ಡಿವೈಎಸ್‍ಪಿಯಿಂದ ತಹಶೀಲ್ದಾರ್‍ಗೆ ಧಮ್ಕಿ
ಚಾಮರಾಜನಗರ

ಡಿವೈಎಸ್‍ಪಿಯಿಂದ ತಹಶೀಲ್ದಾರ್‍ಗೆ ಧಮ್ಕಿ

November 23, 2018

ಗುಂಡ್ಲುಪೇಟೆ:  ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಅನುಮತಿಯಿಲ್ಲದೆ ಕಡಿದ ಬಗ್ಗೆ ಪರಿಶೀಲನೆ ನಡೆಸಿದ ಗ್ರೇಡ್-2 ತಹಸೀಲ್ದಾರ್ ಅವರಿಗೆ ಎಸಿಬಿ ಡಿವೈಎಸ್‍ಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬೆಳಚಲವಾಡಿ ಗ್ರಾಮದ ನಿವಾಸಿ ಪುಟ್ಟಸ್ವಾಮಾರಾಧ್ಯರ ಪುತ್ರ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಡಿವೈಎಸ್‍ಪಿಯಾಗಿರುವ ಪ್ರಸಾದ್ ಅವರು ಪಟ್ಟಣದ ಗ್ರೇಡ್-2 ತಹಶೀಲ್ದಾರ್ ಸುದರ್ಶನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಪ್ರಕರಣ?: ಪುಟ್ಟಸ್ವಾಮಾರಾಧ್ಯ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸಾಗು ವಾನಿ ಮರಗಳನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಹಾಕಿದ್ದರು. ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ ಸಾರ್ವಜನಿಕರಿಂದ ದೂರುಗಳು ಬಂದಿ ದವು. ದೂರಿನನ್ವಯ ಗ್ರೇಡ್-2 ತಹಶೀಲ್ದಾರ್ ಸುದರ್ಶನ್ ಅವರು ಗ್ರಾಮ ಲೆಕ್ಕಾಧಿಕಾರಿಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅನುಮತಿ ಇಲ್ಲದೇ ಮರಗಳನ್ನು ಕಟಾವು ಮಾಡಿರುವ ಬಗ್ಗೆ ವರದಿ ಸಲ್ಲಿಸಿದರು.

ಈ ಬಗ್ಗೆ ಜಮೀನಿನ ಮಾಲೀಕ ಪುಟ್ಟಸ್ವಾಮಾರಾಧ್ಯ ತಮ್ಮ ಪುತ್ರ, ಎಸಿಬಿ ಡಿವೈಎಸ್‍ಪಿ ಪ್ರಸಾದ್ ಅವರಿಗೆ ತಿಳಿಸಿದ್ದಾರೆ. ಬಳಿಕÀ ಪ್ರಸಾದ್ ಗ್ರೇಡ್-2 ತಹಶೀಲ್ದಾರ್ ಸುದರ್ಶನ್ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಸುದರ್ಶನ್ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.

ಸುದರ್ಶನ್ ಅವರನ್ನು ‘ಮೈಸೂರು ಮಿತ್ರ’ ಸಂಪರ್ಕಿಸಿದಾಗ ಅವರು, ಘಟನೆ ನಡೆದಿರುವುದು ನಿಜ. ಆದರೆ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಿರಿಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅಕ್ರಮವಾಗಿ ಕಡಿದ ಸಾಗುವಾನಿ ಮರಗಳನ್ನು ಪಟ್ಟಣದ ಸಾಮಾಜಿಕ ವಲಯಾರಣ್ಯಾಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »