ಎತ್ತಿನಹೊಳೆ ಯೋಜನೆ ಕಾಮಗಾರಿ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ
ಹಾಸನ

ಎತ್ತಿನಹೊಳೆ ಯೋಜನೆ ಕಾಮಗಾರಿ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

November 23, 2018

ಹಾಸನ:  ಭೂಮಿ ಮೌಲ್ಯಮಾಪನ ಮಾಡದೇ ರೈತರನ್ನು ವಂಚಿಸಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಗರದ ತಣ್ಣೀರುಹಳ್ಳದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಸಂತೇ ಪೇಟೆ, ಬಿ.ಎಂ. ರಸ್ತೆ ಹಾಗೂ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಅವರು, ಕಳೆದ 10 ವರ್ಷಗಳಿಂದ ಭೂಮಿ ಮೌಲ್ಯಮಾಪನ ಮಾಡದೆ ರೈತರನ್ನು ವಂಚಿಸಿ, ಯಾವುದೇ ಪರಿಹಾರ ನೀಡದೆ ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ರೈತರ ಸಂಪೂರ್ಣ ವಿರೋಧವಿದೆ ಎಂದರು.

ಆಲೂರು ತಾಲೂಕಿನ 16 ಗ್ರಾಮಗಳ ರೈತರ ಭೂಮಿಯನ್ನು ಹಳೆ ಯೋಜನೆಗೆ ಬಳಸಿಕೊಂಡು ಈವರೆಗೂ ಭೂಸ್ವಾಧೀನ ಪ್ರಕ್ರಿಯೆಗಳ ಯಾವ ಮಾಹಿತಿ ನೀಡದೆ ಅಕ್ರಮವಾಗಿ ಎತ್ತಿನ ಹೊಳೆ ಯೋಜನೆಗೆ ನಮ್ಮ ರೈತರ ಭೂಮಿಯನ್ನು ಬಳಸು ತ್ತಿರುವವರ ವಿರುದ್ಧ ಹೋರಾಟ ಮಾಡು ತ್ತಿರುವುದಾಗಿ ಹೇಳಿದರು.

ಯೋಜನೆಗೆ ಸಂಬಂಧಪಟ್ಟಂತೆ ಇತರ ಭಾಗದ ರೈತರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಕಾನೂನು ಪ್ರಕಾರ ನೀಡಿರುವ ಪರಿಹಾರದ ಮೊತ್ತವನ್ನು ಅದೇ ಮಾನ ದಂಡದಡಿಯಲ್ಲಿ ನಮಗೂ ಮಾಡಿಕೊಡ ಬೇಕು ಎಂದು ಒತ್ತಾಯಿಸಿದರು. ಎಲ್ಲವನ್ನು ರೈತರ ಸಭೆ ನಡೆಸಿ ಮುಂದಿನ ಕಾರ್ಯ ಕೈಗೊಳ್ಳ ಬೇಕು. ಅದುವರೆಗೂ ಯಾವ ಕಾಮಗಾರಿ ಯನ್ನು ನಡೆಸಬಾರದು ಎಂದು ಎಚ್ಚರಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಣ ಗಾಲ್ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್, ತಾಲೂಕು ಅಧ್ಯಕ್ಷ ಮಲ್ಲೇಶ್, ಆಲೂರು ತಾಲೂಕು ಕಾರ್ಯದರ್ಶಿ ಪುಟ್ಟ ರಾಜು, ಮುಖಂಡ ಸೊಂಪುರ ಚಲುವೇಗೌಡ, ಹೊನ್ನಾವರ ಸಿದ್ದಪ್ಪ ಇತರರು ಇದ್ದರು.

Translate »