ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು
ಮೈಸೂರು

ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು

October 15, 2018

ತಿ.ನರಸೀಪುರ/ನಂಜನಗೂಡು :  ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಬಹುದೆಂಬ ಆತಂಕದಲ್ಲಿ ಯುವ ಪ್ರೇಮಿಗಳು ವಿಷ ಸೇವಿಸಿದ್ದು, ಇದರ ಪರಿಣಾಮವಾಗಿ ಯುವತಿ ಸಾವನ್ನಪ್ಪಿ, ಯುವಕ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ತಾಯೂರು ಗ್ರಾಮದಿಂದ ವರದಿಯಾಗಿದೆ.

ತಾಲೂಕಿನ ಕಲಿಯೂರು ಗ್ರಾಮದ ನಿವಾಸಿ ಶ್ರೀಧರ್ ಅವರ ಪುತ್ರಿ ಸ್ವಾತಿ(18) ವಿಷ ಸೇವನೆಯಿಂದ ಮೃತಪಟ್ಟಿದ್ದು, ಈಕೆಯ ಪ್ರಿಯಕರ ಕೊಳ್ಳೇಗಾಲ ತಾಲೂಕು ಹಂಪಾಪುರ ಗ್ರಾಮದ ನಿವಾಸಿ ರಾಜೇಂದ್ರನಾಯಕ ಅವರ ಪುತ್ರ ಮಣಿ(19) ವಿಷ ಸೇವಿಸಿ, ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿವರ: ಕೊಳ್ಳೇಗಾಲ ತಾಲೂಕು ಹಂಪಾಪುರ ಗ್ರಾಮದ ಮಣಿ ಅವರು ಕಲಿಯೂರು ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಆಟೋ ಚಾಲನೆ ಮಾಡುತ್ತಿದ್ದ. ಮೂಗೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಲಿಯೂರಿನ ವಿದ್ಯಾರ್ಥಿನಿ ಸ್ವಾತಿ ಮತ್ತು ಈತ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಇಂದು ಬೆಳಿಗ್ಗೆ 5 ಗಂಟೆ ಸುಮಾರಿನಲ್ಲಿ ತಿ.ನರಸೀಪುರ ಸಮೀಪದ ತಾಯೂರು ಕಾಲುವೆ ಬಳಿ ಇವರಿಬ್ಬರು ವಿಷ ಸೇವಿಸಿ ಅಸ್ವಸ್ಥಗೊಂಡಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುವ ಮುನ್ನವೇ ಸ್ವಾತಿ ಸಾವನ್ನಪ್ಪಿದ್ದು, ಮಣಿಗೆ ತಿ.ನರಸೀಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಿಳಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮುಖ್ಯಪೇದೆ ದೇವರಾಜಯ್ಯ, ಪೇದೆ ಶಶಿಕುಮಾರ್ ಭೇಟಿ ನೀಡಿದ್ದರು.

Translate »