`ಜಲಧಾರೆ’ ಅನುಷ್ಠಾನ
ಮೈಸೂರು

`ಜಲಧಾರೆ’ ಅನುಷ್ಠಾನ

September 7, 2018

ಬೆಂಗಳೂರು: ನದಿ ಮೂಲ ದಿಂದ ರಾಜ್ಯದ ಪ್ರತಿ ಹಳ್ಳಿಗೂ ಕುಡಿಯುವ ನೀರು ಕಲ್ಪಿಸುವ ಜಲಧಾರೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಯೋಜನೆಗೆ 60ರಿಂದ 70,000 ಕೋಟಿ ರೂ. ವೆಚ್ಚ ಮಾಡಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದೇ ಇದರ ಉದ್ದೇಶವಾಗಿದೆ. ಈಗಾಗಲೇ ನದಿ ಪಾತ್ರದ ಸಮೀಪ ಇರುವ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ಎಲ್ಲಾ ಹಳ್ಳಿಗೂ ವಿಸ್ತರಿಸುವುದರಿಂದ ಕೆಲವು ಪ್ರದೇಶಗಳಲ್ಲಿನ ಫ್ಲೋರೈಡ್‍ಯುಕ್ತ ನೀರು ಬಳಕೆಗೆ ತಿಲಾಂಜಲಿ ಇತ್ತು, ರೋಗ-ರುಜಿನ ತಡೆಯಬಹು ದಾಗಿದೆ ಎಂದು ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.

ಕೆಲವು ನದಿಗಳಲ್ಲಿ ಸಂಗ್ರಹ ವಾಗುವ ನೀರು ಕೃಷಿ ಮತ್ತು ಕುಡಿಯಲು ಬಳಕೆ ಆಗುತ್ತಿಲ್ಲ, ವಿದ್ಯುತ್ ಉತ್ಪಾದನೆ ಮಾಡಿದ ನಂತರ ನೂರಾರು ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗುತ್ತಿದೆ. ಇನ್ನು ಕೆಲವೆಡೆ ನದಿಗಳು ಭರ್ತಿಯಾಗಿ ಹೆಚ್ಚುವರಿ ನೀರು ಸಮುದ್ರ ಪಾಲಾಗುವುದನ್ನೂ ನೋಡಿದ್ದೇವೆ. ಇಂತಹ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಕೆರೆಗಳಿಗೆ ಹರಿಸಿದರೆ, ಕುಡಿಯಲು ಸಮರ್ಪಕ ನೀರು ದೊರೆಯಲಿದೆ. ಸುತ್ತಲಿನ ಭೂಗರ್ಭ ಜಲ ಹೆಚ್ಚಳ ಸಾಧ್ಯವಾಗುತ್ತದೆ. ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಅನುದಾನದ ಜೊತೆಗೆ ವಿಶ್ವ ಬ್ಯಾಂಕ್ ಸೇರಿದಂತೆ ಕೆಲವು ಹಣಕಾಸು ಸಂಸ್ಥೆಗಳು ಬಡ್ಡಿರಹಿತ ಸಾಲ ನೀಡಲಿವೆ. ಈ ಹಣ ಬಳಕೆ ಮಾಡಿ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗುವುದಾಗಿ ಕುಮಾರಸ್ವಾಮಿ ತಿಳಿಸಿದರು.

Translate »