ಭಿನ್ನಮತ ಕೇವಲ ಮಾಧ್ಯಮ ಸೃಷ್ಟಿ
ಮೈಸೂರು

ಭಿನ್ನಮತ ಕೇವಲ ಮಾಧ್ಯಮ ಸೃಷ್ಟಿ

September 19, 2018

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಮತವಿಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿಧಾನಸೌಧ ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಕೇವಲ ಮಾಧ್ಯಮಗಳು ಈ ರೀತಿ ಭಿನ್ನಮತ ಆಗಿದೆ ಎಂದು ಬಿಂಬಿಸುತ್ತಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಸುದ್ದಿ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಲವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ಸತ್ಯ. ಆದರೆ ಯಾರೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರೂ ಸಚಿವ ಸ್ಥಾನದ ಬಗ್ಗೆ ವಿಷಯ ಪ್ರಸ್ತಾಪಿಸಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ನಡೆಯುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಮ್ಮ ಪಕ್ಷದವರು ಶಿಸ್ತಿನ ಸಿಪಾಯಿಗಳು. ಪಕ್ಷದ ನಿಲುವಿಗೆ ಅವರೆಲ್ಲರೂ ಬದ್ಧರಾಗಿದ್ದಾರೆ. ಸಮಸ್ಯೆಗಳೇ ಇಲ್ಲ ಅಂದಾಗ ಬಗೆಹರಿಸುವ ಪ್ರಶ್ನೆ ಎಲ್ಲಿಂದ ಬಂತು ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯವರು ಲಜ್ಜೆಗೆಟ್ಟು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ಸತ್ಯ. ನಮ್ಮ ಶಾಸಕರಿಗೆ ಆಮಿಷ ಶಾಸಕರೇ ಹೇಳಿಕೊಂಡಿದ್ದಾರೆ. ಜಾರಕಿಹೊಳಿ ಸಹೋದರರು ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದು ತಿಳಿಸಿದರು. ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಸದೇ ಇರುವುದರಲ್ಲಿ ಏನು ತಪ್ಪು.

ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಖಾಸಗಿ ಕಾರು ಬಳಸುತ್ತಾರೆ. ಅದರಲ್ಲಿ ಏನೂ ತಪ್ಪಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮೇಲ್ಮನೆ ಚುನಾವಣೆ ಆದ ಬಳಿಕ ಸಂಪುಟ ವಿಸ್ತರಣೆ ಆಗಲಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು. ನಾಳೆ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಈ ಮೊದಲು ಸೆಪ್ಟೆಂಬರ್ 15-16ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದೆವು. ಆದರೆ ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಕಾರಣ ಸಚಿವ ಸಂಪುಟ ವಿಸ್ತರಣೆ ಮುಂದೆ ಹೋಗಿದೆ. ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ತಿಳಿಸಿದರು. ನಮ್ಮ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಎಲ್ಲರೂ ಆಕಾಂಕ್ಷಿಗಳೇ. ಜತೆಗೆ ರಮೇಶ ಜಾರಕಿಹೊಳಿ ಸಚಿವರಾದ ಕಾರಣ ಶಾಸಕರು ತಮ್ಮ ಕ್ಷೇತ್ರದ ಕೆಲಸಗಳಿಗೆ ಅವರನ್ನು ಭೇಟಿ ಮಾಡುವುದು ಸಹಜ ಪ್ರಕ್ರಿಯೆ.

ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು. ಬಿಜೆಪಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ನಡೆಸುತ್ತಿದೆ. ಲಜ್ಜೆಗೆಟ್ಟು ಅವರು ಸರ್ಕಾರ ಪತನ ಗೊಳಿಸಲು ಯತ್ನಿಸುತ್ತಿದ್ದಾರೆ. ಅವರು ಹಗಲು ಕನಸು ಕಾಣುತ್ತಿದ್ದಾರೆ. ಈ ಮುಂಚೆನೂ ಅವರೂ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿದ್ದರು. ಈಗಲೂ ಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಯಶಸ್ಸು ಕಾಣುವುದಿಲ್ಲ ಎಂದು ತಿಳಿಸಿದರು.

Translate »