು ಶಾಂತಕುಮಾರ್ ಆರೋಪ

October 15, 2018

ತಿ.ನರಸೀಪುರ: ರಾಷ್ಟ್ರೀಕೃತ ಬ್ಯಾಂಕ್‍ಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲದ ಕಾರಣ ಬ್ಯಾಂಕ್‍ಗಳು ರೈತರ ಸಾಲ ವಸೂಲಿಗೆ ನೋಟೀಸ್ ನೀಡಿ ಕಿರುಕುಳ ನೀಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು, ರೈತರಿಗೆ ಕಿರುಕುಳ ಕೊಟ್ಟರೆ ಬ್ಯಾಂಕ್‍ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡುತ್ತಿ ದ್ದಾರೆ. ಆದರೆ ಸಾಲ ನೀಡಿದ ಬ್ಯಾಂಕ್‍ಗಳು ರೈತರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನೋಟೀಸ್ ನೀಡುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ. ಜೊತೆಗೆ ಕಬ್ಬನ್ನು ಬೇರೆ ಜಿಲ್ಲೆಗಳಿಂದ ಪೂರೈಕೆ ಮಾಡಿಕೊಳ್ಳುತ್ತಿರುವುದರಿಂದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕಬ್ಬು ಕಟಾವು ಬಹಳ ವಿಳಂಬವಾಗಿ ರೈತರಿಗೆ ಬಹಳ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ರೈತರು ಅಧಿ ಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆಂದು ಹೇಳಿದ ಮುಖ್ಯಮಂತ್ರಿಗಳು ಸಾಲ ಮನ್ನಾ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡು ಈಗ ಆ ದಾಖಲಾತಿ, ಈ ದಾಖಲಾತಿ ಕೊಡಿ ಎಂದು ರೈತರಿಗೆ ಸಬೂಬು ಹೇಳುತ್ತಾ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲ ಮನ್ನಾ ಆದೇಶ ನೀಡದೇ ನಾಟಕೀಯ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲ ನೀಡುವಾಗ ದಾಖಲೆ ಪಡೆದ ಬ್ಯಾಂಕ್ ಅಧಿಕಾರಿಗಳು ಈಗ ಮತ್ತೆ ದಾಖಲೆ ಕೊಡಿ, ಪಾನ್ ಕಾರ್ಡ್ ಕೊಡಿ ಎಂದು ಹೇಳುತ್ತಾರೆ. ಸಹಕಾರ ಬ್ಯಾಂಕ್‍ಗಳು ಸಾಲ ಮನ್ನಾ ದೃಢೀಕರಣ ನೀಡುತ್ತಿಲ್ಲ. ಜೊತೆಗೆ ಯಾವುದೇ ಬ್ಯಾಂಕ್‍ಗಳಿಂದ ರೈತರಿಗೆ ಸಾಲ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಸಾಲ ಮನ್ನಾ ಆದೇಶವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಸಾದ್ ನಾಯಕ್, ಹಾಡ್ಯ ರವಿ, ಮಾದಪ್ಪ, ಕೃಷ್ಣೇಗೌಡ, ರವೀಂದ್ರ, ನಂಜುಂಡಸ್ವಾಮಿ, ಪರಶಿವ ಮೂರ್ತಿ ಮತ್ತಿತರರು ಹಾಜರಿದ್ದರು.

Translate »