ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ
ಹಾಸನ

ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ

August 7, 2018

ಹಾಸನ: ವಿವಿಧ ಇಲಾಖೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ನಾನು ಯಾವುದೇ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕಾರಿಣಿ ಸಭೆಯ ವೊಂದರಲ್ಲಿ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಯಾವ ಸಚಿವರ ಬಳಿಯೂ ವರ್ಗಾವಣೆ ವಿಚಾರದಲ್ಲಿ ಚರ್ಚಿಸಿಲ್ಲ. ನನ್ನ ವೈಯಕ್ತಿಕ ಕೆಲಸಗಳನ್ನು ಯಾರಿಂದಲೂ ಮಾಡಿಸಿಕೊಂಡಿಲ್ಲ. ನನ್ನ ಇಲಾಖೆಯಲ್ಲಿ ನಡೆದಿರುವ ವರ್ಗಾವಣೆ ದಾಖಲೆಗಳನ್ನು ಯಡಿಯೂರಪ್ಪ ಅವರೇ ಗಮನಿಸಲಿ. ಮಾಧ್ಯಮಗಳ ಮೂಲಕ ಹೇಳಿಕೆ ಕೊಡುವುದನ್ನು ಬಿಟ್ಟು ಅವರು ಖುದ್ದಾಗಿ ಇಲಾಖೆಗೆ ಬಂದು ಕಡಿತಗಳನ್ನು ಪರಿಶೀಲಿಸಲಿ ಎಂದು ತಿರುಗೇಟು ನೀಡಿದರು.

ವರ್ಗಾವಣೆ ಕುರಿತಂತೆ ಯಾವುದೇ ಅಧಿಕಾರಿಗಳೊಂದಿಗೆ ಯಾವ ಹಣಕಾಸು ವ್ಯವಹಾರವೂ ನಡೆದಿಲ್ಲ. ಯಾವುದೇ ಇಲಾಖೆಗಳ ವರ್ಗಾವಣೆ ವಿಚಾರದಲ್ಲಿ ನಾನು ಕೈ ಹಾಕಿಲ್ಲ. ಯಾವ ಮಂತ್ರಿಗಳ ಬಳಿಯೂ ನಾನು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಚರ್ಚಿಸಿಲ್ಲ. ನನಗೆ ನನ್ನ ಜಿಲ್ಲೆ ಹಾಗೂ ಇಲಾಖೆ ಅಭಿವೃದ್ಧಿಯಷ್ಟೇ ಮುಖ್ಯ ಎಂದು ಪುನರುಚ್ಛರಿಸಿದರು.

ಈ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿ ಅವರ ಕ್ಷೇತ್ರ ಶಿವಮೊಗ್ಗವನ್ನು ಮಾತ್ರ ಅಭಿವೃದ್ಧಿಪಡಿಸಿದರು. ಉತ್ತರ ಕರ್ನಾಟಕಕ್ಕೆ ಯಡಿಯೂರಪ್ಪ, ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರದ ಸಹಕಾರ ಪಡೆದು ಉತ್ತರ ಕರ್ನಾಟಕ ಅಭಿವೃದ್ಧಿ ಪಡಿಸುವ ಕಾಳಜಿ ಪ್ರದರ್ಶಿಸಲಿ ಬಿಎಸ್‍ವೈಗೆ ಸವಾಲು ಹಾಕಿದರು.

Translate »