ತಾಪಂ ಮಾಜಿ ಸದಸ್ಯೆ ಮೇಲೆ ಅಬ್ಬರಿಸಿದ ಸಿದ್ದರಾಮಯ್ಯ!
ಮೈಸೂರು

ತಾಪಂ ಮಾಜಿ ಸದಸ್ಯೆ ಮೇಲೆ ಅಬ್ಬರಿಸಿದ ಸಿದ್ದರಾಮಯ್ಯ!

January 29, 2019

ಟಿ.ನರಸೀಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ಕೈಗೆ ಸಿಗುತ್ತಿಲ್ಲ ಎಂದು ದೂರಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯ ಕೈಯ್ಯಲ್ಲಿದ್ದ ಮೈಕನ್ನು ಕಿತ್ತುಕೊಂಡು, ಅಬ್ಬರಿಸಿದ ಪ್ರಕರಣ ತಾಲೂಕಿನ ಗರ್ಗೇಶ್ವರಿಯಲ್ಲಿ ಇಂದು ನಡೆದಿದೆ. ಗ್ರಾಮದಲ್ಲಿ ಇಂದು ನಡೆದ ವಿದ್ಯುತ್ ಉಪಕೇಂದ್ರ ಶಂಕುಸ್ಥಾಪನೆ ಸಮಾರಂಭ ದಲ್ಲಿ ಸಿದ್ದರಾಮಯ್ಯನವರು ಹೀಗೆ ದರ್ಪ ತೋರಿರುವ ವೀಡಿಯೋ ವೈರಲ್ ಆಗಿದ್ದು, ಅವರ ಈ ವರ್ತನೆ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬರುತ್ತಿವೆ.

ವಿವರ: ಶಂಕುಸ್ಥಾಪನೆ ಸಮಾರಂಭದ ವೇಳೆ ತಾಪಂ ಮಾಜಿ ಸದಸ್ಯೆ ಜಮಲಾರ್, ತಾಲೂಕು ಟ್ರಜರಿ ಕಚೇರಿಯಲ್ಲಿ ಕೆಲಸ-ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಶಾಸಕರು(ಡಾ.ಯತೀಂದ್ರ) ಚುನಾವಣೆ ನಂತರ ಕೈಗೆ ಸಿಗುತ್ತಿಲ್ಲ. ಅಧಿಕಾರಿಗಳು ಯಾವೊಂದು ಕೆಲಸವನ್ನು ಮಾಡಿಕೊಡುತ್ತಿಲ್ಲ. ವಂಶವೃಕ್ಷ, ಪೋಡಿ ಖಾತ, ಪಿಂಚಣಿ ವಿಚಾರದಲ್ಲಿ ಜನರನ್ನು ಅಲೆಸುತ್ತಿದ್ದಾರೆ ಎಂದು ದೂರಿ ದರು. ಇದಕ್ಕೆ ಆಯ್ತು ಸುಮ್ಮನಿರಮ್ಮ ಎಂದು ಸಿದ್ದರಾಮಯ್ಯ ಹೇಳುತ್ತಲೇ ಅದನ್ನು ಕಿವಿಗೆ ಹಾಕಿಕೊಳ್ಳದ ಆ ಮಹಿಳೆ ಸಿದ್ದರಾಮಯ್ಯ ಮುಂಭಾಗದಲ್ಲಿದ್ದ ಟೇಬಲ್ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಹನೆ ಕಳೆದುಕೊಂಡು, ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಜಮಲಾರ್ ಅವರ ಕೈಯ್ಯಲ್ಲಿದ್ದ ಮೈಕನ್ನು, ಅವರ ಮೇಲಿದ್ದ ವೇಲ್ ಸಮೇತ ಕಿತ್ತುಕೊಂಡು ‘ಏನಮ್ಮ ಟೇಬಲ್ ಕುಟ್ಟಿ ಮಾತನಾಡುತ್ತಿದ್ದೀಯಾ? ಹೋಗಿ ಕೂತ್ಕೋ… ಶಾಸಕರು ಕೈಗೆ ಸಿಕ್ತಾ ಇಲ್ವೇನಮ್ಮಾ? ನಾವೇನೂ ದೇಶ ಹಾಳ್ ಮಾಡ್ತಾ ಇದ್ದೀವಿ ಅನ್ನೋ ಹಾಗೆ ಟೇಬಲ್ ಕುಟ್ತಾ ಇದ್ದೀಯಲ್ಲಾ. ಹೇಯ್…ನಡೆಯಮ್ಮ ಸೈಡಿಗೆ, ಮಾತನಾಡಬೇಡ, ಹೇಯ್ ಮೆಲ್ಲಗೆ ಮಾತನಾಡು, ಮುಚ್ಚಮ್ಮ ಬಾಯಿನಾ… ಕೂತ್ಕೋ ಮತ್ತೆ ಬಾಯ್ ಮುಚ್ಕೊಂಡು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮಲಾರ್ ಅವರು ಮತ್ತೇ ಏನನ್ನೋ ಹೇಳಲು ಮುಂದಾದಾಗ ‘ಸುಮ್ಮನೆ ಕೂತ್ಕೋಳಮ್ಮಾ ಸಾಕು’ ಎಂದು ಸಿದ್ದರಾಮಯ್ಯ ಗದರಿದರು. ಅದೇ ವೇಳೆ ಇತರರು ಜಮಲಾರ್‍ರವರನ್ನು ಸುಮ್ಮನಾಗಿಸಿದರು. ಆ ನಂತರ ಜಮಲಾರ್‍ರವರ ಪ್ರಶ್ನೆಗೆ ಆಕ್ರೋಶದಿಂದಲೇ ಉತ್ತರಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಜೆಡಿಎಸ್ ಸಿಎಂ ಇದ್ದಾರೆ. ನಮ್ಮದು ಮೈತ್ರಿ ಸರ್ಕಾರ. ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡದೇ ಇದ್ದರೆ ಅಧಿಕೃತವಾಗಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಬೇಕು. ನಮ್ಮ ಗಮನಕ್ಕೂ ತರಬೇಕು ಎಂದರಲ್ಲದೆ, ‘ಅವನು(ಶಾಸಕ) ಬೇಕಾದ ಅಧಿಕಾರಿಯನ್ನು ಹಾಕೊಳ್ತಾನೆ, ನಾವು ಕೇಳೋಕೆ ಆಗುತ್ತಾ?’ ನೀನು ಹೇಳಿದ್ರೆ ಆ ಅಧಿಕಾರಿಗೆ ನಾನೇ ಹೇಳ್ತಿದ್ದೇನಲ್ಲಾ ಎಂದು ಹೇಳಿದರು.

ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಇದೊಂದು ಆಕಸ್ಮಿಕ ಘಟನೆ. ಯಾವುದೇ ದುರುದ್ದೇಶವಿರಲಿಲ್ಲ. ಆಕೆಯನ್ನು 15 ವರ್ಷದಿಂದ ಬಲ್ಲೆ. ಇದರ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ ಎಂದು ಹೇಳಿದ್ದಾರೆ. ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಮಲಾರ್ ಟೇಬಲ್ ಕುಟ್ಟಿ ಮಾತನಾಡಿದ್ದು ನನ್ನ ತಪ್ಪು. ಅದಕ್ಕೆ ಅವರು ಕೋಪ ಮಾಡಿಕೊಂಡರು. ಇಲ್ಲಿಯವರೆಗೆ ಇಷ್ಟೊಂದು ಕೋಪ ಮಾಡಿಕೊಂಡವರಲ್ಲ. ಸಿದ್ದರಾಮಯ್ಯನವರು ಒಳ್ಳಯವರು. ಒಳ್ಳೆ ಕೆಲಸ ಮಾಡಿದ್ದಾರೆ. ಈ ತರಹದ ಸನ್ನಿವೇಶಕ್ಕೆ ನಾನೇ ಕಾರಣ. ಸಿದ್ದರಾಮಯ್ಯ ಟೈಗರ್ ಆಫ್ ಮೈಸೂರ್ ಎಂದು ಹೇಳಿ ಮುಂದೆಯೂ ಕಾಂಗ್ರೆಸ್‍ಗೆ ವೋಟ್ ಹಾಕುವುದಾಗಿ ಘೋಷಿಸಿದರು.

ನಾಯಕರಾದವರು ಸಾವಧಾನವಾಗಿ ಮಾತನಾಡಬೇಕು. ಕೂಗಾಡಿ, ಚೀರಾಡುವ ಮೂಲಕ ಸಿದ್ದರಾಮಯ್ಯ ಜೆಡಿಎಸ್‍ನವರ ಮೇಲಿನ ಆಕ್ರೋಶವನ್ನು ಹೊರಹಾಕಿದ್ದಾರೆ. – ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಕಲಾಸಿಪಾಳ್ಯದ ಕಾಂಗ್ರೆಸ್ ಸರ್ಕಾರ ಎಂಬುದು ಮಾತ್ರವಲ್ಲ. ಗೂಂಡಾಗಿರಿ ಸರ್ಕಾರ ಎಂಬುದು ಸಿದ್ದರಾಮಯ್ಯರ ನಡವಳಿಕೆಯಿಂದ ಸಾಬೀತಾಗಿದೆ. ರಾಜ್ಯದ ಜನ ಈ ಸರ್ಕಾರ ಬಗ್ಗೆ ಸರಿಯಾದ ತೀರ್ಮಾನವನ್ನು ಕೈಗೊಳ್ಳುವ ಕಾಲ ಬರುತ್ತದೆ. – ಕೆ.ಎಸ್.ಈಶ್ವರಪ್ಪ, ಶಾಸಕರು.

Translate »