ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ಕೊಟ್ಟಿಲ್ಲ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಮತ
ಮೈಸೂರು

ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ಕೊಟ್ಟಿಲ್ಲ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಮತ

May 28, 2018

ಮೈಸೂರು: ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯೇ ತಾಜಾ ನಿದರ್ಶನ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಂವಹನ ಪ್ರಕಾಶನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದೇವರಾಜು ಪಿ.ಚಿಕ್ಕಹಳ್ಳಿ ಅವರ `ಜಾತಿಯಿಲ್ಲದ ಜ್ಯೋತಿ’ ಮತ್ತು `ವಚನ ದೀವಿಗೆ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಣತೆಯಿಂದ ಹೊರಹೊಮ್ಮುವ ಬೆಳಕಿನ ಹಿಂದೆ ಒಂದು ಸಂಯೋಜಿತ ಕ್ರಿಯೆ ಅಡಕವಾಗಿದೆ. ಹಣತೆ, ಬತ್ತಿ ಹಾಗೂ ಎಣ್ಣೆ ಈ ಮೂರು ಸಂಯೋಜನೆಗೊಂಡು ನಡೆಯುವ ಕ್ರಿಯೆಯಿಂದ ಬೆಳಕು ಮೂಡುತ್ತದೆ. ಅದೇ ರೀತಿ ಲೇಖಕರು ತಮ್ಮ ಎರಡೂ ಕೃತಿಗಳಲ್ಲೂ ಹಣತೆಯನ್ನು ಕೇಂದ್ರೀಕರಿಸಿಕೊಂಡು ಸಮಾಜದ ಸಂಯೋಜನೆಯ ಮಹತ್ವವನ್ನು ಕಣ್ಮುಂದೆ ತರುವ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ನಮ್ಮ ನಾಡಿನ ಕನ್ನಡ ಪ್ರಜ್ಞೆ ಸಂಯೋಜನೆಗೆ ಆದ್ಯತೆ ನೀಡಿದ್ದು, ಎಂದಿಗೂ ಏಕಮೇವ ಅದ್ವಿತೀಯಕ್ಕೆ ಉತ್ತೇಜನ ನೀಡಿಲ್ಲ. ಅಂತೆಯೇ ನಮ್ಮದೇ ಅಧಿಕಾರ ಎಂದವರಿಗೆ ಚುನಾವಣೆಯಲ್ಲಿ ಮಣೆ ಹಾಕದೇ ಮತದಾರರು ಸಂಯೋಜಿತ ಆಡಳಿತ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ ಎಂದು ವಿಶ್ಲೇಷಿಸಿದರು.

ಸೂರ್ಯನ ಅಹಂ ಅಡಗಿಸಿದ ಹಣತೆ: ರವೀಂದ್ರನಾಥ್ ಠಾಗೋರ್ ತಮ್ಮ ಕಥೆಯೊಂದರಲ್ಲಿ ಹಣತೆ ಮೂಲಕ ಎಂತಹ ಘನವಾದ ವ್ಯಕ್ತಿತ್ವ ಹೊಂದಿರಲಿ ಇಲ್ಲವೇ ಸಣ್ಣವರೇ ಆಗಿರಲಿ ನನ್ನಿಂದಲೇ ಎಲ್ಲಾ ಎಂಬ ಅಹಂಕಾರ ಇರಬಾರದೆಂಬ ಸಂದೇಶ ರವಾನಿಸಿದ್ದಾರೆ. ಆ ಕಥಾವಸ್ತು ನೋಡುವುದಾದರೆ, ಒಮ್ಮೆ ಸೂರ್ಯ ತಾನು ಮುಳುಗುವ ವೇಳೆ ನಾನಿಲ್ಲದೆ ಈ ಜಗತ್ತಿಗೆ ಬೆಳಕು ನೀಡುವವರು ಯಾರೂ ಇಲ್ಲ ಎಂದು ಬೀಗುತ್ತಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಣತೆಯೊಂದು, ನಿನ್ನಷ್ಟು ಬೆಳಕು ನೀಡಲಾಗದಿದ್ದರೂ ನಾನು ಇರುವ ಜಾಗದಲ್ಲಿ ಒಂದಿಷ್ಟು ಬೆಳಕು ನೀಡಬಲ್ಲೆ ಎಂದು ವಿನಯದಿಂದಲೇ ಪ್ರತ್ಯುತ್ತರ ನೀಡುತ್ತದೆ. ಇಂತಹ ಕಥೆಯೊಂದರ ಮೂಲಕ ಠಾಗೋರರು ಅಹಂ ಒಳ್ಳೆಯದಲ್ಲ ಎಂಬ ಸಂದೇಶ ಸಾರಿದ್ದಾರೆ ಎಂದು ಪ್ರೊ.ಮೊರಬದ ಮಲ್ಲಿಕಾರ್ಜುನ ವಿವರಿಸಿದರು.

