ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ
ಮೈಸೂರು

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ

September 7, 2018

ಆತಂಕಕ್ಕೀಡಾಗಿರುವ ನಿವಾಸಿಗಳಿಗೆ ಶಾಸಕ ಎಲ್.ನಾಗೇಂದ್ರ ಅಭಯ
ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವ ರೊಂದಿಗೆ ಚರ್ಚಿಸಿ, ವಿಜಯಶ್ರೀಪುರ ಬಡಾ ವಣೆಯಲ್ಲಿನ ಮನೆಗಳನ್ನು ಉಳಿಸಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ, ಮನೆ ಕಳೆದುಕೊಳ್ಳುವ ಆತಂಕದಲ್ಲಿರುವ ನಿವಾಸಿಗಳಿಗೆ ಇಂದಿಲ್ಲಿ ಅಭಯ ನೀಡಿದ್ದಾರೆ.

ರಾಜ್ಯ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಬಡಾವಣೆಯಲ್ಲಿ ಸಭೆ ನಡೆಸಿ, ಸಮಾಲೋಚಿಸಿದ ಶಾಸಕರು ವಸ್ತುಸ್ಥಿತಿಯ ಮಾಹಿತಿ ಪಡೆದರು.

ಈ ಹಿಂದೆಯೇ ಮುಡಾದಿಂದ ಭೂ ಸ್ವಾಧೀನವಾಗಿರುವುದರಿಂದ ವಿಜಯಶ್ರೀಪುರದ ಸರ್ವೆ ನಂಬರ್ 1ರ 94 ಎಕರೆ ಭೂಮಿ ಸರ್ಕಾರದ್ದು ಎಂಬುದು ಖಾತರಿ ಯಾಗಿದೆಯಲ್ಲದೆ, ಮನೆ ನಿರ್ಮಿಸಿ, ಸುಮಾರು 30 ವರ್ಷಗಳಿಂದ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಮುಡಾದಿಂದಲೇ ನೋಟೀಸ್ ನೀಡಿ 280 ನಿವಾಸಿಗಳಿಂದ ಹಣ ಕಟ್ಟಿಸಿಕೊಂಡು ಸಕ್ರಮಗೊಳಿಸಿರುವ ಆದೇಶ ಪತ್ರಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಮೂರ್ತಿಗಳ ಗಮನ ಸೆಳೆದು ಹಾಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಕಟ್ಟಡಗಳನ್ನು ಮಾನವೀಯ ದೃಷ್ಟಿಯಿಂದ ಉಳಿಸಿಕೊಡಲು ಸರ್ಕಾರ ಪ್ರಯತ್ನಿಸಲಿದೆ ಎಂದು ನಾಗೇಂದ್ರ ಇದೇ ಸಂದರ್ಭ ನಿವಾಸಿಗಳಿಗೆ ಭರವಸೆ ನೀಡಿದರು.

ಯಾವುದೇ ಪರಿಸ್ಥಿತಿ ಬಂದರೂ ಬಡಾವಣೆ ನೆಲಸಮಗೊಳಿಸಲು ಬಿಡುವುದಿಲ್ಲ, ನಿಮ್ಮೊಂದಿಗೆ ಜನಪ್ರತಿನಿಧಿಗಳಾದ ನಾವಿದ್ದೇವೆ. ಸೆಪ್ಟೆಂಬರ್ 11ರಂದು ಮುಖ್ಯ ಮಂತ್ರಿಗಳು ಮೈಸೂರಿಗೆ ಆಗಮಿಸಲಿದ್ದು, ಅಂದು ನಿಮ್ಮನ್ನು ಭೇಟಿ ಮಾಡಿಸಿ ಪರಿಸ್ಥಿತಿ ಬಗ್ಗೆ ವಿವರಿಸುತ್ತೇವೆ. ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗೆ ಪೂರಕ ದಾಖಲೆಗಳನ್ನು ಸರ್ಕಾರಿ ವಕೀ ಲರ ಮೂಲಕ ಸಲ್ಲಿಸಿ ನ್ಯಾಯ ಒದಗಿಸಿ ಕೊಡುವುದಾಗಿಯೂ ಶಾಸಕ ನಾಗೇಂದ್ರ ತಿಳಿಸಿದರು.

