ಮೈಸೂರು: ಅರಣ್ಯ ಪ್ರದೇಶದಲ್ಲಿ ಬಹಿರ್ದೆಸೆಗೆ ಹೋದ ವ್ಯಕ್ತಿಯೊಬ್ಬರನ್ನು ಹುಲಿ ಕೊಂದು ಹಾಕಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಪಂಚಾಯ್ತಿ ವ್ಯಾಪ್ತಿಯ ಹುಲ್ಮುಟ್ಟು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ರಾಜೀವ್‍ಗಾಂಧಿ ಹುಲಿ ಸಂರಕ್ಷಿತ ಪ್ರದೇಶ(ನಾಗರಹೊಳೆ)ದ ಬಳ್ಳೆ ವಲಯ ವ್ಯಾಪ್ತಿಗೆ ಬರುವ ಹುಲ್ಮುಟ್ಟು ಗ್ರಾಮದ ನಿವಾಸಿ ದೇವಸೆಗೌಡನ ಮಗ ಚಿನ್ನಪ್ಪ(39) ಹುಲಿ ದಾಳಿಗೆ ಬಲಿಯಾದವರಾಗಿದ್ದಾರೆ. ಹೆಚ್.ಡಿ.ಕೋಟೆ ಮಾನಂದ ವಾಡಿ ಮುಖ್ಯ ರಸ್ತೆಯಲ್ಲಿರುವ ಮಚ್ಚೂರು ಹಾಡಿ ಸಮೀಪ ವಿರುವ ಹುಲ್ಮುಟ್ಟು ಗ್ರಾಮ ಕಾಡಂಚಿನ ಗ್ರಾಮವಾಗಿದ್ದು, ಇಂದು ಬೆಳಿಗ್ಗೆ 7.10ರಲ್ಲಿ ಮನೆಯಿಂದ ಹೊರ ಬಂದ ಚಿನ್ನಪ್ಪ ಬಹಿರ್ದೆಸೆಗೆಂದು ಮನೆಯ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಹೋದಾಗ ಹುಲಿ ಏಕಾಏಕಿ ದಾಳಿ ಮಾಡಿದೆ. ಮನೆಯ ಸಮೀಪದಲ್ಲಿಯೇ ಈ ದಾಳಿ ನಡೆದಿದ್ದು, ಚಿನ್ನಪ್ಪನ ಸಹೋದರ ಸ್ವಾಮಿ, ಹುಲಿ ದಾಳಿ ನೋಡಿ ಕಿರುಚಾಡಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು ಮನೆಯಿಂದ ಹೊರ ಬರುತ್ತಿದ್ದಂತೆಯೇ ಹುಲಿ ಚಿನ್ನಪ್ಪ ಅವರನ್ನು ಕಾಡಿನೊಳಗೆ ಸುಮಾರು 300 ಮೀಟರ್ ಎಳೆದೊಯ್ದಿದೆ. ಜನರು ಹಿಂಬಾಲಿಸುತ್ತಿರುವುದನ್ನು ಕಂಡ ಹುಲಿ ಪೊದೆಯೊಂದರ ಬಳಿ ಚಿನ್ನಪ್ಪನ ಬಿಟ್ಟು ಹೋಗಿದೆ. ಅಷ್ಟರಲ್ಲಾಗಲೇ ಕುತ್ತಿಗೆ, ತಲೆ, ಹಣೆಯ ಮೇಲೆ ಹುಲಿ ಕಚ್ಚಿ ತೀವ್ರ ಗಾಯವಾಗಿದ್ದು, ಅಧಿಕ ರಕ್ತಸ್ರಾವದಿಂದ ಚಿನ್ನಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಮೃತ ಚಿನ್ನಪ್ಪ ಪತ್ನಿ ದೇವಕಿ, ಪುತ್ರಿ ಮಣಿಯಪ್ಪ(12), ಪುತ್ರ ಪ್ರಶಾಂತ್(9) ಶವದ ಬಳಿ ರೋಧಿಸತೊಡಗಿದರು. ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಹಾಡಿ ನಿವಾಸಿಗಳು ಹುಲ್ಮುಟ್ಟು ಗ್ರಾಮಕ್ಕೆ ಬಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಗುವಿನ ವಾತಾವರಣ: ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ನಾರಾಯಣಸ್ವಾಮಿ ಆಗಮಿಸಿ, ಪರಿಶೀಲಿಸಿದರಲ್ಲದೆ, ಆಕ್ರೋಶಗೊಂಡಿದ್ದ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಈ ವೇಳೆ ಹುಲ್ಮುಟ್ಟು ಗ್ರಾಮ, ಮಚ್ಚೂರು ಹಾಡಿ, ಮಾನಿಮೂಲೆ ಹಾಡಿ ಸೇರಿದಂತೆ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಹಲವು ವರ್ಷಗಳಿಂದ ಕಾಡಂಚಿನ ಗ್ರಾಮಗಳ ಸುತ್ತ ಕಂದಕ ತೋಡಿ, ಸೋಲಾರ್ ಬೇಲಿ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆರ್‍ಎಫ್‍ಒ ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಗ್ರಾಮಸ್ಥರು ಸದಾ ಜೀವಭಯದಿಂದ ಬದುಕು ವಂತಾಗಿದೆ. ದಾಳಿ ನಡೆಸಿದ ಹುಲಿಯನ್ನು ಹಿಡಿಯಲು ಬೋನ್ ಇಡಬೇಕು. ಐದಾರು ತಲೆ ಮಾರಿನಿಂದ ಈ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಈ ಹಿಂದೆ ಹುಲಿ, ಆನೆ ದಾಳಿ ನಡೆಸಿದ ನಿದರ್ಶನಗಳಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಆನೆ ದಾಳಿ ಹೆಚ್ಚಾಗುತ್ತಿದೆ. ಎರಡು ತಿಂಗಳಿಂದ ಗ್ರಾಮಗಳಿಗೆ ಹುಲಿ ಬಂದು ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ಕಳೆದ ತಿಂಗಳಷ್ಟೇ ಸಮೀಪದ ಮಾನಿಮೂಲೆ ಹಾಡಿಯ ವ್ಯಕ್ತಿಯೊಬ್ಬನ್ನನ್ನು ಹುಲಿ ತಿಂದಿದೆ. ಆರ್‍ಎಫ್‍ಒಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.