ದೀಪಾಲಂಕಾರ
ಮೈಸೂರು

ದೀಪಾಲಂಕಾರ

September 20, 2018

ಈ ಬಾರಿ ದಸರಾ ಸಂದರ್ಭದಲ್ಲಿ ಮೈಸೂರು ವಿಶೇಷ ದೀಪಾಲಂಕಾರದಿಂದ ಕಂಗೊಳಿಸಲಿದೆ. ರಸ್ತೆಗಳು, ವೃತ್ತ ಗಳನ್ನು ವಿಭಿನ್ನವಾಗಿ ಸಿಂಗರಿಸುವುದರ ಜೊತೆಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುವ ನಾನಾ ರೀತಿಯ ಆಕರ್ಷಕ ಪ್ರತಿಕೃತಿಗಳನ್ನು ಅಳವಡಿಸಲು ಚೆಸ್ಕಾಂ ಸಿದ್ಧತೆ ಮಾಡಿಕೊಂಡಿದೆ.

ಕಳೆದ ವರ್ಷ ಒಟ್ಟು 18 ಕಿಮೀ ರಸ್ತೆಗೆ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ವಿದ್ಯುತ್ ಸಮಸ್ಯೆಯಿಲ್ಲದ ಹಿನ್ನೆಲೆಯಲ್ಲಿ ಸುಮಾರು 35 ಕಿಮೀನಷ್ಟು ರಸ್ತೆ, 23 ವೃತ್ತಗಳು ವರ್ಣಮಯ ವಿದ್ಯುತ್ ದೀಪದ ಬೆಳಕಲ್ಲಿ ಝಗಮಗಿಸಲಿವೆ. ಅಲ್ಲದೆ ಶ್ರೀ ಚಾಮುಂಡೇಶ್ವರಿ, ಜಯಚಾಮರಾಜ ಒಡೆಯರ್, ದಸರಾ ಅಂಬಾರಿ ಇನ್ನಿತರ ಪ್ರತಿಕೃತಿಗಳನ್ನು ಅಳವಡಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಲಾಗುವುದು ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಎನ್.ಸ್ವಾಮಿ ಹೇಳಿದ್ದಾರೆ.
ಮೈಸೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಯೋಜನೆಗಳನ್ನು ಹಾಕಿ ಕೊಂಡಿದ್ದು, ಈ ಬಾರಿ ಚಾಮುಂಡಿಬೆಟ್ಟ ದಲ್ಲಿ 3 ಬಣ್ಣಗಳುಳ್ಳ ಆರ್‍ಜಿಬಿ (ರೆಡ್, ಗ್ರಿನ್,ಬ್ಲೂ) ಬಲ್ಬ್‍ಗಳನ್ನು ಅಳವಡಿಸ ಲಾಗುವುದು. ಜತೆಗೆ ಪ್ರವಾಸಿಗರನ್ನು ಸೆಳೆ ಯಲು ಬನ್ನೂರು ರಸ್ತೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ನಂಜನಗೂಡು ರಸ್ತೆ, ಹಿನಕಲ್ ಹಾಗೂ ಕೆಆರ್‍ಎಸ್ ರಿಂಗ್ ರೋಡ್ ಜಂಕ್ಷನ್‍ಗಳಲ್ಲಿ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದರು.