ವಚನದ ಬಗ್ಗೆ ಬರೆಯಬೇಕೆಂದರೆ, ಭಾವನೆ, ಬದುಕು ಮತ್ತು ಭಾಷೆಯ ಬಗ್ಗೆ ಬದ್ಧತೆ ಇರಬೇಕು. ಬರವಣ ಗೆಯಲ್ಲಿ ಬದುಕಿನ ಬಗ್ಗೆ ಭಾವಸ್ಪರ್ಶ ಹೊಮ್ಮಿಸುವುದು ಅಗತ್ಯ. ಆದರೆ ಇಂದು ಎಲ್ಲಾ ಬಗೆಯ ಭಾವಸ್ಪರ್ಶ ಕಳೆದುಕೊಳ್ಳುವತ್ತ ಸಮಾಜ ಸಾಗುತ್ತಿದೆ ಎಂದು ವಿಷಾದಿಸಿದರು.

`ಜಾತಿಯಿಲ್ಲದ ಜ್ಯೋತಿ’ ಕೃತಿ ಕುರಿತು ಮಾತನಾಡಿದ ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್, ಈ ಕೃತಿಯಲ್ಲಿ 70 ಕವಿತೆಗಳನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ ಎಂದ ಅವರು, ಜಗತ್ತಿನ ಅನೇಕ ಶ್ರೇಷ್ಠ ಬರಹಗಾರರು ತಮ್ಮ ಸಾಹಿತ್ಯ ಕೃಷಿಯಲ್ಲಿ ಕಾವ್ಯ ಪ್ರಕಾರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದು, ಅಂದರೆ `ಕಾವ್ಯ’ ಪರಿಣಾಮಕಾರಿ ಮಾಧ್ಯಮ. ನಮ್ಮ ಹೊಸತಲೆಮಾರಿನ ಬರಹಗಾರರಲ್ಲಿ ಬಹುತೇಕರು ಕಾವ್ಯ ಪ್ರಕಾರವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಪೈಕಿಯಲ್ಲಿ ಕಾವ್ಯವನ್ನು ಅರಳಿಸುವುದಕ್ಕಿಂತ ನರಳಿಸಿದ್ದೇ ಹೆಚ್ಚು. ಹೀಗಾಗಿ ಹೊಸ ತಲೆಮಾರಿನ ಬರಹಗಾರರಿಗೆ ಹಿರಿಯರಿಂದ ಮಾರ್ಗದರ್ಶನ ನೀಡುವಂತಹ ವೇದಿಕೆಯ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

`ವಚನ ದೀವಿಗೆ’ ಕೃತಿ ಕುರಿತು ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಮಾತನಾಡಿದರು. ಅಖಿಲ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷ ಡಿ.ಎನ್.ಲೋಕಪ್ಪ, ಹಿರಿಯ ಸಾಹಿತಿ ಎ.ಹೇಮಗಂಗಾ, ಕೃತಿಗಳ ಕರ್ತೃ ದೇವರಾಜು ಪಿ.ಚಿಕ್ಕಹಳ್ಳಿ ಮತ್ತಿತರರು ಹಾಜರಿದ್ದರು.

Translate »