ಶೌಚಾಲಯದ ಅರಿವು ಮೂಡಿಸಲು ಗ್ರಾಮಗಳಿಗೆ ಭೇಟಿ ಸುದ್ದಿಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಎಂ.ನಿರಂಜನ್ ಹೇಳಿಕೆ
ಚಾಮರಾಜನಗರ

ಶೌಚಾಲಯದ ಅರಿವು ಮೂಡಿಸಲು ಗ್ರಾಮಗಳಿಗೆ ಭೇಟಿ ಸುದ್ದಿಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಎಂ.ನಿರಂಜನ್ ಹೇಳಿಕೆ

August 7, 2018

ಯಳಂದೂರು: ‘ಶೌಚಾಲಯ ಬಳಕೆ ಮಾಡುವಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ತಂಡ ತಾಲೂಕಿನಾದ್ಯಂತ ಪ್ರತಿದಿನ ಒಂದೊಂದು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಾಗುವುದು’ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ.ನಿರಂಜನ್ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ತಾಲೂಕಿನಾದ್ಯಂತ ಶೇ.95 ರಷ್ಟು ಕುಟುಂಬಗಳು ಶೌಚ ಲಯ ನಿರ್ಮಿಸಿದ್ದು, ಬಯಲು ಬಹಿರ್ದೆಶೆ ಮುಕ್ತ ತಾಲೂಕು ಎಂದು ಘೋಷಿಸಲಾಗಿದೆ. ಆದರೆ, ವಾಸ್ತವವಾಗಿ ಶೇ. 75 ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಬಳಸುತ್ತಿದ್ದು, ಉಳಿದ ಕುಟುಂಬಗಳು ಶೌಚಾಲಯ ಬಳಕೆ ಮಾಡುವಂತೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018ರ ಕುರಿತು ದೇಶದಾದ್ಯಂತ 698 ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಸರ್ವೇ ಕಾರ್ಯ ನಡೆಯಲಿದೆ. ಈ ಸರ್ವೇ ಕಾರ್ಯವು 3 ವಿಭಾಗಗಳಲ್ಲಿ ನಡೆಯಲಿದ್ದು, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯವನ್ನು ಬಳಸುತ್ತಿರುವ ಕುರಿತು ಸರ್ವೆ ಮಾಡಲಿದ್ದು, ಇದಕ್ಕೆ 35 ಅಂಕ ನಿಗದಿಯಾಗಿದೆ ಎಂದರು.

ಸಾರ್ವಜನಿಕ ಸ್ಥಳಗಳಾದ ಕಚೇರಿ, ಶಾಲೆ, ಅಂಗನವಾಡಿ, ಆಸ್ಪತ್ರೆ, ಸಂತೆ, ಧಾರ್ಮಿಕ ಕೇಂದ್ರ ಮತ್ತು ಬಸ್ ನಿಲ್ದಾಣ ಗಳಲ್ಲಿರುವ ಶೌಚಾಲಯಗಳ ನಿರ್ವಹಣೆ ಮತ್ತು ಬಳಕೆಗೆ 35 ಅಂಕ ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ 30 ಅಂಕಗಳನ್ನು ನಿಗದಿಪಡಿಸಲಾಗಿದೆ. ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದಲ್ಲಿ ಸರ್ವೆ  ನಡೆಯಲಿದ್ದು, ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಾ ಕರ್ತೆಯರಿಗೆ ಈಗಾಗಲೇ ಕಾರ್ಯಗಾರ ನಡೆಸಲಾಗಿದೆ ಎಂದು ತಿಳಿಸಿದರು.

ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ರಾಜು ಮಾತನಾಡಿ, ತಾಲೂಕಿನಲ್ಲಿ ಒಟ್ಟು 11,428 ಕುಟುಂಬಗಳಿದ್ದು, 10,967 ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿ ಕೊಂಡಿದ್ದಾರೆ. ಜಾಗದ ಕೊರತೆ ಇರುವ ಕುಟುಂಬಗಳಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಲು ಕ್ರಮವಹಿಸ ಲಾಗುವುದು ಎಂದರು.

ಸ್ವಂತ ಹಣದಲ್ಲಿ ಶೌಚಾಲಯ ನಿರ್ಮಿಸಿ ಕೊಂಡಿರುವ ಕುಟುಂಬಗಳೆಲ್ಲಾ ಶೌಚಾಲಯ ವನ್ನು ಬಳಸುತ್ತಿದ್ದಾರೆ. ಆದರೆ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಸರ್ಕಾರದ ಪ್ರೋತ್ಸಾಹಧನದಿಂದ ನಿರ್ಮಿಸಿಕೊಂಡಿ ರುವ ಕೆಲವು ಕುಟುಂಬಗಳು ಅರಿವಿನ ಕೊರತೆ ಯಿಂದ ಶೌಚಾಲಯವನ್ನು ಬಳಸುತ್ತಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕಡ್ಡಾಯ ವಾಗಿ ಶೌಚಾಲಯ ಬಳಸುವಂತೆ ಪ್ರೇರೇಪಿ ಸಲು ಆಯ್ದ ಗ್ರಾಮಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳ ವ್ಯಾಪ್ತಿಯಲ್ಲಿ ಸಾರ್ವ ಜನಿಕರ ಬಳಕೆಗೆ ಶೌಚಾಲಯ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಈಗಾಗಲೇ ಗ್ರಾಮ ಮಟ್ಟದಲ್ಲಿ ನೈರ್ಮಲ್ಯ ಜಾಗೃತಿದಳ ರಚಿಸಲಾಗಿದ್ದು, ಆಯಾ ಗ್ರಾಮದ ವಾಟರ್ ಮನ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸದಸ್ಯರಾಗಿರುತ್ತಾರೆ. ಇವರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುವುದು. ಆ. 9ರಂದು ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಶಾಲಾ ಶಿಕ್ಷಕರು ಜಾಥಾ ನಡೆಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾ.ಪಂ. ಉಪಾ ಧ್ಯಕ್ಷೆ ಮಲ್ಲಾಜಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ಸದಸ್ಯರಾದ ನಂಜುಂಡಯ್ಯ, ಪದ್ಮಾವತಿ, ನಾಗರಾಜು, ಸಿದ್ದರಾಜು, ಶಾರದಾಂಬ, ಪುಟ್ಟು, ಪಲ್ಲವಿ, ಕಚೇರಿ ವ್ಯವಸ್ಥಾಪಕ ಮಂಜುನಾಥ್ ಹಾಜರಿದ್ದರು.

ಸರ್ವೇ ಕಾರ್ಯದಲ್ಲಿ ಯಳಂದೂರು ತಾಲೂಕು ಹೆಚ್ಚು ರ್ಯಾಂಕ್ ಪಡೆಯಲು ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಪ್ರಚುರಪಡಿಸುವ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು -ಎಂ.ನಿರಂಜನ್, ಅಧ್ಯಕ್ಷರು ಯಳಂದೂರು ತಾಲೂಕು ಪಂಚಾಯಿತಿ

Translate »