ಮೈಸೂರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭ
ಮೈಸೂರು

ಮೈಸೂರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭ

September 19, 2018

ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆಯ ಎಲ್ಲಾ 9 ವಲಯ ಕಚೇರಿ ಸರಹದ್ದಿನಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ಭರದಿಂದ ಸಾಗಿದ್ದು, ಇನ್ನೊಂದು ವಾರದಲ್ಲಿ ಕೆಲಸ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ವಲಯ 1ರಲ್ಲಿ ವಲಯಾಧಿಕಾರಿ ಸುನೀಲ್‍ಬಾಬು, 2ರಲ್ಲಿ ಜವರೇಗೌಡ, 3ರಲ್ಲಿ ಶಿವಾನಂದ್‍ಮೂರ್ತಿ, 4ನೇ ವಲಯದಲ್ಲಿ ಪ್ರಿಯದರ್ಶಿನಿ ಮತ್ತು 6ರಲ್ಲಿ ವೀಣಾ, 7ರಲ್ಲಿ ಮಹೇಶ್, 8ರಲ್ಲಿ ಸೋಮಶೇಖರಪ್ಪ ಹಾಗೂ 9ರಲ್ಲಿ ಮುರಳೀಧರ ಅವರು ತಮ್ಮ ಸರಹದ್ದಿನ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚುವ ಕೆಲಸಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಅಕ್ಟೋಬರ್ 10ರಿಂದ 19ರವರೆಗೆ ನಡೆ ಯಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ ಅವರ ಅನುಕೂಲ ಕ್ಕಾಗಿ ರಸ್ತೆಗಳ ಗುಂಡಿ ಮುಚ್ಚುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಮೌಖಿಕ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ಇ-ಟೆಂಡರ್ ಮಾಡಿ ಕಾಮಗಾರಿ ಆರಂಭಿಸಿದ್ದಾರೆ. ಅರಮನೆ ಸುತ್ತಮುತ್ತ ಹಾಗೂ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‍ಗಳಲ್ಲಿನ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಟೆಂಡರ್‌ನಲ್ಲಿ ಕೋಟ್ ಮಾಡಿರುವ ನಿಯಮದಂತೆ ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ, ಆಯಾಯ ವಲಯಾಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಫುಟ್‍ಪಾತ್ ಡಾಂಬರೀಕರಣ: ರಸ್ತೆಗಳ ಗುಂಡಿ ಮುಚ್ಚುವ ಜತೆಗೆ ಫುಟ್‍ಪಾತ್ ಹಾಗೂ ರಾಜಮಾರ್ಗದ ಸರ್ಕಲ್‍ಗಳಿಗೆ ಡಾಂಬರೀಕರಣ ಕೆಲಸವನ್ನು ಆರಂಭಿಸಲಾಗಿದೆ. ಅರಮನೆ ಸುತ್ತಲಿನ ಫುಟ್‍ಪಾತ್ ರಿಪೇರಿ ಹಾಗೂ ಕೆಲವೆಡೆ ಪಾದಚಾರಿ ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣ, ಕೆ.ಆರ್.ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ಹಳೇ ಆರ್‍ಎಂಸಿ ವೃತ್ತ, ಹೈವೇ ಸರ್ಕಲ್ ಹಾಗೂ ಎಲ್‍ಐಸಿ ಸರ್ಕಲ್‍ಗಳಲ್ಲಿ ಡಾಂಬರೀಕರಣ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗಿದೆ.

ರಾಜಮಾರ್ಗದ ಎರಡೂ ಕಡೆಗಳಲ್ಲೂ ಫುಟ್‍ಪಾತ್‍ಗಳು, ಚರಂಡಿಗಳ ರಿಪೇರಿ ಕೆಲಸವನ್ನೂ ಆರಂಭಿಸಿದ್ದು, ಜಯಚಾಮರಾಜ ಒಡೆಯರ್ ಸರ್ಕಲ್‍ನಿಂದ ದೊಡ್ಡ ಗಡಿಯಾರದವರೆಗೂ ಆಸ್ಪಾಲ್ಟಿಂಗ್ ಕೆಲಸವನ್ನೂ ಮಾಡಲಾಗುತ್ತಿದೆ. ಡಾಂಬರೀಕರಣ ಹಾಗೂ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಅತ್ಯಾಧುನಿಕ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮಿನಿ ಮಿಕ್ಸರ್, ಬಾಬ್‍ಕೆಟ್(ಡೋಜಿಂಗ್, ಡೆಬ್ರಿಸ್ ತೆರವು, ಸ್ವಚ್ಛಗೊಳಿಸುವುದೂ ಸೇರಿದಂತೆ ಬಹುಪಯೋಗಿ ಉಪಕರಣ)ಯಂತ್ರಗಳನ್ನು ಗುತ್ತಿಗೆದಾರರು ಬಳಸುತ್ತಿದ್ದಾರೆ.

