ಮೈಸೂರಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ
ಮೈಸೂರು

ಮೈಸೂರಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

January 29, 2019

ಮೈಸೂರು: ಚಾಕುವಿನಿಂದ ಮನ ಬಂದಂತೆ ಭಯಂಕರವಾಗಿ ಇರಿದು, ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರು ರೈಲ್ವೆ ಕೆಳ ಸೇತುವೆ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಬಳಿಯ ಮುನೇಶ್ವರನಗರ ನಿವಾಸಿ ಸಿದ್ದಪ್ಪ ಅವರ ಮಗ ಎಸ್.ಮನು ಅಲಿಯಾಸ್ ಜಾನಿ (28) ಹತ್ಯೆಯಾದ ಆಟೋ ಡ್ರೈವರ್. ಈತನ ಮೇಲೆ ಮಹಾರಾಜ ಕಾಲೇಜು ಮೈದಾನದ ಬಳಿ ದಾಳಿ ನಡೆಸಿದ ದುಷ್ಕರ್ಮಿಗಳು. ಆಟೋದಿಂದ ಹೊರಗೆಳೆದು 15 ಬಾರಿ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು, ಹತ್ಯೆಗೈದು ಡ್ಯಾಗರ್ ಅನ್ನು ಆತನ ಬೆನ್ನಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಳೆದ ಮಧ್ಯರಾತ್ರಿ ಸುಮಾರು 12.15ರಿಂದ 1 ಗಂಟೆ ನಡುವೆ ಈ ಹತ್ಯೆ ನಡೆದಿರ ಬಹುದೆಂದು ಶಂಕಿಸಲಾಗಿದೆ.

ಅಗ್ನಿ ಶಾಮಕದಳ ಠಾಣೆ ಕಡೆಯಿಂದ ರಾಮಸ್ವಾಮಿ ಸರ್ಕಲ್ ಕಡೆಗೆ ತನ್ನ ಆಟೋ (ಕೆಎಂ 09-ಸಿ 2023)ದಲ್ಲಿ ಬರುತ್ತಿದ್ದಾಗ ಹಿಂಬಾಲಿಸಿರುವ ಹಂತಕರ ಗುಂಪು, ರೈಲ್ವೆ ಅಂಡರ್‍ಬ್ರಿಡ್ಜ್ ದಾಟಿದ ಬಳಿಕ ತಡೆದು ಮನು ಮೇಲೆ ದಾಳಿ ನಡೆಸಿದೆ. ಮನು ಎದೆ, ಭುಜ, ಕಾಲು, ಕೈ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಇರಿದಿರುವ ಹಂತಕರು, ತಲೆಗೂ ಮಚ್ಚಿನಿಂದ ಹೊಡೆದಿದ್ದಾರೆ. ಮಕಾಡೆ ಬಿದ್ದ ಆತನ ಬೆನ್ನಿಗೂ ಚುಚ್ಚಿ ಅಲ್ಲೇ ಡ್ಯಾಗರ್ ಬಿಟ್ಟು ಪರಾರಿಯಾಗಿದ್ದಾರೆ. ನಿರ್ಜನ ಪ್ರದೇಶವಾದ ಈ ಸ್ಥಳದಲ್ಲಿ ಮನು ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಆದರೆ ಅಂತಿಮವಾಗಿ ಭಾರೀ ಪೆಟ್ಟು ಹಾಗೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ರಕ್ತ ಹರಡಿದೆ. ಆದರೆ ಆಟೋದಲ್ಲಿ ಮಾತ್ರ ರಕ್ತದ ಕಲೆಗಳಾಗಿಲ್ಲ.

ವಿಷಯ ತಿಳಿಯುತ್ತಿದ್ದಂತೆಯೇ ರಾತ್ರಿ ಸುಮಾರು 2 ಗಂಟೆ ವೇಳೆಗೆ ಸ್ಥಳಕ್ಕಾಗಮಿಸಿದ ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಎಸ್.ಗಂಗಾಧರ ಹಾಗೂ ಸಿಬ್ಬಂದಿ, ಮಹಜರು ನಡೆಸಿದ ನಂತರ ಶ್ವಾನ ದಳ ಮತ್ತು ಬೆರಳಚ್ಚು ಮುದ್ರೆ ಘಟಕದ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಲಕ್ಷ್ಮೀಪುರಂ ಠಾಣೆ ಪೊಲೀಸರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಈತನ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದು, ಮನು ಮೈಸೂರಿನ ತನ್ನ ಚಿಕ್ಕಪ್ಪ ಮಹದೇವು ಅವರ ಮನೆಯಲ್ಲಿ ನೆಲೆಸಿದ್ದ. ಪ್ರೀತಿಸಿದ ಯುವತಿಯೊಂದಿಗೆ ಈತನ ಮದುವೆ ಫೆಬ್ರವರಿ ಮಾಹೆಯಲ್ಲಿ ನಿಗದಿಯಾಗಿತ್ತು ಎನ್ನಲಾಗಿದೆ.

ತಿಂಗಳ ಹಿಂದಷ್ಟೆ ಅಜ್ಜಿ ಮೃತಪಟ್ಟಿದ್ದರು. ಧಾರ್ಮಿಕ ಕಾರ್ಯಗಳನ್ನು ಮುಗಿಸಿದ್ದ ಮನು, ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮುನೇಶ್ವರ ನಗರದ ಮತ್ತೊಂದು ಗುಂಪಿನೊಂದಿಗೆ ಜಗಳ ವಾಡಿಕೊಂಡಿದ್ದ ಎಂದು ಕೆಲವರು ಪೊಲೀಸರಿಗೆ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಎಂದಿನಂತೆ ಆಟೋ ತೆಗೆದುಕೊಂಡು ಹೊರ ಹೋಗಿದ್ದ ಮನು, ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ತಡರಾತ್ರಿ ಪ್ರಯಾಣಿಕರ ಸೋಗಿನಲ್ಲಿ ಬೋಗಾದಿಗೆ ಕರೆಸಿಕೊಂಡು, ಡ್ರಾಪ್ ಮಾಡಿ ಹಿಂದಿರುಗುವಾಗ ಹಿಂಬಾಲಿಸಿ ದಾಳಿ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದ್ವೇಷದಿಂದ ಮುನೇಶ್ವರನಗರದ ಮತ್ತೊಂದು ಗುಂಪು ದಾಳಿ ನಡೆಸಿ ಮನುವನ್ನು ಹತ್ಯೆ ಗೈದಿರಬಹುದೆಂದು ಶಂಕಿಸಿರುವ ಪೊಲೀಸರು ಈಗಾಗಲೇ ತನಿಖಾ ತಂಡ ರಚಿಸಿ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವ ಶಂಕಿತ ಹಂತಕರ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಡಿಸಿಪಿ ಎನ್.ವಿಷ್ಣುವರ್ಧನ, ಕೆ.ಆರ್.ಉಪ ವಿಭಾಗದ ಎಸಿಪಿ ಧರ್ಮಪ್ಪ, ಸಿಸಿಬಿ ಎಸಿಪಿ ಸಿ.ಗೋಪಾಲ್, ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ರಾತ್ರಿಯೇ ಪರಿಶೀಲನೆ ನಡೆಸಿದರು.

Translate »