ಕೆಆರ್‌ಎಸ್‌ ಜಲಾಶಯದಿಂದ ಅಧಿಕ ನೀರು ಬಿಡುಗಡೆ ರಂಗನತಿಟ್ಟು ಪಕ್ಷಿಧಾಮ ಧ್ವಂಸ
ಮೈಸೂರು

ಕೆಆರ್‌ಎಸ್‌ ಜಲಾಶಯದಿಂದ ಅಧಿಕ ನೀರು ಬಿಡುಗಡೆ ರಂಗನತಿಟ್ಟು ಪಕ್ಷಿಧಾಮ ಧ್ವಂಸ

August 8, 2018

ಮೈಸೂರು: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಪರಿಣಾಮ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹ ದಿಂದ ಶ್ರೀರಂಗಪಟ್ಟಣ ಬಳಿಯ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಅಪಾರ ಹಾನಿ ಉಂಟಾಗಿದೆ.

ಕೊಡಗು ಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಒಳಹರಿವು ಅಧಿಕವಾಗಿದ್ದರಿಂದ ಕಳೆದ 20 ದಿನಗಳಿಂದ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಕ್ರಸ್ಟ್‍ಗೇಟ್‍ಗಳ ಮೂಲಕ ಹೊರ ಬಿಡಲಾಗುತ್ತಿದ್ದು, ಇದರಿಂದ ಪಕ್ಷಿಧಾಮ ತತ್ತರಿಸಿದೆ.

ದೇಶದಲ್ಲೇ ಖ್ಯಾತ ಪ್ರವಾಸಿ ಕೇಂದ್ರವೂ ಆಗಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿ ಗರು ಬರುತ್ತಾರೆ. 34 ದ್ವೀಪಗಳನ್ನು ಹೊಂದಿ ರುವ ಇಲ್ಲಿಗೆ ಅಪರೂಪದ ಪಕ್ಷಿಗಳೂ ಸೇರಿ ದಂತೆ ಸುಮಾರು 200 ಬಗೆಯ ಪಕ್ಷಿ ಸಂಕುಲ ವಲಸೆ ಬರುವುದು ವಿಶೇಷ.

ಪ್ರತೀ ದಿನ 60ರಿಂದ 75 ಸಾವಿರ ಕ್ಯೂಸೆಕ್ಸ್ ನಷ್ಟು ನೀರನ್ನು ಕೆಆರ್‌ಎಸ್‌ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹರಿಸಿದ್ದರಿಂದ ಇಲ್ಲಿನ ದ್ವೀಪ ಸಮೂಹದಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತಿರುವ ಪಕ್ಷಿಗಳಿಗೆ ತೀವ್ರ ತೊಂದರೆ ಯಾಗಿದೆ. ಜುಲೈ 14ರಿಂದ 30ರವರೆಗೆ ಇಲ್ಲಿನ ಬಹುತೇಕ ದ್ವೀಪಗಳು ಮುಳುಗಡೆ ಯಾಗಿವೆ. ಹಾಗಾಗಿ ಪ್ರವಾಹದಲ್ಲಿ ಪಕ್ಷಿಗಳು, ಮೊಟ್ಟೆ, ಮರಿಗಳು ಸೇರಿದಂತೆ ಅವುಗಳ ಗೂಡುಗಳು ಸಹ ಕೊಚ್ಚಿಹೋಗಿವೆ.

ಇಲ್ಲಿ ಸಂಭವಿಸಿರುವ ಹಾನಿ ಅಧ್ಯಯನಕ್ಕೆ ಸೋಮವಾರ ಅರಣ್ಯ ಇಲಾಖೆ ಅಧಿಕಾರಿ ಗಳು ಹಾಗೂ ಪಕ್ಷಿ ತಜ್ಞರ ತಂಡ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸಿದ್ದರಾಮಪ್ಪ ಚಲ್ಕಾಪುರೆ ಮತ್ತು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ರಂಗನತಿಟ್ಟು ಪಕ್ಷಿಧಾಮದ ಹಾನಿ ಕುರಿತು ಪರಿಶೀಲನೆ ನಡೆಸಿದರು. ದ್ವೀಪ ಸಮೂಹದ ಮರಗಳು ಬುಡಸಮೇತ ಕೊಚ್ಚಿ ಹೋಗಿರುವುದರಿಂದ ಅಲ್ಲಿ ಗೂಡು ಕಟ್ಟಿಕೊಂಡು ಆಶ್ರಯ ಪಡೆದಿದ್ದ ಪಕ್ಷಿಗಳು, ಮರಿಗಳೂ ಸಹ ನೀರಿನಲ್ಲಿ ಕೊಚ್ಚಿಹೋಗಿರುವುದು ಪರಿ ಶೀಲನೆ ವೇಳೆ ಕಂಡು ಬಂತು. ನದಿಯ ಇಕ್ಕೆಲಗಳಲ್ಲಿ ಅಳವಡಿಸಲಾಗಿದ್ದ ಬೇಲಿಯ ಕಾಂಕ್ರಿಟ್ ಕಂಬಗಳೂ ಸಹ ನೆಲಸಮ ಗೊಂಡಿದ್ದು, ಕೆಲವೆಡೆ ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ಅಪಾರ ಪ್ರಮಾಣದಲ್ಲಿ ಬಂದು ಶೇಖರಣೆಯಾಗಿದೆ. ಕಳೆದ ಬಾರಿ ನಡೆಸಿದ್ದ ಪಕ್ಷಿ ಗಣತಿ ಆಧರಿಸಿ ಪ್ರವಾಹದ ನಂತರ ಆಗಿರಬಹುದಾದ ಅಂದಾಜು ನಡೆಸುತ್ತಿದ್ದಾರೆ. ರಂಗನತಿಟ್ಟಿನ ಮರಗಿಡಗಳು, ಪಕ್ಷಿ ಸಂಕುಲದ ಹಾನಿ ಬಗ್ಗೆ ಅಧ್ಯಯನ ನಡೆಸಿದ ನಂತರ ಕೈಗೊಳ್ಳಬಹುದಾದ ಪರಿಹಾರೋಪಾಯ ಹಾಗೂ ಮುಂಜಾಗ್ರತಾ ಕ್ರಮದ ಕುರಿತಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಿದ್ದರಾಮಪ್ಪ ತಿಳಿಸಿದ್ದಾರೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಅಧಿಕ ಸಸಿಗಳನ್ನು ಬೆಳೆಸುವುದು, ಪ್ರವಾಹ ಬಂದಾಗ ಮಣ್ಣು ಕೊಚ್ಚಿಕೊಂಡು ಹೋಗದಂತೆ ಮರಳಿನ ಮೂಟೆಗಳನ್ನು ಹಾಕುವುದು, ದ್ವೀಪಗಳಿಗೂ ಹಾನಿ ಆಗದಂತೆ ತಡೆಯುವುದೂ ಹೀಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದೂ ತಿಳಿಸಿದರು.

ಮನುಷ್ಯ ಮಾಡಿದ ನಷ್ಟ: ರಂಗನತಿಟ್ಟು ಪಕ್ಷಿಧಾಮದ ಹಾನಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ಮೂಲದ ಪಕ್ಷಿ ತಜ್ಞ ರಘುರಾವ್ ಅವರು ಇದು ಮನುಷ್ಯ ನಿಂದಾಗಿರುವ ನಷ್ಟ. ಅರಣ್ಯ ಇಲಾಖೆ ಇಲ್ಲಿ ಹೆಚ್ಚು ಏನನ್ನು ಮಾಡಲು ಸಾಧ್ಯವಿಲ್ಲ. ಪಕ್ಷಿಗಳನ್ನು ಉಳಿಸಬೇಕಾದರೆ ಹೆಚ್ಚುವರಿ ನೀರು ಹರಿಸಲು ಪ್ರತ್ಯೇಕ ಚಾನೆಲ್ ವ್ಯವಸ್ಥೆ ಮಾಡಬೇಕಷ್ಟೇ ಎಂದು ಸಲಹೆ ನೀಡಿದರು.

ಸಂತಾನದ ಉದ್ದೇಶಕ್ಕೆ ಪ್ರಶಾಂತ ವಾತಾವರಣ ಎಂಬ ಕಾರಣಕ್ಕೆ ಪಕ್ಷಿಗಳು ರಂಗನತಿಟ್ಟು ದ್ವೀಪಗಳನ್ನು ಆಯ್ದುಕೊಳ್ಳುತ್ತವೆ. ಅಲ್ಲಿ ದಿಢೀರ್ ಪ್ರವಾಹ ಬಂದರೆ ಸಂತಾನ ಪ್ರಕ್ರಿಯೆಯಲ್ಲಿ ತೊಡಗಿರುವ ಪಕ್ಷಿಗಳಿಗೆ ಆಘಾತವಾಗುತ್ತದೆ. ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರು ಹೊರಬಿಡುವುದಾದಲ್ಲಿ ಅಧಿಕಾರಿಗಳು ಚಿಂತಿಸಬೇಕು. ಒಂದೇ ಭಾರಿ ಹೆಚ್ಚು ನೀರು ಹರಿಸುವ ಬದಲು ಹಂತ-ಹಂತವಾಗಿ ಬಿಡುವ ಬಗ್ಗೆ ಯೋಚಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.

Translate »