ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ
ಮೈಸೂರು

ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ

May 28, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿರುವಂತೆ ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆ ಬಾಕಿ ಉಳಿದಿರುವ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ತಾವು ಸಿಎಂ ಆದ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್‍ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಮಾಡಿದ್ದರೂ ರೈತರ ಸಾಲ ಮನ್ನಾ ಕುರಿತು ಉಡಾಫೆಯಾಗಿ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಹೆಚ್.ಡಿ.ಕುಮಾರಸ್ವಾಮಿ ವಚನಭ್ರಷ್ಟರಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಂದ್‍ಗೆ ಕರೆ ನೀಡಿದ್ದಾರೆ ಎಂದು ಹೇಳಿದರು.

ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಭರವಸೆ ಹಿನ್ನೆಲೆಯಲ್ಲಿ ಈಗಲಾದರೂ ಸಾಲ ಮನ್ನಾ ಆಗುತ್ತದೆಂದು ಅನ್ನದಾತರು ಭಾವಿಸಿದ್ದರು. ಆದರೆ ಮುಖ್ಯಮಂತ್ರಿಗಳು ತಾವು ನುಡಿದ ಮಾತನ್ನೇ ಮರೆತ್ತಿದ್ದಾರೆ ಎಂದು ಟೀಕಿಸಿದರು.

ಬಿ.ಎಸ್.ಯಡಿಯೂರಪ್ಪ ಮೂರು ದಿನಗಳು ಮಾತ್ರ ಮುಖ್ಯಮಂತ್ರಿಯಾಗಿದ್ದರೂ ರೈತರ ಸಾಲ ಮನ್ನಾ ಮಾಡುವ ನಿಲುವು ತಾಳಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಅಪವಿತ್ರ ಮೈತ್ರಿ ಸರ್ಕಾರದ ನೇತಾರರಾದ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯದೇ ವಚನ ಭ್ರಷ್ಟರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಹಿತಕಾಯಲು ಬಿಜೆಪಿ ಬಂದ್‍ಗೆ ಮುಂದಾಗಿದ್ದು, ವಿರೋಧ ಪಕ್ಷವಾಗಿ ಸರ್ಕಾರದ ಮೇಲೆ ಒತ್ತಡ ತರುವುದು ಬಿಜೆಪಿ ಕರ್ತವ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗಾಂಧಿ ಚೌಕದಲ್ಲಿ ಪ್ರತಿಭಟನೆ: ರಾಜ್ಯ ಬಂದ್ ಕರೆ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಸಾರ್ವಜನಿಕರು ಸೇರಿದಂತೆ ಎಲ್ಲಾ ವಲಯದಿಂದಲೂ ಬೆಂಬಲ ನೀಡುವಂತೆ ಮನವಿ ಮಾಡಿದ ಅವರು, ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮೈಸೂರಿನ ಜನತೆ ಬಂದ್‍ಗೆ ಸಹಕಾರ ನೀಡಬೇಕು. ವಾಣ ಜ್ಯೋದ್ಯಮಿಗಳು, ಅಂಗಡಿ-ಮುಂಗಟ್ಟುಗಳ ಮಾಲೀಕರು, ಖಾಸಗಿ ಬಸ್ ಮಾಲೀಕರು, ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರದ ಮಾಲೀಕರು ಸೇರಿದಂತೆ ಸರ್ವರೂ ಬಂದ್‍ಗೆ ಬೆಂಬಲ ನೀಡಬೇಕೆಂದು ಅವರು ಕೋರಿದರು.

ಬಂದ್ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸೋಮವಾರ ಬೆಳಿಗ್ಗೆ 11.30ಕ್ಕೆ ಮೈಸೂರು ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಬಿಜೆಪಿ ಮುಖಂಡರಾದ ಮೈ.ಪು.ರಾಜೇಶ್, ಹರ್ಷ, ಮಹೇಶ್ ರಾಜ್‍ಅರಸ್, ಹೇಮನಂದೀಶ್ ಗೋಷ್ಠಿಯಲ್ಲಿದ್ದರು.

Translate »