ಶ್ರೀರಾಂಪುರ 2ನೇ ಹಂತ, ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ
ಮೈಸೂರು

ಶ್ರೀರಾಂಪುರ 2ನೇ ಹಂತ, ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ

December 17, 2018

ಬೆಳಗಾವಿ: ಶ್ರೀರಾಂಪುರ ಎರಡನೇ ಹಂತದ 4ನೇ ಎ.ಸಿ.ಬಿ. ಕ್ರಾಸ್, 3ನೇ ಹಂತ, ಸೂರ್ಯ ಬಡಾವಣೆ, ದೇವಯ್ಯನ ಹುಂಡಿ ಕ್ರಾಸ್‍ನಲ್ಲಿ ಕಳೆದ ವರ್ಷ ಮಳೆ ಬಂದ ಸಂದರ್ಭದಲ್ಲಿ, ಮನೆಗಳಿಗೆ ಮಳೆ ನೀರು ನುಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ, ಮಳೆ ನೀರು ಚರಂಡಿಯಲ್ಲಿ ಡಿಸಿಲ್ಟಿಂಗ್ ಮಾಡಿ ಸುರಕ್ಷಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಘಟನೆ ಸಂಭವಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ವಿಧಾನ ಪರಿಷತ್ತಿಗೆ ತಿಳಿಸಿದರು.

ಶ್ರೀರಾಂಪುರ 2ನೇ ಹಂತದ, ಮೈಸೂರು ಬ್ಯಾಂಕ್ ಕಾಲೋನಿಯ 29, 30 ಮತ್ತು 31ನೇ ಬ್ಲಾಕ್‍ಗಳಲ್ಲಿರುವ ಮನೆಗಳಿಗೆ ಮಳೆನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ, ಸಚಿವರು ಉತ್ತರ ನೀಡಿದರು. ಈ ಭಾಗದಲ್ಲಿರುವ ಮನೆಗಳಿಗೆ ಮಳೆ ನೀರು ಬರುತ್ತಿದ್ದು, ಮಳೆ ನೀರು ಚರಂಡಿಯನ್ನು ಅಭಿವೃದ್ಧಿಪಡಿಸಲು, 14ನೇ ಹಣಕಾಸು ಯೋಜನೆ ಅಡಿಯಲ್ಲಿ ಶಿವ ಪುರದ ಹತ್ತಿರ ಹಾದು ಹೋಗಿರುವ ದೊಡ್ಡ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು 50 ಲಕ್ಷ ರೂ., ಶ್ರೀರಾಂಪುರ ಹೈಟೆನ್‍ಷನ್ ರಸ್ತೆಯಿಂದ ದೇವಯ್ಯನ ಹುಂಡಿ ಸ್ಮಶಾನದವರೆಗೆ ಮಳೆ ನೀರು ಚರಂಡಿ ರಿಪೇರಿ ಕಾಮಗಾರಿ ಹಾಗೂ ನೆಲಹಾಸು ಅಭಿವೃದ್ಧಿ ಕಾಮಗಾರಿಯನ್ನು 45 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸದರಿ ಮಳೆ ನೀರು ಚರಂಡಿಗೆ ಹೊಸದಾಗಿ ಎರಡು ಸೇತುವೆಗಳನ್ನು ನಿರ್ಮಿಸಲಾಗಿದೆ. ಕಾಲಕಾಲಕ್ಕೆ ಚರಂಡಿಯನ್ನು ಡಿಸಿಲ್ಟಿಂಗ್ ನಡೆಸುತ್ತಿದ್ದು ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಗಟ್ಟಲು ಕ್ರಮ ವಹಿಸಲಾಗಿದೆ ಎಂದು ಸಚಿವರು ವಿವರಿಸಿದರು.

ನಲ್ಲೂರು -ಜೆಲ್ಲಿ ಪಾಳ್ಯ ರಸ್ತೆ ಅಭಿವೃದ್ಧಿ: ರಾಮಪುರ-ವಡಕೆಹಳ್ಳ ಜಿಲ್ಲಾ ಮುಖ್ಯ ರಸ್ತೆಯು 73.4 ಕಿಮೀ ಇದ್ದು, ಈ ರಸ್ತೆಯಲ್ಲಿ ಬರುವ, ನಲ್ಲೂರು-ಹಂಚಿಪಾಳ್ಯ-ಪೆದ್ದನಪಾಳ್ಯ-ಕೂಡ್ಲೂರು-ಹೂಗ್ಯಂ-ಜೆಲ್ಲಿಪಾಳ್ಯದ 3.32 ಕಿ.ಮೀ ರಸೆಯನ್ನು ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಅಡಿಯಲ್ಲಿ 280.63 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿಧಾನ ಪರಿಷತ್ತಿಗೆ ತಿಳಿಸಿದರು.

ನಲ್ಲೂರು-ಜೆಲ್ಲಿಪಾಳ್ಯ ರಸ್ತೆ ದುಸ್ಥಿತಿಯಲ್ಲಿರುವ ಬಗ್ಗೆ ಹಾಗೂ ರಾಮಪುರ-ವಡಕೆಹಳ್ಳ ನಾಲ್‍ರೋಡ್ ಸೇತುವೆ ನಿರ್ಮಾಣದ ಬಗ್ಗೆ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ರಾಮಪುರ-ವಡಕೆಹಳ್ಳ ನಾಲ್ ರೋಡ್ ಸೇತುವೆ ನಿರ್ಮಾಣಕ್ಕೆ 350 ಲಕ್ಷ ರೂ. ಅನುದಾನ ಮಂಜೂರಾಗಿದ್ದು, 264 ಲಕ್ಷ ರೂ.ಗಳಿಗೆ ಟೆಂಡರ್ ಅನುಮೋದನೆಯಾಗಿದೆ. ಅರಣ್ಯ ಇಲಾಖೆಯವರು ಈ ಸೇತುವೆ ನಿರ್ಮಾಣಕ್ಕೆ ತಡೆಯೊಡ್ಡಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ, ಅರಣ್ಯ ಇಲಾಖೆಗೆ ಪತ್ರ ಬರೆದು, ಅನುಮೋದನೆಯ ನಿರೀಕ್ಷಿಸಲಾಗಿದೆ ಎಂದು ಸಚಿವರು ವಿವರಿಸಿದರು.

Translate »