ಇಷ್ಟರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರೊಂದಿಗೆ ವಿಜಯಶ್ರೀಪುರ ವಿವಾದ ಸಂಬಂಧವೂ ಚರ್ಚಿಸಿ ಮುಡಾ ಅಧಿಕಾರಿಗಳಿಂದ ಈಗಾಗಲೇ ಕೆಲ ಮನೆಗಳಿಗೆ ನೀಡಿರುವ ದಾಖಲೆ ಪ್ರತಿಗಳೊಂದಿಗೆ ಮಾಹಿತಿ ತರಿಸಿಕೊಂಡು ಸರ್ಕಾರದಲ್ಲಿ ತೀರ್ಮಾನ ಕೈಗೊಂಡು ನ್ಯಾಯಾ ಲಯದಲ್ಲಿ ನಿವಾಸಿಗಳ ಪರ ಹೋರಾ ಡಲು ತಾವು ಸಿದ್ಧ ಎಂದು ಅವರು ಇದೇ ವೇಳೆ ನುಡಿದರು.

ಈ ಹಿಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಕೇವಲ ಆಶ್ವಾಸನೆ ಕೊಟ್ಟು ಸುಮ್ಮನಾದರು. ಆದರೆ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಜಯಶ್ರೀಪುರ ಬಡಾವಣೆ ನಿವಾಸಿಗಳ ಉಳಿಸಲು ಮನಸ್ಸು ಮಾಡುವ ವಿಶ್ವಾಸವಿದೆ. ಯಾರೂ ಆತಂಕಗೊಳ್ಳ ಬೇಕಾಗಿಲ್ಲ ಎಂದು ನಾಗೇಂದ್ರ ಧೈರ್ಯ ತುಂಬಿದರು. ಕಾರ್ಪೋರೇಟರ್ ವೇದಾ ವತಿ, ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ವಿ.ರಂಗನಾಥ್, ಪದಾಧಿಕಾರಿಗಳಾದ ಜವರೇ ಗೌಡ, ಜಗದೀಶ್ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ವಾರ ಪುನರ್ ಪರಿಶೀಲನಾ ಅರ್ಜಿ
ನಮ್ಮ ಮೇಲ್ಮನವಿ ವಜಾಗೊಂಡಿ ರುವುದರಿಂದ ಕೋರ್ಟ್ ಆದೇಶ ಪ್ರತಿ ಸಿಕ್ಕಿದ ನಂತರ ಅಗತ್ಯ ದಾಖಲಾತಿಗಳೊಂದಿಗೆ ರಾಜ್ಯ ಉಚ್ಛ ನ್ಯಾಯಾ ಲಯದಲ್ಲಿ ಪುನರ್‍ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಮೈಸೂರಿನ ವಿಜಯಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ವಿ.ರಂಗನಾಥ ತಿಳಿಸಿದ್ದಾರೆ.

ಶಾಸಕ ಎಲ್.ನಾಗೇಂದ್ರ ಅವರೊಂದಿಗೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ವಕೀಲರೊಂದಿಗೆ ಚರ್ಚಿಸಿ ಸಲಹೆ ಪಡೆದು ಮುಂದಿನ ವಾರ ರಾಜ್ಯ ಹೈಕೋರ್ಟ್ ನಲ್ಲಿ ಪುನರ್ ಪರಿಶೀಲನಾ(Review Petition) ಅರ್ಜಿ ಸಲ್ಲಿಸುತ್ತೇವೆ ಎಂದರು.

ಮುಡಾ ಪರ ವಕೀಲರು ಈಗಾಗಲೇ ಕೆಲವರಿಂದ ಹಣ ಕಟ್ಟಿಸಿಕೊಂಡು ಆಸ್ತಿ ದಾಖಲೆ ನೀಡಿರುವ ಬಗ್ಗೆ ನ್ಯಾಯಾ ಲಯಕ್ಕೆ ಸರಿಯಾದ ದಾಖಲೆ ಒದಗಿಸದ ಕಾರಣ ನಮ್ಮ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿದೆಯೇ ಹೊರತು, ನಾವೆಂದಿಗೂ ಕಾನೂನು ಉಲ್ಲಂಘಿಸಿದವರಲ್ಲ. ರಸ್ತೆ, ನೀರು, ಒಳಚರಂಡಿ, ವಿದ್ಯುತ್ ಸೌಲಭ್ಯಗಳನ್ನು ನಾವೇ ಕಲ್ಪಿಸಿಕೊಂಡು ಸುಮಾರು 30 ವರ್ಷಗಳಿಂದ ವಿಜಯಶ್ರೀಪುರ ಬಡಾವಣೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

