ದಸರಾ ವೇಳೆ ಪುರಭವನ ಆವರಣದಲ್ಲಿ ಸಾವಿರ ವಾಹನ ನಿಲುಗಡೆ
ಮೈಸೂರು, ಮೈಸೂರು ದಸರಾ

ದಸರಾ ವೇಳೆ ಪುರಭವನ ಆವರಣದಲ್ಲಿ ಸಾವಿರ ವಾಹನ ನಿಲುಗಡೆ

October 9, 2018

ಮೈಸೂರು:  ಕಳೆದ ಬಾರಿಯಂತೆ ಈ ವರ್ಷವೂ ದಸರಾ ಮಹೋತ್ಸವದ ವೇಳೆ ಮೈಸೂರಿನ ಪುರಭವನದ ಆವರಣದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ 1000 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ನಗರಪಾಲಿಕೆ ಕಮೀಷನರ್ ಕೆ.ಹೆಚ್.ಜಗದೀಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಸುರೇಶ್ ಹಾಗೂ ಸಿಬ್ಬಂದಿಗಳೊಂದಿಗೆ ಇಂದು ರಾಜಮಾರ್ಗದ ಸಿವಿಲ್ ಕಾಮಗಾರಿ ಹಾಗೂ ಟೌನ್ ಹಾಲ್‍ನ ಪಾರ್ಕಿಂಗ್ ಮತ್ತು ಸ್ವಚ್ಛತಾ ಕೆಲಸಗಳನ್ನು ಪರಿಶೀಲಿಸಿದರು.

ಹಾರ್ಡಿಂಜ್ ಸರ್ಕಲ್ ಮತ್ತು ಅರ ಮನೆ ಸುತ್ತಲಿನ ಕಲ್ಲಿನ ಬ್ಯಾರಿಕೇಡ್ ರಿಪೇರಿ ಹಾಗೂ ಫುಟ್‍ಪಾತ್ ಕೆಲಸಗಳನ್ನು ವೀಕ್ಷಿಸಿದ ಅವರು, ಹಾರ್ಡಿಂಜ್ ಸರ್ಕಲ್‍ನಲ್ಲಿ ಕಟ್ಟಿರುವ ಕೆಲ ಟೇಪುಗಳು ಹಾಗೂ ಇನ್ನಿತರ ವಸ್ತುಗಳನ್ನು ತೆರವು ಗೊಳಿಸಿ ಸ್ವಚ್ಛಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಪುರಭವನಕ್ಕೆ ತೆರಳಿ ಪಾರ್ಕಿಂಗ್ ಲಾಟ್‍ನ ಅಂಡರ್‍ಗ್ರೌಂಡ್ ಲೆವೆಲ್ ಪಾರ್ಕಿಂಗ್ ಸ್ಥಳ ಪರಿಶೀಲಿಸಿ ಸುಮಾರು 300 ಕಾರುಗಳನ್ನು ನಿಲ್ಲಿಸಲು ಅವಕಾಶ ವಿರುವುದರಿಂದ ಅಲ್ಲಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಕಾರುಗಳು ಬಂದು ಸರಾಗವಾಗಿ ಹೋಗಲು ಸೌಲಭ್ಯ ಕಲ್ಪಿಸಬೇಕು. ಉಳಿದ ಎರಡು ಮಹಡಿಗಳ ಪಾರ್ಕಿಂಗ್ ಲಾಟ್‍ನಲ್ಲಿ 700ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು.

ಪ್ರತೀ ಮಹಡಿಗಳಿಗೆ ಡೈರೆಕ್ಷನ್ ಬೋರ್ಡ್ಗಳನ್ನು ಹಾಕಿ ವಾಹನಗಳು ಹಾಗೂ ನಾಗರಿಕರ ಸುರಕ್ಷತೆಗೆ ಕ್ರಮ ವಹಿಸಬೇಕು. ಟೌನ್‍ಹಾಲ್‍ನ ಬಲ ಬದಿ ಗೇಟಿನಿಂದ ಒಳಗೆ ಬಂದು ಎಡಬದಿ ಗೇಟಿನ ಮೂಲಕ ಹೊರಗೆ ಹೋಗಲು ಅವಕಾಶ ಕಲ್ಪಿಸಿ ಮಾರ್ಗಸೂಚಿ ಗುರುತು (ಆರೋ ಮಾರ್ಕ್) ಹಾಕಿ ಅನುಕೂಲ ಮಾಡಿ ಕೊಡಿ ಎಂದೂ ಅಭಿರಾಮ್ ಜಿ. ಶಂಕರ್ ಅವರು ಪಾಲಿಕೆ ಅಧಿಕಾರಿಗಳಿಗೆ ಇದೇ ಸಂದರ್ಭ ಸಲಹೆ ನೀಡಿದರು.

ಮಳೆ ನೀರು ನೆಲ ಮಹಡಿಗೆ ಹೋಗಿ ಸಂಗ್ರಹವಾಗದಂತೆ ತಡೆಯಬೇಕು. ಟೌನ್ ಹಾಲ್ ಆವರಣದಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ, ಗುಡ್ಡೆಯಂತಿರುವ ಮಣ್ಣಿನ ರಾಶಿಯನ್ನು ಸಮತಟ್ಟು ಮಾಡಿಸಿ ಯಾವುದೇ ವಾಹನ ಒಳಗೆ ಪ್ರವೇಶಿಸಿದರೆ ಕಾಣುವ ಹಾಗೆ ವ್ಯವಸ್ಥೆ ಮಾಡಿಸಿ ಹಾಗೂ ವಾಹನ ಗಳು ಕಳವು ಆಗದಂತೆ ಎಚ್ಚರ ವಹಿಸಿ ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.

Translate »