ಮೈಸೂರು ವಿವಿ ಕುಲಪತಿ ನೇಮಕ ಹಗ್ಗಾಜಗ್ಗಾಟ
ಮೈಸೂರು

ಮೈಸೂರು ವಿವಿ ಕುಲಪತಿ ನೇಮಕ ಹಗ್ಗಾಜಗ್ಗಾಟ

September 7, 2018

ಮೈಸೂರು: ಶತಮಾನೋತ್ಸವ ಆಚರಿಸಿಕೊಂಡಿರುವ ಪ್ರತಿಷ್ಟಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಖಾಯಂ ಕುಲಪತಿ ನೇಮಕ ಕುರಿತಂತೆ ಸರ್ಕಾರ ಮತ್ತು ಕುಲಾಧಿಪತಿಗಳೂ ಆದ ರಾಜ್ಯಪಾಲರ ನಡುವೆ ಹಗ್ಗಾಜಗ್ಗಾಟ ನಡೆಯುತ್ತಲೇ ಇದೆ. ಕುಲಪತಿ ನೇಮಕ ಸಂಬಂಧ ಈ ಹಿಂದೆ ರಚಿಸಲಾಗಿದ್ದ ಪ್ರೊ.ಕಿಂಚಾ ನೇತೃತ್ವದ ಶೋಧನಾ ಸಮಿತಿ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರಿಂದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆಯೇ ಶೋಧನಾ ಸಮಿತಿ ಪ್ರಸ್ತಾವನೆಗಳು ಗಿರಿಗಿಟ್ಟಲೆ ಆಡುತ್ತಿದ್ದು, ಇದೀಗ ಹೊಸ ಹೆಸರು ಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಕುಲಾಧಿಪತಿಗಳು ಖಡಕ್ ಸೂಚನೆ ನೀಡಿ ರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಶೋಧನಾ ಸಮಿತಿ ರಚಿಸಲು ಮುಂದಾಗಿದೆ.

ಸಮಿತಿಯಲ್ಲಿರುವ ಸದಸ್ಯರ ಪೈಕಿ ಕನಿಷ್ಠ ಇಬ್ಬರನ್ನು ಬದಲಾಯಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿ, ಮೈಸೂರು ವಿವಿ ಹೊಸ ಪ್ರತಿನಿಧಿಗಳ ಪಟ್ಟಿ ಕಳುಹಿಸುವಂತೆ ಪತ್ರ ಮುಖೇನ ತಿಳಿಸಿದೆ. ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದಿಂದ ಸಿಂಡಿ ಕೇಟ್ ಉಪಸಮಿತಿಯ ಪ್ರೊ.ಕುಟಿನೋ ಅವರನ್ನು ಕುಲಪತಿ ಆಯ್ಕೆ ಶೋಧನಾ ಸಮಿತಿಗೆ ಪ್ರತಿನಿಧಿಯಾಗಿ ಆಯ್ಕೆ ಮಾಡಿತ್ತು.

ಇದೀಗ ಹೊಸ ಪ್ರತಿನಿಧಿಯೊಬ್ಬರ ಹೆಸರು ಕಳುಹಿಸುವಂತೆ ಕೇಳಿರುವುದರಿಂದ ಪ್ರೊ.ಕುಟಿನೋ ಅವರನ್ನು ಸಮಿತಿಯಿಂದ ಕೈಬಿಡುವ ಸಾಧ್ಯತೆ ನಿಚ್ಚಳವಾದಂತಾಗಿದೆ. ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದಂತೆ ತಾವು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ವಿಶ್ವದ್ಯಾನಿಲಯದ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾ ಗಿದ್ದು, ಶನಿವಾರ ಅಥವಾ ಸೋಮವಾರ ಸಭೆ ಕರೆದು ಶೋಧನಾ ಸಮಿತಿಗೆ ಅರ್ಹ ಪ್ರತಿನಿಧಿ ಹೆಸರಿನೊಂದಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಹೆಚ್.ಎಸ್.ಉಮೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. 2017ರ ಜನವರಿ ಮಾಹೆಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತಿಯಾದ ನಂತರ ಖಾಯಂ ಕುಲಪತಿ ನೇಮಕವಾಗಿಲ್ಲ. ಸೇವಾ ಹಿರಿತನದ ಮೇಲೆ ಐವರು ಹಂಗಾಮಿ ಕುಲಪತಿಗಳು ವಿವಿಯಲ್ಲಿ ಸೇವೆ ಸಲ್ಲಿಸುವಂತಾಗಿದೆ. ಪರಿಣಾಮ ಶೈಕ್ಷಣಿಕ ಚಟುವಟಿಕೆಗಳು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಅಂತಿಮವಾಗಿ ಯುಜಿಸಿ ಅನುದಾನದ ಬಳಕೆಗೂ ತೊಂದರೆ ಉಂಟಾಗುತ್ತದೆ ಎಂಬ ಮಾತುಗಳು ಮಾನಸಗಂಗೋತ್ರಿ ಆವರಣದಲ್ಲಿ ಕೇಳಿ ಬರುತ್ತಿವೆ.

Translate »