2015ರ ಡಿಸೆಂಬರ್ 16ರಂದು ಸುಪ್ರೀಂಕೋರ್ಟ್ ವಿಜಯ ಶ್ರೀಪುರದ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತಾದರೂ, ನಾವು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ವಿವಾದ ಬಗೆಹರಿಸಿ ಆದೇಶ ಹೊರಡಿಸುವಂತೆಯೂ ಹೈಕೋರ್ಟ್‍ಗೆ ನಿರ್ದೇಶನ ನೀಡಲಾಗಿತ್ತು ಎಂದು ಡಾ|| ರಂಗನಾಥ ನುಡಿದರು.

ವಿಜಯಶ್ರೀಪುರ ಬಡಾವಣೆಯು 1899ರಿಂದಲೂ ಸರ್ಕಾರಿ ಸ್ವತ್ತು ಎಂದು ದಾಖಲೆಗಳಲ್ಲಿದೆ. ಜಿಲ್ಲಾಧಿಕಾರಿಗಳೂ `ಬಿ’ ಖರಾಬು (ಸರ್ಕಾರಿ ಭೂಮಿ) ಎಂದೇ ಸರ್ಕಾರಕ್ಕೆ ವರದಿ ಮಾಡಿದ್ದಾರೆ ಎಂಬುದರ ಬಗ್ಗೆಯೂ ನಾವು ನ್ಯಾಯಾ ಲಯದಲ್ಲಿ ವಾದ ಮಂಡಿಸಿದ್ದೆವು. ವಸತಿ ಬಡಾವಣೆ ನಿರ್ಮಿ ಸಲು ಮುಡಾ ಮುಂದಾಗಿರುವುದರಿಂದ ಈಗಾಗಲೇ ಕಟ್ಟಡ ಕಟ್ಟಿ ವಾಸ ಮಾಡುತ್ತಿರುವ ಕಾರಣ ಅವುಗಳನ್ನು ಉಳಿಸಿಕೊಡಿ ಎಂದು ಪ್ರಾರ್ಥಿಸಿದ್ದೇವಾದರೂ ಹೈಕೋರ್ಟ್ ನಮ್ಮ ವಾದ ಪರಿಗಣಿಸಲಿಲ್ಲ ಎಂದು ಡಾ||ರಂಗನಾಥ ನುಡಿದರು.

ವಿಜಯಶ್ರೀಪುರ ನಿವಾಸಿಗಳಲ್ಲಿ ಮಡುಗಟ್ಟಿದ ಆತಂಕ

ಕೆಲದಿನ ಗಳಿಂದ ಸ್ವಲ್ಪ ನಿರಾಳರಾಗಿದ್ದ ಮೈಸೂರಿನ ವಿಜಯಶ್ರೀಪುರ ಬಡಾವಣೆ ನಿವಾಸಿಗಳು ರಾಜ್ಯ ಹೈಕೋರ್ಟ್ ರಿಟ್ ಅರ್ಜಿ ವಜಾಗೊಳಿಸಿದ್ದರಿಂದ ಮತ್ತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆಸ್ತಿ ಉಳಿಸಿಕೊಳ್ಳಲು ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದ ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಬುಧವಾರ ಹೈಕೋರ್ಟ್ ನೀಡಿದ ತೀರ್ಪಿನ ನಂತರ ಮುಂದೇನು ಮಾಡ ಬೇಕೆಂಬ ಗೊಂದಲಕ್ಕೆ ಸಿಲುಕಿದೆ.

