ಬಸ್ ಸೌಲಭ್ಯಕ್ಕಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಬಸ್ ಸೌಲಭ್ಯಕ್ಕಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರತಿಭಟನೆ

July 13, 2018

ಗುಂಡ್ಲುಪೇಟೆ:  ತಮ್ಮ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಲ್ಲಯ್ಯನಪುರ ಗ್ರಾಮಸ್ಥರು ಪಟ್ಟಣದ ಸಾರಿಗೆ ಡಿಪೋಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.

ನಾಲ್ಕೈದು ಆಟೋಗಳಲ್ಲಿ ಆಗಮಿಸಿದ ಮಲ್ಲಯ್ಯನಪುರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾರಿಗೆ ಡಿಪೋ ಎದುರು ಒಗ್ಗೂಡಿ ಸ್ಥಳಕ್ಕೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಗಳು ಬರುವಂತೆ ಪಟ್ಟು ಹಿಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಪೋ ಮ್ಯಾನೇಜರ್ ಎಂ.ಜಿ.ಜಯಕುಮಾರ್ ಗ್ರಾಮಸ್ಥರ ಮನವಿಯನ್ನು ಆಲಿಸಿದರು. ಗ್ರಾಮದಿಂದ ಪ್ರತಿ ದಿನವೂ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಿದ್ದರೂ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಒಂದೇ ಬಸ್ ಮಾತ್ರ ಬರುತ್ತಿದೆ. ಆದರೆ ಈ ಬಸ್ಸಿನಲ್ಲಿ ಕಾಲಿಡಲೂ ಸಾಧ್ಯ ವಿಲ್ಲವಾಗಿದ್ದು ವಿದ್ಯಾರ್ಥಿಗಳು ಆಟೋಗಳಿಗೆ ಹಣಕೊಟ್ಟು ಶಾಲಾಕಾಲೇಜುಗಳಿಗೆ ಬರಬೇಕಾ ಗಿದೆ. ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಶಾಲಾ ಕಾಲೇಜುಗಳ ಸಮಯದಲ್ಲಿ ಮತ್ತು ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಬಸ್ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ಜಯಕುಮಾರ್ ತಾವೇ ಮಾರ್ಗಕ್ಕೆ ಬಂದು ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಶೀಲಿಸಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Translate »