ಮರಗಳಿಗೆ ಮೊಳೆ ಹೊಡೆಯುತ್ತಾರೆಂಬ ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಮರಗಳಿಗೆ ಮೊಳೆ ಹೊಡೆಯದೆ ದೀಪಾಲಂಕಾರ ಮಾಡಲಾಗುವುದು. ಎಲ್‍ಇಡಿ ಬಲ್ಬ್‍ಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯವಾಗುವ ಜತೆಗೆ ನಗರದ ಸೌಂದರ್ಯವೂ ಹೆಚ್ಚುತ್ತದೆ. ಕಳೆದ ಬಾರಿ 1.71 ಕೋಟಿ ರೂ. ಇದ್ದ ಟೆಂಡರ್ ಮೊತ್ತವನ್ನು ಈ ಬಾರಿ 2.34 ಕೋಟಿ ರೂ.ಗೆ ಹೆಚ್ಚಿಸಲಾ ಗಿದೆ. ಅ.5 ರೊಳಗೆ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಪ್ರಾಯೋಜಕ, ವೃತ್ತ ಹಾಗೂ ವೆಚ್ಚ: ಟಿವಿಎಸ್ ಕಂಪೆನಿಯು 5 ಲಕ್ಷ ರೂ. ವೆಚ್ಚ ದಲ್ಲಿ ಹಾರ್ಡಿಂಗ್ ವೃತ್ತ, ಸೋನಿ ಸೆಂಟರ್-ಜೆ.ಸಿ.ಒಡೆಯರ್ ವೃತ್ತ(3ಲಕ್ಷ), ಎಸ್‍ಬಿಐ-ಆಯುರ್ವೇದಿಕ್ ವೃತ್ತ(2ಲಕ್ಷ), ಎಸ್‍ಕೆಎಫ್ ಟೆಕ್ನಾ ಲಜಿ-ನಂಜನಗೂಡು ರಿಂಗ್ ರೋಡ್ ವೃತ್ತ(1.5ಲಕ್ಷ), ಜೆ.ಕೆ.ಟೈರ್-ವೆಂಕಟ ರಮಣ ಸ್ವಾಮಿ ದೇವಸ್ಥಾನ ವೃತ್ತ ಮತ್ತು ರೈಲ್ವೆ ಸ್ಟೇಷನ್ ವೃತ್ತ (ತಲಾ2ಲಕ್ಷ), ಮಾಲ್ ಆಫ್ ಮೈಸೂರ್-ಕುರುಬಾರಹಳ್ಳಿ ವೃತ್ತ (2.5ಲಕ್ಷ), ಎನ್.ರಂಗರಾವ್ ಅಂಡ್ ಸನ್ಸ್-ಅಗ್ರಹಾರ ವೃತ್ತ (1.5 ಲಕ್ಷ), ನಾರಾಯಣ ಹೃದಯಾ ಲಯ-ಕೊಲಂಬಿಯಾ ಏಷಿಯಾ ಆಸ್ಪತ್ರೆ ವೃತ್ತ(2ಲಕ್ಷ), ಐಟಿಸಿ ಲಿಮಿಟೆಡ್-ಜೆಎಸ್‍ಎಸ್ ವೃತ್ತ (1.5ಲಕ್ಷ), ಆಟೋ ಮೋಟಿವ್ ಆಕ್ಸೆಲ್ ಪ್ರೈ. ಲಿ-ರಾಮಸ್ವಾಮಿ ವೃತ್ತ ಮತ್ತು ಐಶ್ವರ್ಯ ಪೆಟ್ರೋಲ್ ಬಂಕ್ ವೃತ್ತ(ಕ್ರಮವಾಗಿ 2 ಮತ್ತು 1.5ಲಕ್ಷ), ರಾಣಿ ಮೋಟಾರ್ಸ್-ಮೆಟ್ರೋಪೋಲ್ ವೃತ್ತ(1.5ಲಕ್ಷ), ಗರುಡಾ ಮಾಲ್-ರೇಸ್ ಕೋರ್ಸ್ ವೃತ್ತ(1.5ಲಕ್ಷ) ಹಾಗೂ ಗೋಪಾಲಗೌಡ ಆಸ್ಪತ್ರೆ-ಗೋಪಾಲಗೌಡ ವೃತ್ತ(1.5ಲಕ್ಷ)ಗಳು ದೀಪಾಲಂಕಾರದಿಂದ ಝಗಮಗಿಸಲಿವೆ.

ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ: ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆ, ನೆಲ್ಸನ್ ಮಂಡೇಲಾ ರಸ್ತೆ, ಬೆಂಗ ಳೂರು-ಮೈಸೂರು ರಸ್ತೆ, ನ್ಯೂ ಸಯ್ಯಾಜಿ ರಾವ್ ರಸ್ತೆ, ಅರಮನೆ ದಕ್ಷಿಣ ದ್ವಾರ ರಸ್ತೆ, ಬೆಂಗಳೂರು-ನೀಲಗಿರಿ ರಸ್ತೆ, ಚಾಮುಂಡಿಬೆಟ್ಟ ರಸ್ತೆ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ರಸ್ತೆ, ಜೆಎಲ್‍ಬಿ ರಸ್ತೆ, ಕೃಷ್ಣರಾಜ ಬುಲೆವರ್ಡ್ ರಸ್ತೆ, ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ವೃತ್ತದಿಂದ ದಾಸೋಹ ಭವನದ ಸುತ್ತಮುತ್ತ ಹಾಗೂ ಹುಣಸೂರು ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ.

ಪ್ರತಿಕೃತಿಗಳ ದೀಪಾಲಂಕಾರ: ಕಾಡಾ ಕಚೇರಿ ಬಳಿ ಜಯಚಾಮರಾಜೇಂದ್ರ ಒಡೆಯರ್, ಕುರುಬಾರಹಳ್ಳಿ ವೃತ್ತದ ಬಳಿ ಚಾಮುಂಡೇಶ್ವರಿ, ದೊಡ್ಡಕೆರೆ ಮೈದಾನ-ದಸರಾ ಅಂಬಾರಿ, ಕೆಆರ್‍ಎಸ್ ಅಣೆ ಕಟ್ಟು, ಗೌತಮಬುದ್ದ, ಬಸವಣ್ಣ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳು, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ, ಕೆ.ಆರ್.ವೃತ್ತ-ದರ್ಪಣ ಸುಂದರಿ, ಮಿಲೇನಿಯಂ ವೃತ್ತ-ಅಶೋಕ ಸ್ತಂಭ, ಫೌಂಟೇನ್ ವೃತ್ತ-ವಿವಿಧ ಪ್ರಾಣಿ ಮತ್ತು ಪಕ್ಷಿಗಳು, ರೈಲ್ವೆ ಸ್ಟೇಷನ್-ಪಾರ್ಲಿಮೆಂಟ್ ಭವನ, ವಿಧಾನ ಸೌಧ ಮತ್ತು ಪ್ರಮುಖ ರಾಜಕೀಯ ನಾಯಕರ ಕಟೌಟ್‍ಗಳು, ಜೆಎಸ್‍ಎಸ್ ಕಾಲೇಜು ಬಳಿ ಗಂಡಭೇರುಂಡ, ರಾಮಸ್ವಾಮಿ ವೃತ್ತ-ಮೈಸೂರು ಅರಮನೆ, ಮಹಾರಾಣಿ ಕಾಲೇಜು ಸಮೀಪದಲ್ಲಿ ಇಂಡಿಯಾ ಗೇಟ್ ಪ್ರತಿಕೃತಿಗಳ ದೀಪಾ ಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ.

ಇತರೆ ದೀಪಾಲಂಕಾರಗಳು: ಚಾಮುಂಡಿ ಬೆಟ್ಟದ ಮೇಲೆ ಸುಸ್ವಾಗತ ಮತ್ತು ವೆಲ್‍ಕಂ ಮತ್ತು ಸಯ್ಯಾಜಿ ರಾವ್ ರಸ್ತೆಯಲ್ಲಿ ಹಸಿರು ಚಪ್ಪರ. ದೊಡ್ಡಕೆರೆ ಮೈದಾನ ಮತ್ತು ಸ್ಕೌಟ್ ಅಂಡ್ ಗೈಡ್ಸ್ ಮೈದಾನ ದಲ್ಲಿ ವಿದ್ಯುತ್ ಸುರಕ್ಷತೆ ಕುರಿತು ಎಲ್.ಇ.ಡಿ ಪರದೆ, ಕೊಲಂಬಿಯಾ ಏಷ್ಯಾ ವೃತ್ತದ ಬಳಿ ದಸರಾ ಲೋಗೋ, ಕುವೆಂಪು ನಗರ ದಲ್ಲಿರುವ ಅಧೀಕ್ಷಕ ಕಛೇರಿ, ಎಂ.ಪಿ.ಎಲ್ ಕಛೇರಿ, ವಿಜಯನಗರದ ನಿಗಮ ಕಛೇರಿ, ದಸರಾ ಮೆರವಣಿಗೆ ಸಾಗುವ ಕೆ.ಆರ್. ವೃತ್ತದಿಂದ ಆರ್.ಸಿ ವೃತ್ತ ಹಾಗೂ ಹೈವೆ ವೃತ್ತದವರೆಗಿನ ಕಂಬಗಳಿಗೆ ಬಣ್ಣ ಬಳಿ ಯುವ ಕಾಮಗಾರಿ, ಚಾಮುಂಡಿಬೆಟ್ಟದ ಮೇಲಿಂದ ಮೈಸೂರು ನಗರ ವೀಕ್ಷಣೆ ವ್ಯವಸ್ಥೆ, ಉತ್ತನಹಳ್ಳಿ ತ್ರಿಪುರ ಸುಂದರಿ ದೇವಾಲಯ ಮತ್ತು ವಿವಿ ಮೊಹಲ್ಲಾ ವ್ಯಾಪ್ತಿಯಲ್ಲಿರುವ 12 ಉದ್ಯಾನವನಗಳಿಗೆ ದೀಪಾಲಂಕಾರ ಮಾಡಲು ನಿರ್ಧರಿಸಿದ್ದು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳ ಬೇಕಿದೆ ಎಂದು ಹೇಳಿದರು.

Translate »