ಅಧಿಕಾರ ತ್ಯಾಗಕ್ಕೆ ಸಿದ್ಧ
ಮೈಸೂರು

ಅಧಿಕಾರ ತ್ಯಾಗಕ್ಕೆ ಸಿದ್ಧ

January 29, 2019

ಬೆಂಗಳೂರು: ನನ್ನ ಕಾರ್ಯವೈಖರಿ ಇಷ್ಟವಾಗದಿದ್ದರೆ ಅಧಿಕಾರ ತ್ಯಜಿ ಸಲು ಸಿದ್ಧ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಖಾರವಾಗಿ ನುಡಿದಿ ದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮ ಕಾರ್ಯವೈಖರಿ ಬಗ್ಗೆ ಅಪಸ್ವರವೆತ್ತಿದ ಬೆನ್ನಲ್ಲೇ ಇಂದು ಪರಿಸ್ಥಿತಿ ಹೀಗೆ ಮುಂದುವರಿದರೆ ಸಹಿಸಲಾಗದು ಎಂದು ಮಿತ್ರ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರ ನೀಡಿ ಎಂದು ಇವರ ಮನೆ ಮುಂದೆ ಅರ್ಜಿ ಹಾಕಿಕೊಂಡಿರಲಿಲ್ಲ. ಅವರೇ ಮನೆ ಬಾಗಿಲಿಗೆ ಬಂದು ಷರತ್ತಿಲ್ಲದೆ ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿ ಕೊಂಡಿದ್ದರು.

ಮೆಟ್ರೋ ಆರು ಬೋಗಿಗಳ ರೈಲು ಸಂಚಾ ರಕ್ಕೆ ಚಾಲನೆ ನೀಡಿದ ನಂತರ
ಕೋಪೋದ್ರಿಕ್ತರಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸುವಾಗ ಪಕ್ಕದಲ್ಲೇ ಇದ್ದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಸರ್ಕಾರದ ವಿರುದ್ಧ ಅಪಸ್ವರವೆತ್ತಿದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್‍ಗೆ ತಕ್ಷಣವೇ ನೋಟೀಸ್ ಜಾರಿಗೊಳಿಸುವುದಾಗಿ ತಿಳಿಸಿದರು. ಸೋಮಶೇಖರ್ ಹಾಗೂ ವಸತಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಮುಖ್ಯ ಮಂತ್ರಿಯವರು ಇಂತಹ ಹೇಳಿಕೆ ನೀಡುತ್ತಿದ್ದಂತೆ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿಯ ಪ್ರಧಾನ ಕಾರ್ಯ ದರ್ಶಿ ವೇಣುಗೋಪಾಲ್ ಟ್ವೀಟ್ ಮಾಡಿ, ಸೋಮ ಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿ ದ್ದಾರೆ. ಮತ್ತೊಂದೆಡೆ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ,
ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಕಿಡಿಕಾರಿರುವುದಲ್ಲದೆ ಅವರ ನಡವಳಿಕೆ ವರಿಷ್ಠರ ಇಚ್ಛೆಗೆ ವಿರುದ್ಧವಾಗಿದೆ ಎಂದಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಸಚಿವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.

ಚುನಾವಣೆಗೆ ಇನ್ನು ನಾಲ್ಕು ವರ್ಷ ಇರುವಾಗ ಮುಂದಿನ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಬದಲಿಸಿ ಸಿದ್ದರಾಮಯ್ಯನನ್ನು ಮುಖ್ಯ ಮಂತ್ರಿ ಮಾಡಲು ಹೊರಟಿದ್ದೀರೋ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಮುಖ್ಯಮಂತ್ರಿಯವರು ನಾನೇನು ಕುರ್ಚಿಗೆ ಅಂಟಿಕೊಂಡಿಲ್ಲ, ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ, ಪದೇ ಪದೆ ಕಾಂಗ್ರೆಸ್ ನಾಯಕರು ಮಿತಿಮೀರಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಉತ್ತರ ಕೊಡಬೇಕು. ನಾನು ಅದಕ್ಕೆ ಉತ್ತರ ಕೊಡಲು ಸಮರ್ಪಕ ವ್ಯಕ್ತಿಯಲ್ಲ. ಆದರೆ ಪದೇ ಪದೆ ಕಾಂಗ್ರೆಸ್ ಶಾಸಕರು ಹೀಗೆ ಹೇಳಿಕೊಂಡು ತಿರುಗುತ್ತಿದ್ದಾರೆ. ಹೇಗೆ ಎಂದು ಪ್ರಶ್ನಿಸಿದ ಅವರು, ಇದು ಮಿತ್ರಪಕ್ಷಕ್ಕೆ ಕೊನೆಯ ಎಚ್ಚರಿಕೆ. ಮತ್ತೆ ಮುಂದುವರಿದಲ್ಲಿ ನಾನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ. ಬೆಂಗಳೂರಿನಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಕಾಮಗಾರಿಗೆ ಮೀಸಲಿಡ ಲಾಗಿದೆ. ಈ ಬಗ್ಗೆ ಪಕ್ಷದ ಸಭೆಯಲ್ಲೂ, ಪ್ರಸ್ತಾಪಿಸಿದ್ದೇನೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ನಾನು ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ನಮ್ಮ ನಡುವೆ ಯಾವುದೇ ತೊಂದರೆ ಇಲ್ಲ. ಆದರೆ ಶಾಸಕರ ಸಹಕಾರವೂ ಅಗತ್ಯ ಎಂದರು.

ಕ್ಷಮೆ ಕೇಳಿದ ‘ಕೈ’ ವರಿಷ್ಠರು
ಬೆಂಗಳೂರು:ಕಾಂಗ್ರೆಸ್ ಶಾಸಕರ ವರ್ತನೆಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರ ಕ್ಷಮೆ ಯಾಚಿಸುವುದರ ಜೊತೆಗೆ ಸಂಬಂಧಪಟ್ಟ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯ ಮಂತ್ರಿಗಳಿಗೆ ಮುಜುಗರ ಉಂಟಾಗುವಂತೆ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಯಾಚಿಸಿದರು. ಅಲ್ಲದೇ, ಇನ್ನು ಮುಂದೆ ಹೀಗಾಗ ದಂತೆ ಸಂಬಂಧಪಟ್ಟ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎನ್ನಲಾಗಿದೆ. ಈ ವೇಳೆ ವೇಣು ಗೋಪಾಲ್ ಜೊತೆ ಮಾತನಾಡಿದ ಮುಖ್ಯ ಮಂತ್ರಿಗಳು, ಸಿದ್ದರಾಮಯ್ಯನವರ ಬೆಂಬಲಿಗರೇ ಪದೇ ಪದೆ ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ಒಂದು ವಾರ ಸುಮ್ಮನಿದ್ದು, ಮುಂದಿನ ವಾರವೇ ಯಾವುದಾದರೂ ಗೊಂದಲ ಮಾಡುವುದೇ ಇವರ ಕೆಲಸವಾಗಿ ಬಿಟ್ಟಿದೆ. ಆಪರೇಷನ್ ಕಮಲ ರೂವಾರಿಗಳು ಕೂಡ ಇವರೇ ಆಗಿದ್ದಾರೆ ಎಂದು ವಿವರಿಸಿದರಲ್ಲದೇ, ಕಾಂಗ್ರೆಸ್‍ನ ಈ ಶಾಸಕರಿಂದಾಗಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಜನರಿಗೆ ತಲುಪುತ್ತಿಲ್ಲ. ಬದಲಾಗಿ ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿದೆ. ಹೀಗಾದರೆ ಸರ್ಕಾರಕ್ಕೆ ಜನಬೆಂಬಲ ದೊರೆಯುವುದಿಲ್ಲ.