ಸೌಂದರ್ಯೀಕರಣ: ದಸರೆಗೆ ಮತ್ತಷ್ಟು ಮೆರಗು ತರಲು ರಸ್ತೆ, ಸರ್ಕಲ್‍ಗಳಿಗೆ ಪೇಂಟ್ ಮಾಡುವ ಕೆಲಸವೂ ಆರಂಭವಾಗಿದೆ. ಕಾಂಪೌಂಡ್, ಗೋಡೆಗಳು, ಕರ್ಬ್‍ಸ್ಟೋನ್ ಗಳಿಗೂ ಬಣ್ಣ ಬಳಿಯುವ ಕೆಲಸ ತೀವ್ರಗತಿಯಲ್ಲಿ ನಡೆಯುತ್ತಿದೆ. ಈಗಾಗಲೇ ರಸ್ತೆಗಳ ವಿಭಜಕಗಳಿಗೆ ಹೂವಿನ ಗಿಡಗಳನ್ನು ನೆಡುವ ಕಾರ್ಯ ಆರಂಭವಾಗಿದ್ದು, ದಸರಾ ಸಂಬಂಧದ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಸೆಪ್ಟೆಂಬರ್ 30ರೊಳಗಾಗಿ ಪೂರ್ಣ ಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸೆ.30ರೊಳಗೆ ದಸರಾ ಕಾಮಗಾರಿ ಪೂರ್ಣ

ಮೈಸೂರು: ಸೆಪ್ಟೆಂಬರ್ 30ರೊಳಗೆ ದಸರಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಕಮಿಷ್ನರ್ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಮೌಖಿಕ ನಿರ್ದೇ ಶನದ ಮೇರೆಗೆ ಮೈಸೂರು ನಗರದಾದ್ಯಂತ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕೆಲಸಗಳು ಸಮರೋಪಾದಿ ಯಲ್ಲಿ ನಡೆಯುತ್ತಿದ್ದು, ಗುಣಮಟ್ಟ ಕಾಯ್ದುಕೊಂಡು ಸೆಪ್ಟೆಂಬರ್ 30ರೊಳಗೆ ಕೆಲಸ ಮುಕ್ತಾಯಗೊಳಿಸುವಂತೆ ಎಲ್ಲಾ 9 ವಲಯಾಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಬರುವ ಸರ್ಕಲ್‍ಗಳ (ಕಾಂಕ್ರಿಟ್ ಹಾಕದಿರುವ) ಡಾಂಬರೀಕರಣ, ಫುಟ್‍ಪಾತ್, ಚರಂಡಿಗಳ ರಿಪೇರಿ, ಸೌಂದರ್ಯಿಕರಣ, ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭರದಿಂದ ಕಾಮಗಾರಿ ನಡೆಸುತ್ತಿದ್ದು, ದಸರಾ ಮಹೋತ್ಸವ ಆರಂಭವಾಗುವುದ ರೊಳಗಾಗಿ ಸಂಪೂರ್ಣ ಸಜ್ಜುಗೊಳಿಸುವುದು ನಮ್ಮ ಉದ್ದೇಶ ವಾಗಿದೆ ಎಂದು ಜಗದೀಶ್ ತಿಳಿಸಿದರು.

ಈಗಾಗಲೇ ಅರಮನೆ ಸುತ್ತಲಿನ ಫುಟ್‍ಪಾತ್‍ಗಳು, ಕಲ್ಲಿನ ಬ್ಯಾರಿಕೇಡ್‍ಗಳ ರಿಪೇರಿ ಕೆಲಸ ಮುಗಿದಿದ್ದು, ಜಂಬೂಸವಾರಿ ಮಾರ್ಗದುದ್ದಕ್ಕೂ ಸರ್ಕಲ್‍ಗಳ ಆಸ್ಪಾಲ್ಟಿಂಗ್ ಸೌಂದರ್ಯೀಕರಣ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜ್, ಗುಂಡಿಗಳ ಆಳಕ್ಕನುಸಾರ ಜಲ್ಲಿ, ಮಿಕ್ಸರ್‍ಗಳನ್ನು ತುಂಬಿ ಮಳೆ ಬಿದ್ದರೂ ಹಾಳಾಗದಂತೆ ಶೇಕಡಾ 5ರಷ್ಟು ಡಾಂಬರ್ ಬಳಸಿ ಕೆಲಸ ಮಾಡುತ್ತಿರುವುದರಿಂದ ಸುದೀರ್ಘ ಬಾಳಿಕೆ ಬರುತ್ತದೆ ಎಂದರು. ತೀವ್ರಗತಿಯಿಂದ ಕಾಮಗಾರಿ ನಡೆಯುತ್ತಿದೆಯಾ ದರೂ ಗುಣಮಟ್ಟ ಹಾಳಾಗದಂತೆ ಎಚ್ಚರ ವಹಿಸಲಾಗಿದೆ. ಎಲ್ಲಾ ವಲಯಾಧಿ ಕಾರಿಗಳೂ ಸ್ಥಳದಲ್ಲಿದ್ದು, ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ನಾಗರಾಜ್ ತಿಳಿಸಿದರು.

Translate »