ವಿಜಯಶ್ರೀಪುರ ನಿವಾಸಿಗಳ ಸಮಸ್ಯೆಗೆ ಸೂಕ್ತ ಕಾನೂನಾತ್ಮಕ ಪರಿಹಾರ
ಮೈಸೂರು

ವಿಜಯಶ್ರೀಪುರ ನಿವಾಸಿಗಳ ಸಮಸ್ಯೆಗೆ ಸೂಕ್ತ ಕಾನೂನಾತ್ಮಕ ಪರಿಹಾರ

September 19, 2018

ಬೆಂಗಳೂರು: ಮೈಸೂರಿನ ವಿಜಯಶ್ರೀಪುರ ಬಡಾವಣೆ ನಿವಾಸಿಗಳ ವಿವಾದ ಸಂಬಂಧ ವಸ್ತು ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದು, ನಿವಾಸಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ.

ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆ ಯಲ್ಲಿರುವ ಖನಿಜ ಭವನದಲ್ಲಿ ವಿಜಯಶ್ರೀಪುರ ಬಡಾವಣೆ ವಿವಾದ ಸಂಬಂಧಿತ ಸಭೆ ನಡೆಸಿದ ಅವರು, ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವ ಕಾಂತರಾಜೇ ಅರಸ್ ಹಾಗೂ ಅವರ ಪರ ವಕೀಲರೊಂದಿಗೆ ಮಾತನಾಡಿ, ಮೊಕದ್ದಮೆ ವಾಪಸ್ಸು ತೆಗೆದುಕೊಳ್ಳುವಂತೆ ಮನವರಿಕೆ ಮಾಡಿಕೊಡುತ್ತೇವೆ. ಒಟ್ಟಾರೆ ನಿಮಗೆ ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿಜಯಶ್ರೀಪುರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಚದುರಂಗ ಕಾಂತರಾಜೇ ಅರಸ್ ಅವರನ್ನು ಕರೆಸಿ, ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿರುವ ಮುಡಾ ವಿರುದ್ಧದ ಕೇಸ್ ವಾಪಸ್ ಪಡೆದರೆ, ನಂತರದಲ್ಲಿ ಯೋಜನೆ ರೂಪಿಸಿ, ಅದನ್ನು ಕ್ಯಾಬಿನೆಟ್‍ನಲ್ಲಿಟ್ಟು, ವಿಜಯಶ್ರೀಪುರ ಬಡಾವಣೆಯಲ್ಲಿರುವ ನಿವೇಶನಗಳನ್ನು ಸಕ್ರಮಗೊಳಿಸುವ ಪ್ರಯತ್ನ ಮಾಡುತ್ತೇವೆಂದು ತಿಳಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾಂತ ರಾಜೇಅರಸ್ ಅವರು, ಸಾರ್ವಜನಿಕರ ಒಳಿತಿನ ದೃಷ್ಟಿಯಿಂದ ಕೈಗೊಳ್ಳುವ ಕ್ರಮಕ್ಕೆ ತಮ್ಮ ದೇನು ತಕರಾರಿಲ್ಲ. ಈ ಸಂಬಂಧ ತಮ್ಮ ವಕೀಲರೊಂದಿಗೆ ಮಾತನಾಡುತ್ತೇನೆಂದು ತಿಳಿಸಿದ್ದಾರೆ ಎನ್ನಲಾಗಿದೆ. ವಿಜಯಶ್ರೀಪುರ ವಿವಾದ ಬಗೆ ಹರಿಯುವ ನಿಟ್ಟಿನಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದಾಗಿದೆ.

ಕಾನೂನಾತ್ಮಕ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕಾಂತರಾಜೇ ಅರಸ್ ಅವರ ಮನವೊಲಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಬಡಾವಣೆ ಸಂಬಂಧಿತ ವಸ್ತುಸ್ಥಿತಿಯ ಬಗ್ಗೆ ದಾಖಲೆ ಸಮೇತ ನ್ಯಾಯಾಲಯದ ಗಮನಕ್ಕೆ ತರುವುದರೊಂದಿಗೆ ಕಾನೂನಾತ್ಮಕ ನಡೆಯ ಬಗ್ಗೆಯೂ ಗಮನ ಹರಿಸುವಂತೆ ನಗರಾಭಿವೃದ್ಧಿ ಹಾಗೂ ರೆವಿನ್ಯೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಂದ್ರ, ನಗರಾಭಿವೃದ್ಧಿ ಕಾರ್ಯದರ್ಶಿ ಅಂಜು ಫರ್ವೇಜ್, ಕಂದಾಯ ಇಲಾಖೆ ಕಾರ್ಯದರ್ಶಿ ರಾಜ ಕುಮಾರ್‍ಖತ್ರಿ, ಮೈಸೂರು ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್, ಮುಡಾ ಆಯುಕ್ತ ಪಿ.ಎಸ್. ಕಾಂತರಾಜು, ನಗರ ಯೋಜಕ ಸದಸ್ಯ ಬಿ.ಎನ್. ಗಿರೀಶ್, ಅಧೀಕ್ಷಕ ಇಂಜಿನಿಯರ್ ಬಿ.ಕೆ. ಸುರೇಶ್‍ಬಾಬು, ತಹಸೀಲ್ದಾರ್ ಟಿ.ರಮೇಶ್ ಬಾಬು, ವಿಜಯಶ್ರೀಪುರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ರಂಗನಾಥ್ ವಾಸುದೇವಮೂರ್ತಿ ಹಾಗೂ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ.

ಮುಡಾ ಅಭಿವೃದ್ಧಿಪಡಿಸಿದ್ದ ವಿಜಯಶ್ರೀಪುರ ಬಡಾವಣೆ ತೆರವಿಗೆ ನ್ಯಾಯಾಲಯ ಆದೇಶಿಸಿದ್ದು, ಇದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನೂ ತಿರಸ್ಕರಿಸಿದೆ. ಅಲ್ಲದೆ ಕಾಂತರಾಜೇಅರಸ್ ಮುಡಾ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ದಾಖಲಿಸಿರುವ ನ್ಯಾಯಾಂಗ ನಿಂಧನೆ ಪ್ರಕರಣ ವಿಚಾರಣಾ ಹಂತದಲ್ಲಿದೆ. ಸೆ.20ರಂದು ಮುಂದಿನ ವಿಚಾರಣೆ ನಡೆಯಲಿದೆ. ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ವಿಜಯಶ್ರೀಪುರ ನಿವಾಸಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಕಾಂತರಾಜೇ ಅರಸ್ ಅವರು ಕೇಸ್ ವಾಪಸ್ಸು ತೆಗೆದುಕೊಳ್ಳುವರೇ?. ನಂತರದಲ್ಲಿ ಸರ್ಕಾರದ ಮಟ್ಟದಲ್ಲಿ ಎಲ್ಲಾ ನಿವೇಶನಗಳನ್ನು ಸಕ್ರಮ ಮಾಡಲು ಅವಕಾಶವಿದೆಯೇ? ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಆದರೆ ಸದ್ಯಕ್ಕೆ ಸರ್ಕಾರದ ಮಧ್ಯಪ್ರವೇಶ ವಿಜಯಶ್ರೀಪುರ ನಿವಾಸಿಗಳಲ್ಲಿ ಕೊಂಚ ಸಮಾಧಾನ ತಂದಿದೆ.

Translate »