ಹೀಗಿರುವಾಗ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯು ವುದಾದರೂ ಹೇಗೆ? ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಈ ವೇಳೆ ವೇಣು ಗೋಪಾಲ್ ಅವರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರಲ್ಲದೇ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಸಂಬಂಧ ಭೇಟಿ ಮಾಡುವಂತೆಯೂ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು ಎಂದು ಹೇಳಲಾಗಿದೆ.

ಹಿನ್ನೆಲೆ: ಕಾಂಗ್ರೆಸ್ ಶಾಸಕರಾದ ಹೆಚ್.ಟಿ. ಸೋಮಶೇಖರ್, ಡಾ. ಸುಧಾಕರ್, ಎಂಟಿಬಿ ನಾಗರಾಜು ಮತ್ತು ಹೆಚ್.ಎಂ. ರೇವಣ್ಣ ಅವರು, ಪ್ರತ್ಯೇಕ ಸಮಾರಂಭಗಳಲ್ಲಿ ‘ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಗಳಾಗಿದ್ದರೂ ನಮಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳು. ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಎಲ್ಲಾ ಜನಾಂಗದವರ ಉದ್ಧಾರಕ್ಕೆ ಕಾರಣವಾಗಿತ್ತು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರೂ ಇನ್ನೂ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ. ಸಿದ್ದರಾಮಯ್ಯ ಅವರೇನು ಮಗ-ಸೊಸೆ ಸೇರಿದಂತೆ ಕುಟುಂಬದವರಿಗೆ ಅಧಿಕಾರ ಕೊಡಲು ಹೋಗಲಿಲ್ಲ. ಬದಲಾಗಿ ವಂಚಿತರಿಗೆ ಅವಕಾಶ ನೀಡುತ್ತಿದ್ದರು’ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲೂ ನಿನ್ನೆ ಸೋಮಶೇಖರ್ ಸಿದ್ದರಾಮಯ್ಯ ಸಮ್ಮುಖದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ, ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ಕಾಂಗ್ರೆಸ್ ಶಾಸಕರ ವರ್ತನೆಯನ್ನು ಸಹಿಸಲಾಗಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇದರಿಂದ ನನಗೇನೂ ಆಗಬೇಕಾಗಿಲ್ಲ. ನಷ್ಟ ಕಾಂಗ್ರೆಸ್‍ಗೆ ಎಂದು ಕಾಂಗ್ರೆಸ್ ಹೈಕಮಾಂಡ್‍ಗೂ ಸಂದೇಶ ಮುಟ್ಟಲೆಂದು ಇಂಗ್ಲಿಷ್‍ನಲ್ಲಿ ಮಾತನಾಡಿದ್ದರು.

ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಿ
ಬೆಂಗಳೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಲಿಗೆ ಹಗ್ಗಕಟ್ಟಿ ಅಭಿವೃದ್ಧಿ ಕೆಲಸ ಸಾಗದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಇದೇ ಸ್ಥಿತಿ ಮುಂದುವರಿದರೆ ನಮ್ಮ ನಿರ್ಣಯ ಬೇರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನಾವೇನೂ ಯಾರ ಬಳಿಯೂ ಸರ್ಕಾರ ರಚನೆಗೆ ಅರ್ಜಿ ಹಾಕಿ ಕೊಂಡಿರಲಿಲ್ಲ. ಕಾಂಗ್ರೆಸ್ ನವರೇ ಜೆಡಿಎಸ್ ವರಿಷ್ಠ ದೇವೇಗೌಡರ ಮನೆ ಬಾಗಿಲ ಬಳಿ ಬಂದು,ಕೋಮುವಾದಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡೋಣ. ನಾವು ನಿಮಗೆ ಬೇಷರತ್ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಕಳೆದ ಕೆಲವು ತಿಂಗಳಿನಿಂದ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಅನಗತ್ಯ ಗೊಂದಲ ಸೃಷ್ಟಿಸಿ, ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ.

Translate »