ಒಂದು ಎಕರೆ ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ
ಮೈಸೂರು

ಒಂದು ಎಕರೆ ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ

September 7, 2018

ಬೆಂಗಳೂರು: ಕೃಷಿಕರು ತಮ್ಮ ಭೂಮಿ ಯಲ್ಲಿ 1 ಎಕರೆಗೆ ಕನಿಷ್ಠ 20 ಸಸಿ ನೆಟ್ಟು ಅವುಗಳನ್ನು ಮರಗಳಾಗಿ ಪೋಷಿಸಲು ಕಡ್ಡಾಯ ಕಾನೂನು ತರುವುದಾಗಿ ಅರಣ್ಯ ಸಚಿವ ಆರ್.ಶಂಕರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಕೃಷಿ ಭೂಮಿಯಲ್ಲಿ ಮರ ಬೆಳೆಸಿ, ಬೆಳೆ ತೆಗೆಯಲು ಹೇಗೆ ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರೆ, ಸಚಿವರಿಂದ ಉತ್ತರವಿಲ್ಲ.

ಮರ ಇಲ್ಲದೆ ಮಳೆ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ ಬರದ ಛಾಯೆ ಕಾಡುತ್ತಿದೆ. ಮಳೆಯೇ ಇಲ್ಲದ ಮೇಲೆ ರೈತರು ಬೆಳೆ ಹೇಗೆ ತೆಗೆಯುತ್ತಾರೆ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು. ರೈತರು ತಮ್ಮ ಕೃಷಿ ಭೂಮಿಯಲ್ಲಿ ಒಂದು ಸಸಿ ನೆಟ್ಟು ಪೋಷಿಸಿದರೆ ಅವರಿಗೆ ಪ್ರತಿ ವರ್ಷ 100 ರೂ. ನೀಡಲಾಗು ವುದು, ಇದರ ಮೊತ್ತ ಹೆಚ್ಚಿಸಲೂ ಸರ್ಕಾರ ಸಿದ್ಧವಿದೆ.

ಒಂದು ವೇಳೆ ಎಕರೆಗೆ 400 ಮರ ನೆಟ್ಟರೆ 40,000 ರೂ. ಇಲಾಖೆ ನೀಡಲಿದೆ. ಇದು ರೈತರಿಗೆ ಆದಾಯವಲ್ಲವೆ? ಬೆಳೆ ತೆಗೆಯುವ ಬದಲು ಮರಗಳನ್ನೇ ಬೆಳೆಸುವಂತೆ ಸಚಿವರು ರೈತರಿಗೆ ಸಿದ್ಧಾಂತ ಬೋಧಿಸಿದರು. ಸಚಿವರು ಹೇಳಿದ ರೀತಿ ಮರ ಬೆಳೆದರೆ, ರೈತರು ಹೊಟ್ಟೆಗೆ ಹಿಟ್ಟಿಲ್ಲದೆ ಬದುಕ ಬೇಕಾಗುತ್ತದೆ. ಇದು ಅರಣ್ಯ ಸಚಿವರು ತರಲು ಹೊರಟಿರುವ ಹೊಸ ಕಾನೂನು. ರಾಜ್ಯದಲ್ಲಿ ಹಸಿರು ಪರಿಸರ ಹೆಚ್ಚಿಸುವ ಅಗತ್ಯತೆ ಇದ್ದು, ಈ ಉದ್ದೇಶದಿಂದ ಕೃಷಿ ಜಮೀನಿನಲ್ಲಿ ಮರ ಬೆಳೆಸುವ ಕೃಷಿ ಪ್ರೋತ್ಸಾಹ ಯೋಜನೆ ಜಾರಿ ಗೊಳಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುವ ಜೊತೆಗೆ ಹಸಿರೀಕರಣ ಹಾಗೂ ಪರಿಸರ ಸಂರಕ್ಷಣೆಗೂ ಅನುಕೂಲವಾಗಲಿದೆ ಎಂದರು.

ಬೆಂಗಳೂರು ಮಹಾನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಿರುವಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ನಿಷೇಧ ಮಾಡಲಾಗುವುದು. ಪರಿಸರ ಕಾಪಾಡುವ ದೃಷ್ಟಿಯಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಪ್ರವಾಸೋದ್ಯಮ ಕೇಂದ್ರ ಮತ್ತು ದೇವಾಲಯಗಳ ಪರಿಸರದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಲು ಪ್ಲಾಸ್ಟಿಕ್ ನಿಷೇಧ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಎಲ್ಲಾ ತಾಲೂಕುಗಳಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಪ್ರಗತಿಯಲ್ಲಿದೆ. ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ|| ಕಸ್ತೂರಿರಂಗನ್ ವರದಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಕೋರಿಕೆಯಂತೆ ಕ್ರಮ ವಹಿಸಲಾಗಿದೆ. ಮುಂದಿನ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಡಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತೀರ್ಪು ಕುರಿತು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Translate »