ನದಿಗಳ ಜೋಡಣೆಗೆ ಮುಂದಾಗುವುದು ಅಪರಾಧ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಎಚ್ಚರಿಕೆ
ಮೈಸೂರು

ನದಿಗಳ ಜೋಡಣೆಗೆ ಮುಂದಾಗುವುದು ಅಪರಾಧ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಎಚ್ಚರಿಕೆ

November 14, 2018

ಮೈಸೂರು:  ನದಿಗಳನ್ನು ಮನುಷ್ಯ ಸೃಷ್ಟಿಸಿಲ್ಲ. ಹಾಗಾಗಿ ನೈಸರ್ಗಿಕವಾಗಿ ಹರಿಯು ತ್ತಿರುವ ನದಿಗಳ ಜೋಡಣೆಗೆ ಮುಂದಾಗುವುದು ಮಹಾಪರಾಧ ಎಂದು ಖ್ಯಾತ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಾ.ಮಾ.ನಾ. ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಭಾರತದ ಪ್ರಸ್ತುತ ಸಾಮಾಜಿಕ ಮತ್ತು ಪರಿಸರ ವಿದ್ಯಮಾನಗಳು’ ವಿಷಯ ಕುರಿತು ಮಾತನಾಡಿದ ಅವರು, ನದಿ ಜೋಡಣೆ ಮತ್ತು ನದಿ ತಿರುಗಿಸುವಿಕೆ ಪರಿಸರ ವಿರೋಧಿಯಾಗಿದೆ. ನದಿಗಳು ಎಲ್ಲಿ ಹರಿಯಬೇಕು. ಯಾವ ಸ್ಥಳದಲ್ಲಿ ಸಮುದ್ರ ಸೇರಬೇಕೋ ಅಲ್ಲೇ ಸೇರಬೇಕು. ಗಂಗಾ-ಕಾವೇರಿ ನದಿಗಳ ಜೋಡಣೆಯಿಂದ ಯಾವುದೇ ಲಾಭವಿಲ್ಲ. ಹರಿಯುವ ನದಿಗಳನ್ನು ತಡೆಯುವ ಅಧಿಕಾರ ಮನುಷ್ಯನಿಗಿಲ್ಲ ಎಂದರು.

ಗಣಿಗಾರಿಕೆಗೆ ಅನುಮತಿ: ಕೇಂದ್ರ ಸರ್ಕಾರ ನನ್ನನ್ನು ಗಣಿ ನವೀಕರಣ ಸಮಿತಿಗೆ ಆಯ್ಕೆ ಮಾಡಿತ್ತು. ಗಣಿ ಗಾರಿಕೆಗೆ ಅನುಮತಿ ನೀಡುವಂತೆ ಕೋರಿ 4 ಸಾವಿರದಷ್ಟು ಅರ್ಜಿಗಳು ಬಂದಿದ್ದವು. ಆದರೆ, ನಮ್ಮ ಸಮಿತಿಯ ಒಪ್ಪಿಗೆ ಇಲ್ಲದೆ 100ಕ್ಕೂ ಹೆಚ್ಚು ಗಣಿಗಾರಿಕೆಗೆ ಅನುಮತಿ ನೀಡಲಾಯಿತು. ಅದನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿ ಹೊರ ಬಂದೆ ಎಂದು ಹೇಳಿದರು.
ಕಾರ್ಪೋರೇಟ್ ಕಂಪನಿಗಳಿಗೆ ಶೇ.40ರಷ್ಟು ರಕ್ಷಿತಾ ರಣ್ಯಗಳನ್ನು ಭೋಗ್ಯಕ್ಕೆ ನೀಡಲು ಸರ್ಕಾರ ಮುಂದಾಗಿದೆ. ಹೀಗೆ ನೀಡಿದರೆ ಪ್ರಾಣಿ ಪಕ್ಷಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರಲ್ಲದೆ, ಕೀಟನಾಶಕಗಳ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಗೊತ್ತಿದ್ದರೂ ಬಳಕೆ ಮಾತ್ರ ಕಡಿಮೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇಲ್ಸೆತುವೆ ನಿರ್ಮಾಣ ಆಗಬಾರದು: ಕೇರಳಕ್ಕೆ ಬಳಸಿ ಹೋದರೂ ಪರವಾಗಿಲ್ಲ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದು. ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.

1994ರಲ್ಲೇ ಎಚ್ಚರಿಸಿದ್ದೆ: ಕೊಡಗಿನಲ್ಲಿ ಭೀಕರ ಮಳೆಯಿಂದ ಅನಾಹುತ ಸಂಭವಿಸಬಹುದೆಂದು 1994ರಲ್ಲೇ ಸರ್ಕಾರಕ್ಕೆ ವರದಿ ನೀಡಿದ್ದೆ. ಆದರೆ, ಯಾವುದೇ ಸರ್ಕಾರ ಬಂದರೂ ಒಂದು ಪುಟಗಳನ್ನು ತಿರುವಿ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅರಸು ಅವರಂಥ ರಾಜಕಾರಣಿ ಬೇಕು: ದೇವರಾಜ ಅರಸು ಅವರಂಥ ರಾಜಕಾರಣಿಗಳು ಬೇಕು. ಅವರಷ್ಟು ಪರಿಸರ ಪ್ರಜ್ಞೆ ಹೊಂದಿದ್ದ ಮುಖ್ಯಮಂತ್ರಿಯನ್ನು ನೋಡಿಲ್ಲ. ನಾನು ಹುಣಸೂರಿನಲ್ಲಿ ಅರಣ್ಯಾಧಿಕಾರಿಯಾಗಿದ್ದಾಗ `ವೃಕ್ಷ ಸಂರಕ್ಷಣಾ ಕಾಯ್ದೆ’ ಜಾರಿಗೆ ತಂದರು. ಹಾಗಾಗಿ ಅರಸು ಅವರಂಥ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು ಎಂದರು. ಹಾ.ಮಾ.ನಾ. ಪ್ರತಿಷ್ಠಾನದ ಕಾರ್ಯದರ್ಶಿ ಪೆÇ್ರ.ಪಿ.ವೆಂಕಟರಾಮಯ್ಯ, ಕೋಶಾಧ್ಯಕ್ಷ ಡಾ.ಕೆ. ಮಹದೇವ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಎನ್.ತಳವಾರ್ ಉಪಸ್ಥಿತರಿದ್ದರು.

Translate »