ಜಾರಕಿಹೊಳಿ ಸಹೋದರರ ಅಸಮಾಧಾನ ನಿವಾರಣೆ
ಮೈಸೂರು

ಜಾರಕಿಹೊಳಿ ಸಹೋದರರ ಅಸಮಾಧಾನ ನಿವಾರಣೆ

September 19, 2018

ಬೆಂಗಳೂರು:  ಬೆಳಗಾವಿ ದೊರೆಗಳು (ಜಾರಕಿಹೊಳಿ ಸಹೋದರರು) ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಇಂದು ಭೇಟಿ ಮಾಡಿ, ಚರ್ಚೆ ನಡೆಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವುದಲ್ಲದೆ, ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದ ಪಂಚತಾರಾ ಹೊಟೇಲ್ ಒಂದರಲ್ಲಿ ಗಣಿ ಉದ್ಯಮಿ ಹಾಗೂ ಶಾಸಕ ನಾಗೇಂದ್ರ ಜೊತೆಗೂಡಿ ಮುಖ್ಯಮಂತ್ರಿಯವರ ಜೊತೆ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿ, ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲವು ಬೇಡಿಕೆಗಳಿಗೆ ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ತಂದು ನಮ್ಮ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿಕೊಂಡಿದ್ದಾರೆ. ಬಹುತೇಕ ಬೇಡಿಕೆಗಳಿಗೆ ಅಸ್ತು ಎಂದಿರುವ ಮುಖ್ಯಮಂತ್ರಿಯವರು, ತಾವು ನಿಮ್ಮ ಜೊತೆ ಇರುವುದಾಗಿಯೂ ಹೇಳಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಂಡಾಯ ನಾಯಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಮ್ಮ ಸಮಸ್ಯೆಗಳು ಬಗೆಹರಿದಿವೆ. ನಮ್ಮ ಸಮುದಾಯದಲ್ಲಿ ಒಬ್ಬರು ಜೊತೆಗೆ ಬಳ್ಳಾರಿ ಜಿಲ್ಲೆಗೆ ಸಂಪುಟದಲ್ಲಿ ಒಂದು ಪ್ರಾತಿನಿಧ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದೇನೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ನಿಮ್ಮ ಪಕ್ಷದ ವರಿಷ್ಠರೊಟ್ಟಿಗೆ ಸಮಾಲೋಚನೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೆಲಸಗಳು ಆಗ್ತಿರಲಿಲ್ಲ. ಅಂತಹ ಕೆಲಸಗಳನ್ನು ತಕ್ಷಣವೇ ಮಾಡಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಸತೀಶ್ ತಿಳಿಸಿದರು.

ಬೆಳಗಾವಿ ರಾಜಕಾರಣದ ಬಗ್ಗೆ ಅಸಮಾಧಾನ ಇತ್ತು. ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ನಾಳೆ ನಾನು ದೆಹಲಿಗೆ ತೆರಳುತ್ತಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ನಮ್ಮ ಜಿಲ್ಲಾ ರಾಜಕೀಯವನ್ನು ನಾವು ಮಾಡಿಕೊಳ್ಳುತ್ತೇವೆ, ಬೇರೆಯವರು ಹಸ್ತಕ್ಷೇಪ ಮಾಡುವುದು ಬೇಕಾಗಿಲ್ಲ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ. ನಾಳೆ ವರಿಷ್ಠರ ಭೇಟಿ ಸಂದರ್ಭದಲ್ಲೂ ಎಲ್ಲವನ್ನು ವಿವರಿಸುತ್ತೇನೆ.

Translate »