ಬಂಡೀಪುರದಲ್ಲಿ ಫ್ಲೈಓವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಚಾಮರಾಜನಗರ

ಬಂಡೀಪುರದಲ್ಲಿ ಫ್ಲೈಓವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ

October 22, 2018

ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನ ದಲ್ಲಿ ಫ್ಲೈಓವರ್ ನಿರ್ಮಾಣ ಮಾಡಬಾರದು ಎಂದು ಒತ್ತಾ ಯಿಸಿದ ಬಂಡೀಪುರ ಸಮೀಪದ ಕಾಡಂಚಿನ ಯುವಕರು ಹಾಗೂ ಪರಿಸರ ಪ್ರೇಮಿಗಳು ಬಂಡೀಪುರ ಹುಲಿಯೋಜನೆಯ ಮೇಲು ಕಾಮನಹಳ್ಳಿ ಬಳಿ ಪ್ರತಿಭಟನೆ ನಡೆಸಿದರು.

ಕಾಡಂಚಿನ ಜಕ್ಕಹಳ್ಳಿ, ಮಂಗಲ, ಎಲ್ಚೆಟ್ಟಿ, ಕರಕಲಮಾದಹಳ್ಳಿ, ಚಿಕ್ಕತುಪ್ಪೂರು, ದೊಡ್ಡತುಪ್ಪೂರು ಗ್ರಾಮದ ನೂರಕ್ಕೂ ಹೆಚ್ಚಿನ ಯುವಕರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಮೇಲುಕಾಮನಹಳ್ಳಿ ಬಳಿ ಬೆಳಗಿನಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.

ಕೇರಳ ನೆಲಂಬೂರಿಗೆ ರೈಲ್ವೇ ಸಂಪರ್ಕ ಕಲ್ಪಿಸಲು ಬಂಡೀಪುರ ಹುಲಿಯೋಜನೆಯ ಅರಣ್ಯ ಪ್ರದೇಶದಲ್ಲಿ ಫ್ಲೈಓವರ್ (ಮೇಲ್ಸೇತುವೆ) ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ತನ್ನ ಅಡ್ಡಿಯಿಲ್ಲ ಎಂದು ಒಪ್ಪಿಗೆ ನೀಡಿದೆ ಎನ್ನಲಾಗುತ್ತಿತ್ತು. ಇದರಿಂದ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಸಾವಿರಾರು ಮರಗಳನ್ನು ಕಡಿಯುವುದರಿಂದ ಪರಿಸರ ಹಾಗೂ ಅರಣ್ಯನಾಶವಾಗುವ ಜತೆಗೆ ಮಡಕೇರಿಯಲ್ಲಿ ಸಂಭವಿಸಿದ ದುರಂತವು ಇಲ್ಲಿಯೂ ಸಂಭವಿಸಲಿದೆ.

ರಾತ್ರಿ ವಾಹನ ಸಂಚಾರ ನಿಷೇಧದಿಂದ ವನ್ಯಜೀವಿಗಳು ಹಾಗೂ ಅರಣ್ಯಾಭಿವೃದ್ಧಿಯಾಗುತ್ತಿರುವುದರಿಂದ ಸಂಜೆ 6 ರಿಂದಲೇ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಲ್ಲಿಸಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ಕೇರಳದ ಒತ್ತಡಕ್ಕೆ ಮಣಿದು ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಪ್ಲೇಕಾರ್ಡ್ ಪ್ರದರ್ಶಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಬಂಡೀಪುರ ಉಪ ವಿಭಾಗದ ಎಸಿಎಫ್ ರವಿಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Translate »