ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ
Uncategorized, ಮೈಸೂರು

ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ

June 11, 2020

ಮೈಸೂರು,ಜೂ.10(ಪಿಎಂ)-ಸರ್ಕಾರದ ಸುತ್ತೋಲೆಯಂತೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಕರ್ತವ್ಯಕ್ಕೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮೀಣ ಪ್ರದೇಶ ದಲ್ಲಿ ಸರ್ಕಾರಿ ಹಾಗೂ ಖಾಸಗಿ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ಉಪಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿದ್ದಾರೆ.

ಜೂ.8ರಿಂದಲೇ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಬೋಧಕ ಹಾಗೂ ಬೋಧಕೇತ ರರರು ಕರ್ತವ್ಯಕ್ಕೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಶಾಲಾ ಕಾಲೇಜುಗಳ ಕಚೇರಿಗಳನ್ನು ತೆರೆಯಲಾಗಿದೆ. ಆದರೆ ಪೂರ್ಣ ಪ್ರಮಾಣದ ಸಾರಿಗೆ ಸೌಲಭ್ಯ ಗ್ರಾಮೀಣ ಪ್ರದೇಶದಲ್ಲಿ ಇಲ್ಲವಾಗಿದ್ದು, ಶೇ.50ರಷ್ಟೂ ಸಾರಿಗೆ ಸೌಲಭ್ಯ ಇಲ್ಲವಾಗಿದೆ. ಬಹುತೇಕ ಶಿಕ್ಷಕರು ಹಾಗೂ ಮಹಿಳಾ ಶಿಕ್ಷಕಿಯರು ಸಾರಿಗೆ ಸೌಲಭ್ಯವನ್ನೇ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲಿನಂತೆ ಗ್ರಾಮೀಣ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ನಿಲ್ದಾಣಗಳಲ್ಲೂ ಕಡ್ಡಾಯವಾಗಿ ಬಸ್ ನಿಲುಗಡೆ ಮಾಡಲು ಮತ್ತು ಕೋರಿಕೆ ನಿಲುಗಡೆಗೆ ಅವಕಾಶ ಕಲ್ಪಿಸಲು ಕೂಡಲೇ ಆದೇಶ ನೀಡಬೇಕೆಂದು ಸಾರಿಗೆ ಸಚಿವರಲ್ಲಿ ಗೌಡರು ಕೋರಿದ್ದಾರೆ.

Translate »