ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಪೂಜೆ ತಾಲೀಮಿಗೆ ಪೊಲೀಸರ ಸಿದ್ಧತೆ
ಮೈಸೂರು

ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಪೂಜೆ ತಾಲೀಮಿಗೆ ಪೊಲೀಸರ ಸಿದ್ಧತೆ

September 20, 2018

ಮೈಸೂರು:  ಜಂಬೂ ಸವಾರಿಯ ವೇಳೆ ವಿಜಯದ ಸಂಕೇತವಾಗಿ ಕುಶಾಲುತೋಪು ಸಿಡಿಸುವ ಫಿರಂಗಿಗಳಿಗೆ ಬುಧವಾರ ಅರಮನೆಯ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೊಲೀಸ್ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಯಿತು.

ಏಳು ಫಿರಂಗಿಗಳನ್ನು ಇಂದು ತಮ್ಮ ಸುಪರ್ದಿಗೆ ಪಡೆದ ಪೊಲೀಸರು, ಸಿಡಿಮದ್ದು ಸಿಡಿಸುವ ತಾಲೀಮಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಇಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು.

ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ಇಂದು ಬೆಳಗ್ಗೆ 11 ಗಂಟೆಯಿಂದ 11.30ರೊಳಗೆ ಸಂದ ಅಭಿಜಿನ್ ಶುಭಲಗ್ನದಲ್ಲಿ ಫಿರಂಗಿಗಳಿಗೆ ಅರಿಶಿನ-ಕುಂಕುಮ ಇಟ್ಟು ಆರತಿ ಬೆಳಗಿ ವಿಜಯಗಣಪತಿ ಪೂಜೆ, ಮೃತ್ಯುಂಜಯ ಪೂಜೆ, ಚಾಮುಂಡೇಶ್ವರಿ ಪೂಜೆ, ಷೋಡ ಶೋಪಚಾರ ಪೂಜೆ ನೆರವೇರಿಸಿದರು. ಬಳಿಕ ಪೊಲೀಸ್ ಆಯುಕ್ತ ಡಾ.ಎ .ಸುಬ್ರಹ್ಮಣ್ಯೇಶ್ವರ ರಾವ್ ಫಿರಂಗಿಗಳಿಗೆ ಆರತಿ ಬೆಳಗಿದರು. ಅಂತಿಮವಾಗಿ ಫಿರಂಗಿ ಬಳಸುವ ಸಿಬ್ಬಂದಿಗಳಿಂದ ಮೃತ್ಯುಂಜಯ ಜಪ ಮಾಡಿಸಿ ಕುಶಾಲುತೋಪು ಸಿಡಿಸುವ ಕಾರ್ಯ ಸುಸೂತ್ರವಾಗಿ, ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥಿಸಲಾಯಿತು.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ಜಂಬೂಸವಾರಿಯ ವೇಳೆ ಕುಶಾಲು ತೋಪು ಸಿಡಿಸುವ ಸಂಪ್ರದಾಯವಿದ್ದು, ಇದಕ್ಕಾಗಿ ತಾಲೀಮಿಗೆ ಸಿದ್ಧತೆ ಮಾಡಿಕೊಳ್ಳಲು ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದೆ.

ನಾಳೆಯಿಂದಲೇ ಸಿಬ್ಬಂದಿ ಡ್ರೈ (ಸಿಡಿಮದ್ದು ಬಳಸದೆ) ತಾಲೀಮು ಆರಂಭಿಸಲಿದ್ದಾರೆ. ಫಿರಂಗಿಗಳಿಗೆ ಸಿಡಿಮದ್ದು ತುಂಬುವುದು, ಬೆಂಕಿ ಹಚ್ಚುವುದು, ಮದ್ದು ಸಿಡಿದ ನಂತರ ಕೊಳವೆಯನ್ನು ಸ್ವಚ್ಛ ಮಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ತಾಲೀಮಿನಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. 21 ಸುತ್ತು ಸಿಡಿಮದ್ದನ್ನು ನಿಗದಿತ ಅವಧಿಯಲ್ಲಿ ಸಿಡಿಸಬೇಕಾಗಿರುವುದರಿಂದ ಸಮಯ ಪರಿಪಾಲನೆಯ ತಾಲೀಮು ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಹಾಗೂ ಕುದುರೆಗಳ ಮುಂದೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗು ತ್ತದೆ. ಈ ಬಾರಿ ಆರಮನೆ ಆವರಣದಲ್ಲಿಯೇ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಡಾ.ವಿಕ್ರಮ್ ಆಮ್ಟೆ, ಬಿ.ವಿ.ಕಿತ್ತೂರ್, ಅರಮನೆ ಭದ್ರತಾ ಮಂಡಳಿಯ ಎಸಿಪಿ ಶೈಲೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »