ಮೈಸೂರಿನ ಅಂದ ಹೆಚ್ಚಿಸುವ ಕಾರ್ಯ ಆರಂಭ
ಮೈಸೂರು

ಮೈಸೂರಿನ ಅಂದ ಹೆಚ್ಚಿಸುವ ಕಾರ್ಯ ಆರಂಭ

September 20, 2018

ಮೈಸೂರು: ಐತಿಹಾಸಿಕ ಮೈಸೂರು ದಸರಾ ಉತ್ಸವದ ವೇಳೆ ಮೈಸೂರು ನಗರದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಸ್ಥಳೀಯರ ಜೊತೆಗೆ ಪ್ರವಾಸಿಗರ ಮನಸೂರೆಗೊಳ್ಳುವ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಕಾರಣ ನಗರದ ರಸ್ತೆಗಳ ವಿಭಜಕಗಳಿಗೆ ಬಣ್ಣದ ಲೇಪನದೊಂದಿಗೆ ನಗರದಲ್ಲಿ ವಿದ್ಯುತ್ ದೀಪಾಲಂಕಾರದ ಮೆರಗು ಸಹ ಕಾರಣ.

ಈ ಬಾರಿಯ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆ ಯಲ್ಲಿ ಮೈಸೂರು ಮಹಾನಗರ ಪಾಲಿಕೆ ನಗರದ ಸೌಂದರ್ಯವನ್ನು ದ್ವಿಗುಣಗೊಳಿಸಲು ಅನೇಕ ಕೆಲಸ-ಕಾರ್ಯಗಳಿಗೆ ಚಾಲನೆ ನೀಡಿದೆ. ರಸ್ತೆ ಡಾಂಬರೀಕರಣ, ಗುಂಡಿಗಳನ್ನು ಮುಚ್ಚುವ ಕಾಮಗಾರಿ ಸೇರಿದಂತೆ ಹಲವು ಕಾರ್ಯಗಳನ್ನು ಪ್ರತಿ ವರ್ಷದಂತೆ ಕೈಗೆತ್ತ್ತಿಕೊಂಡಿದ್ದು, ಅದೇ ರೀತಿ ಟೈಲ್ಸ್‍ನಿಂದ ನಿರ್ಮಾಣಗೊಂಡ ಫುಟ್‍ಪಾತ್‍ಗಳ ಅಂಚುಗಳು ಹಾಗೂ ರಸ್ತೆ ವಿಭಜಕಗಳಿಗೆ ಬಣ್ಣದ ಲೇಪನ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಫುಟ್‍ಪಾತ್‍ಗಳ ಅಂಚುಗಳು ಹಾಗೂ ರಸ್ತೆ ವಿಭಜಕಗಳಿಗೆ ಕಪ್ಪು ಮತ್ತು ಹಳದಿ ಬಣ್ಣದ ಪಟ್ಟೆ ಮಾದರಿಯ ಲೇಪನ ನೀಡಲಾಗುತ್ತಿದೆ. ನಗರದ ಹೃದಯ ಭಾಗದ ಎಲ್ಲಾ ರಸ್ತೆಗಳಲ್ಲಿ ಈ ಕಾರ್ಯ ನಡೆಯಲಿದ್ದು, ಸದ್ಯಕ್ಕೆ ಹೈವೇ ವೃತ್ತ, ಆಕಾಶವಾಣಿ ವೃತ್ತದ ರಸ್ತೆ ವಿಭಜಕಗಳು ಹಾಗೂ ಫುಟ್ ಪಾತ್ ಅಂಚುಗಳಿಗೆ ಬಣ್ಣ ಬಳಿಯ ಲಾಗುತ್ತಿದೆ. ಟೆಂಡರ್ ಮೂಲಕ 10ಕ್ಕೂ ಹೆಚ್ಚು ಮಂದಿ ಗುತ್ತಿಗೆದಾರರು ಗುತ್ತಿಗೆ ಪಡೆದು ಬಣ್ಣ ಲೇಪನ ಕಾರ್ಯ ಆರಂಭಿಸಿದ್ದಾರೆ. ಪ್ರತಿ ಗುತ್ತಿಗೆದಾರರು 50ರಿಂದ 60 ಮಂದಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮುಂದುವರೆಸಿದ್ದಾರೆ.

ನಳನಳಿಸಲಿವೆ ಹೂ ಗಿಡಗಳು: ಈ ಬಾರಿಯ ನವರಾತ್ರಿ ಉತ್ಸವದ ವೇಳೆಗೆ ಮೈಸೂರು ನಗರದ ರಸ್ತೆಗಳಲ್ಲಿ ಹೂ ಗಿಡಗಳು ನಳನಳಿಸುವ ಮೂಲಕ ಮನ ಸೂರೆಗೊಳ್ಳಲಿವೆ. ಈಗಾಗಲೇ ಚಾಮರಾಜ ಜೋಡಿ ರಸ್ತೆ, ಜೆಎಲ್‍ಬಿ ರಸ್ತೆ ಸೇರಿ ದಂತೆ ಅನೇಕ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಹೂ ಗಿಡಗಳನ್ನು ನೆಟ್ಟು, ಪೋಷಿ ಸುತ್ತಿರುವ ಮೈಸೂರು ನಗರ ಪಾಲಿಕೆ, ದಸರಾ ವೇಳೆಗೆ ನಗರದ ಇನ್ನಷ್ಟು ರಸ್ತೆಗಳಲ್ಲಿ ಹೂವಿನ ಸೊಬಗು ಅರಳಿಸಲು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯವರೆಗೆ ಈ ಹೂವಿನ ಮಕರಂದ ಸೂಸಲಿದೆ. ದಸರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಮೈಸೂರಿನ ಸೌಂದರ್ಯ ವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಲು ಸಿದ್ಧತೆಗಳು ಭರದಿಂದ ಸಾಗಿವೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಎಂಜಿ ರಸ್ತೆ, ಮಾನಂದವಾಡಿ ರಸ್ತೆ, ಬೋಗಾದಿ ರಸ್ತೆ, ಬೆಂಗಳೂರು ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ವಿಭಜಕಗಳಲ್ಲಿ ಗಿಡಗಳನ್ನು ನೆಡಲಾಗುವುದು. ಈಗಾಗಲೇ ಕಾಮಗಾರಿಗೆ ಅನೇಕ ರಸ್ತೆಗಳಲ್ಲಿ ಚಾಲನೆ ನೀಡಲಾಗಿದೆ. ಜೊತೆಗೆ ಎಲ್ಲೆಲ್ಲಿ ವಿಭಜಕಗಳಲ್ಲಿ ಗಿಡ ನೆಡಲು ಸ್ಥಳಾವಕಾಶವಿದೆ ಎಂದು ನೋಡಿಕೊಂಡು ಕಾಮಗಾರಿ ಮುಂದುವರೆಯಲಿದೆ ಎಂದು ತಿಳಿಸಿದರು.

ಹಸು-ಕರುಗಳು ತಿನ್ನಲು ಮುಂದಾಗದ ಕಣಗಲೆ ಹೂ ಗಿಡ ಹಾಗೂ ಬೌಗೆನ್ವಿಲೇ ಹೂ ಗಿಡಗಳನ್ನು ನೆಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಅನೇಕ ರಸ್ತೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ನಡೆಯು ತ್ತಿದ್ದು, ಈ ರಸ್ತೆಗಳಲ್ಲಿ ಸದ್ಯ ವಿಭಜಕಗಳಿಗೆ ಬಣ್ಣ ಲೇಪನ ಇನ್ನು ಆರಂಭಗೊಂಡಿಲ್ಲ. ಇಲ್ಲೆಲ್ಲಾ ಗಿಡ ನೆಟ್ಟು ಬಳಿಕ ಸ್ವಚ್ಛಗೊಳಿಸಿ ಆನಂತರ ಬಣ್ಣ ಬಳಿಸಲಾಗುತ್ತದೆ ಎಂದು ಕೆ.ಹೆಚ್.ಜಗದೀಶ್ ವಿವರಿಸಿದರು.

Translate »