ರಾಜ್ಯ ಸರ್ಕಾರದ ನೆರವು ಪಡೆದು ಹೈಕೋರ್ಟ್‍ನಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕುವುದು ಹಾಗೂ ಸುಪ್ರಿಂ ಕೋರ್ಟ್‍ಗೂ ವಾಸ್ತವಾಂಶದ ಬಗ್ಗೆ ಮನ ವರಿಕೆ ಮಾಡಿಕೊಡಲು ನಿವಾಸಿಗಳ ಸಂಘವು ಪ್ರಕ್ರಿಯೆಯಲ್ಲಿ ತೊಡಗಿದೆಯಾದರೂ ನಿವಾಸಿಗಳಲ್ಲಿ ದುಗುಡ ಹೆಚ್ಚಾಗಿದೆ.

ವಿಜಯಶ್ರೀಪುರ ಸರ್ವೆ ನಂ.1ರಲ್ಲಿ ಬರುವ 94.28 ಎಕರೆ ಭೂಮಿಯು ಜಯ ಚಾಮರಾಜೇಂದ್ರ ಒಡೆಯರ್ ಅಳಿಯ ಕೆ.ಬಿ.ರಾಮಚಂದ್ರ ರಾಜೇ ಅರಸ್ ಅವರಿಗೆ ಸೇರಿತ್ತು. ನಂತರ ಈ ಸ್ವತ್ತಿಗೆ ಚದುರಂಗ ಕಾಂತರಾಜ ಅರಸ್, ಅವರ ಸಹೋದರಿ ಯರಾದ ತ್ರಿಪುರ ಸುಂದರಿ ದೇವಿ, ದೀಪಾ ಮಾಲಿನಿ ದೇವಿ ಹಾಗೂ ಕೀರ್ತಿ ಮಾಲಿನಿದೇವಿ ವಾರಸುದಾರರಾದರು.

ರಾಮಚಂದ್ರರಾಜೇ ಅರಸ್ ಅವರು ಈ ಸ್ವತ್ತನ್ನು 5 ಭಾಗಗಳನ್ನಾಗಿ ಮಾಡಿ ತಮ್ಮ ಮಕ್ಕಳಿಗೆಲ್ಲಾ ನೀಡಿ, ಒಂದು ಭಾಗವನ್ನು ತಾವೇ ಉಳಿಸಿಕೊಂಡಿದ್ದರು. ತದ ನಂತರ ಚದುರಂಗ ಕಾಂತರಾಜ ಅರಸ್ ಅವರು ತನ್ನ ಪಾಲಿನ ಆಸ್ತಿಯನ್ನು ತನ್ನ ಮಕ್ಕಳಾದ ದೇವರತ್ ಅರಸ್ ಮತ್ತು ಜಯಲಕ್ಷ್ಮಿ ಅವರಿಗೆ ನೀಡಿದ್ದರು.

ಹಿಂದಿನ ಸಿಐಟಿಬಿಯು ಈ ಭೂಮಿಯನ್ನು 1988ರಲ್ಲಿ ಸ್ವಾಧೀನಪಡಿಸಿಕೊಂಡಿತ್ತಾದರೂ ಪರಿಹಾರದ ಹಣ ಪಾವತಿಸಿರಲಿಲ್ಲ. ನಂತರ ಹಾಲಿ ಭೂಮಿ ಪೈಕಿ 15 ಎಕರೆಯನ್ನು ಜೆಎಸ್‍ಎಸ್ ವಿದ್ಯಾಪೀಠಕ್ಕೆ ಮುಡಾ ಮಂಜೂರು ಮಾಡಿತ್ತು. ಉಳಿದ 79.28 ಎಕರೆ ಪೈಕಿ 23.5 ಎಕರೆ ಪ್ರದೇಶದಲ್ಲಿ ಸಾರ್ವಜನಿಕರು ಮನೆಗಳನ್ನು ನಿರ್ಮಿಸಿ ಕೊಂಡಿದ್ದರು. ಚದುರಂಗ ಕಾಂತರಾಜ ಅರಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ 2015ರ ಡಿಸೆಂಬರ್ 16 ರಂದು ಮುಡಾ ಭೂಸ್ವಾಧೀನ ವಿರುದ್ಧ ಆದೇಶ ನೀಡಿ ಇಲ್ಲಿ ನಿರ್ಮಾಣವಾಗಿರುವ ಮನೆಗಳನ್ನು 6 ತಿಂಗಳೊಳಗಾಗಿ ನೆಲಸಮಗೊಳಿಸು ವಂತೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »