ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಮತ್ಸ್ಯ ಮೇಳ
ಮೈಸೂರು

ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಮತ್ಸ್ಯ ಮೇಳ

September 19, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದ ವೇಳೆ ಇದೇ ಮೊದಲ ಬಾರಿಗೆ ಮತ್ಸ್ಯಲೋಕ ಅನಾವರಣಗೊಳ್ಳಲಿದೆ. ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆಯಲಿರುವ ರೈತ ದಸರಾ ಹಾಗೂ ಕೃಷಿ ಮೇಳದ ಒಂದು ಅಂಗವಾಗಿ ಮತ್ಸ್ಯಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ವಿವಿಧ ತಳಿ ಹಾಗೂ ನಾನಾ ಬಣ್ಣದ ಮೀನುಗಳನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಒಂದೇ ಸೂರಿನಡಿ ಬಗೆ ಬಗೆಯ ಮತ್ಸ್ಯ (ಮೀನು)ಗಳ ಸೌಂದರ್ಯ, ವಯ್ಯಾರವನ್ನು ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಮೀನು ಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸುತ್ತಿದೆ. ಇದಕ್ಕಾಗಿ ದೇಶ ವಿದೇಶಗಳ ಅಪರೂಪದ ಮೀನು ಗಳು, ನಾನಾ ಬಣ್ಣದ ಅಲಂಕಾರಿಕ ಮೀನು ಗಳನ್ನು ಮೇಳದಲ್ಲಿ ಪ್ರದರ್ಶಿಸಲು ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿಯೇ ಈ ಮತ್ಸ್ಯಮೇಳವನ್ನು ಆಯೋಜಿಸಲಾಗುತ್ತಿದೆ. ಅ. 12 ರಿಂದ ಮೂರು ದಿನಗಳ ಕಾಲ ಜೆ.ಕೆ. ಮೈದಾನದಲ್ಲಿ ಮತ್ಸ್ಯಮೇಳ ನಡೆಯಲಿದೆ. ಇದುವರೆಗೂ ಈ ಭಾಗದ ಜನರು ನೋಡಲು ಸಾಧ್ಯವಾಗದೆ ಇರುವ ಅಪರೂಪದ ಮೀನು ಳ ಪ್ರದರ್ಶನ ಈ ಮೇಳದಲ್ಲಿರಲಿದೆ. ಅಲ್ಲದೆ, ಮನ ಸೆಳೆಯುವ ವಿವಿಧ ಬಣ್ಣದ ಅಲಂಕಾರಿಕ ಮೀನುಗಳ ಪ್ರದರ್ಶನ, ಟನೆಲ್ ಅಕ್ವೇರಿಯಂ ಆಯೋಜನೆ ಮೇಳದ ಆಕರ್ಷಣೆಯಾಗಿದೆ.

ಬದಲಾದ ಕಾಲಮಾನದಲ್ಲಿ ಮೀನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಜ್ಞಾನ ಮತ್ತು ತಾಂತ್ರಿಕತೆ ಗಳ ಕುರಿತು ವಿವರಣೆ ನೀಡುವುದರೊಂದಿಗೆ ಮೀನುಗಾರಿಕೆಗೆ ಬಳಸಲಾಗುವ ಆಹಾರ ಪದಾರ್ಥ ಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯೂ ಮೇಳದಲ್ಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಕೆಲ ವರ್ಷಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಮತ್ಸ್ಯಮೇಳ ಜನಾಕರ್ಷಣೀಯ ಕೇಂದ್ರ ಬಿಂದುವಾಗಿ ಅಪಾರ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೈಸೂರಿನಲ್ಲಿ ನಡೆಯಲಿರುವ ಮತ್ಸ್ಯ ಮೇಳವೂ ನವರಾತ್ರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮುದ ನೀಡಲಿದೆ.

ಟನೆಲ್ ಅಕ್ವೇರಿಯಂ: ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದಯ್ಯ, ಪ್ರವಾಸಿಗರು ಹಾಗೂ ಮತ್ಸ್ಯ ಪ್ರೇಮಿಗಳಿಗೆ ಮನೋರಂಜನೆ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಇದರಿಂದ ಜನರನ್ನು ಆಕರ್ಷಿಸುವುದಕ್ಕೆ ಟನೆಲ್ ಅಕ್ವೇರಿಯಂ ಪ್ರದರ್ಶನವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ವಸ್ತುಪ್ರದರ್ಶನದಲ್ಲಿ ಆಯೋಜಿಸಲು ತೀರ್ಮಾನಿಸಿ ಟೆಂಡರ್ ಕರೆಯಲಾಗಿದೆ. ಕೆಲವರು ಈ ಮಾದರಿಯ ಪ್ರದರ್ಶನ ಆಯೋಜಿಸಲು ಮುಂದೆ ಬಂದಿದ್ದಾರೆ. ಮೇಳದಲ್ಲಿ ಗಾಜಿನ ಗುಹೆ ಮಾದರಿಯ ಟನೆಲ್ ಒಳಗೆ ಜನರು ನಡೆದು ಹೋಗುತ್ತಿದ್ದರೆ ಅವರ ಸುತ್ತಲು ಮೀನುಗಳು ಈಜಾಡುವ ಚಿತ್ತಾಕರ್ಷಕ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

ಅಪರೂಪದ ಮೀನುಗಳ ಪ್ರದರ್ಶನ : ಮೇಳದಲ್ಲಿ ಬಣ್ಣದ ಅಲಂಕಾರಿಕ ಮೀನುಗಳನ್ನು ಒಳಗೊಂಡ 40 ಅಕ್ವೇರಿಯಂಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಅಲ್ಲದೆ ಈ ರೀತಿಯ ಅಲಂಕಾರಿಕ ಮೀನುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಲಂಕಾರಿಕ ಮೀನುಗಳ ಕೃಷಿ ಬಗ್ಗೆಯೂ ವಿವರಣೆ ನೀಡಲಾಗುತ್ತದೆ. ಇದಲ್ಲದೆ ನಮ್ಮ ಭಾಗದಲ್ಲಿ ಎಲ್ಲಿಯೂ ನೋಡಿರದ ಅಪರೂಪದ ಜಾತಿಯ ಮೀನುಗಳ ಪ್ರದರ್ಶನ ಆಯೋಜಿಸಲಾಗುತ್ತಿದೆ. ಸಾಮಾನ್ಯವಾಗಿ ದೇಶ ವಿದೇಶಗಳ ವಿವಿಧ ಭಾಗಗಳಲ್ಲಿರುವ ಮೀನುಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಸೂಕ್ತ ಹಾಗೂ ಸಮರ್ಪಕ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡುವ ಚಿಂತನೆ ನಡೆಸಲಾಗುತ್ತಿದೆ.

ಮಳಿಗೆಗಳು : ಮತ್ಸ್ಯಮೇಳದ ಮತ್ತೊಂದೆಡೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗುತ್ತದೆ. ಈ ಮಳಿಗೆಗಳಲ್ಲಿ ಜಮೀನು ಇಲ್ಲದವರು ಜಲಾಶಯಗಳಲ್ಲಿ ಕೇಜ್ ಕಲ್ಚರ್ ಕೈಗೊಂಡು ಹೇಗೆ ಲಾಭ ಪಡೆಯಬಹುದು ಎಂಬ ವಿವರಣೆ ನೀಡಲಾಗುತ್ತದೆ. ಅಕ್ವಾಫೆÇೀನಿಕ್ಸ್ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳು, ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗಳಿರುತ್ತವೆ. ಒಟ್ಟಾರೆ ಈ ಬಾರಿ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಆಯೋಜಿಸುತ್ತಿರುವ ಮತ್ಸ್ಯ ಮೇಳ ಜನಾಕರ್ಷಣೀಯ ಕೇಂದ್ರವಾಗುವುದು ನಿಶ್ಚಿತವಾಗಿದೆ.

Translate »