ಎಟಿಎಂ ಕಾರ್ಡ್‍ಗೆ ಕನ್ನ:ತಾಂಜೇನಿಯಾ ವಿದ್ಯಾರ್ಥಿ ಬಂಧನ
ಮೈಸೂರು

ಎಟಿಎಂ ಕಾರ್ಡ್‍ಗೆ ಕನ್ನ:ತಾಂಜೇನಿಯಾ ವಿದ್ಯಾರ್ಥಿ ಬಂಧನ

January 29, 2019

ಹೊಳೆನರಸೀಪುರ: ಎಟಿಎಂಗಳಿಗೆ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ದತ್ತಾಂಶ ಕದ್ದು, ಹಣ ಲಪಟಾಯಿಸುತ್ತಿದ್ದ ತಾಂಜೇನಿಯಾ ವಿದ್ಯಾರ್ಥಿಯನ್ನು ಬಂಧಿಸಿರುವ ಹೊಳೆನರಸೀಪುರ ಪೊಲೀಸರು 7.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಎಸ್‍ಬಿ ಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಆಂಡ್ರ್ಯೂ ರೆನಾಟಸ್ ಸಂಗ(28) ಬಂಧಿತನಾಗಿದ್ದು, ಈತ ಲಪಟಾಯಿಸಿದ ಹಣದಲ್ಲಿ ವಿಜಯ ನಗರ 3ನೇ ಹಂತದಲ್ಲಿ ಮನೆಯನ್ನು ಲೀಸ್‍ಗೆ ಪಡೆದು, ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ಹೊಳೆನರಸೀಪುರ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಕೃಷ್ಣಮೂರ್ತಿ ಅವರಿಗೆ ಜ.25ರಂದು ಬ್ಯಾಂಕ್‍ನ ಗ್ರಾಹಕರಾದ ಯೋಗಿ ಮತ್ತು ರಂಗಯ್ಯ ಎಂಬುವರು ತಮ್ಮ ಖಾತೆಯಿಂದ ಹಣ ಡ್ರಾ ಮಾಡದೆಯೇ ಖಾತೆಯಲ್ಲಿ ಹಣ ಕಟಾವು ಆಗಿರುವ ಮೆಸೇಜ್ ಬಂದಿದೆ ಎಂದು ದೂರು ಸಲ್ಲಿಸಿದ್ದರು. ಗ್ರಾಹಕರ ಖಾತೆಯನ್ನು ಪರಿಶೀಲಿಸಿದಾಗ ಎಟಿಎಂನಲ್ಲಿ ಯೋಗಿ ಅವರ ಖಾತೆಯಿಂದ 19,300 ರೂ ಹಾಗೂ ರಂಗಯ್ಯ ಅವರ ಖಾತೆಯಿಂದ 40 ಸಾವಿರ ರೂ ಡ್ರಾ ಆಗಿರುವುದು ಪತ್ತೆಯಾಗಿದೆ.

ತಕ್ಷಣವೇ ಹಣ ಡ್ರಾ ಆಗಿರುವ ಎಟಿಎಂಗೆ ತೆರಳಿ ಪರಿಶೀಲಿಸಿದಾಗ ಎಟಿಎಂ ಯಂತ್ರಕ್ಕೆ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿರುವುದು ಪತ್ತೆಯಾಗಿದ್ದು, ಅದನ್ನು ತೆರವುಗೊಳಿಸಿದ ನಂತರ ಬ್ಯಾಂಕ್ ಮ್ಯಾನೇಜರ್ ಕೃಷ್ಣಮೂರ್ತಿ ಅವರು ಜ.26ರಂದು ಹೊಳೆನರಸೀಪುರ ಪೊಲೀಸರಿಗೆ ದೂರು ಸಲ್ಲಿಸಿದರು. ಎಟಿಎಂನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಜ.20ರಿಂದಲೂ ಎಟಿಎಂಗೆ ಬಂದು ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಾಸನ-ಮೈಸೂರು ರಸ್ತೆಯಲ್ಲಿರುವ ಎಟಿಎಂ ಬಳಿ ನಿಗಾವಹಿಸಿದ್ದರು. ಈ ವೇಳೆ ಎಟಿಎಂಗೆ ಆಗಮಿಸಿದ ಆಂಡ್ರ್ಯೂ ಸೆನಾಟಿಸ್ ಸಂಗನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ ವೇಳೆ ಈತ ವಿದ್ಯಾಭ್ಯಾಸಕ್ಕಾಗಿ 2014ರಲ್ಲಿ ಮೈಸೂರಿಗೆ ಬಂದು ನೆಲೆಸಿದ್ದನೆಂದು ಗೊತ್ತಾಗಿದೆ. ತಾನು ಐಷಾರಾಮಿ ಜೀವನ ನಡೆಸಲು ಹಾಗೂ ಹುಡುಗಿಯರೊಂದಿಗೆ ಡೇಟಿಂಗ್ ಮಾಡಲು ಹಣದ ಅವಶ್ಯಕತೆ ಇದ್ದ ಕಾರಣ ತನ್ನಲ್ಲಿದ್ದ ತಾಂತ್ರಿಕ ಜ್ಞಾನದಿಂದ ಎಟಿಎಂಗಳಿಗೆ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ಕಾರ್ಡ್‍ಗಳ ಡಾಟಾವನ್ನು ಪಡೆದು ಅದಕ್ಕೆ ನಕಲಿ ಎಟಿಎಂ ಕಾರ್ಡ್‍ಗಳನ್ನು ತಯಾರಿಸಿ, ಹಣ ಲಪಟಾಯಿಸುತ್ತಿದ್ದುದಾಗಿ ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.

ಕಳೆದ ಎರಡು ತಿಂಗಳಿನಿಂದಲೂ ತಾನು ಈ ಕೃತ್ಯ ನಡೆಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿರುವ ಆತ ಅದಕ್ಕಾಗಿ ಬೇಕಾಗಿದ್ದ ಸಾಮಗ್ರಿಗಳನ್ನು ಚೀನಾದಿಂದ ತರಿಸಿಕೊಂಡು ಮೈಸೂರಿನ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ಒಟ್ಟು 1.59 ಲಕ್ಷ ರೂ ಡ್ರಾ ಮಾಡಿರುವುದಾಗಿ ತಿಳಿಸಿದ್ದಾನೆ.

ಒಂದೇ ಕಡೆ ಈ ರೀತಿ ಹಣ ಡ್ರಾ ಮಾಡಿದರೆ ಪೊಲೀಸರಿಗೆ ಸಿಕ್ಕಿಹಾಕಿ ಕೊಳ್ಳಬಹುದು ಎಂಬ ಕಾರಣದಿಂದ ಹಾಸನ ಕಡೆಗೆ ತೆರಳುತ್ತಿದ್ದಾಗ ಹೊಳೆನರಸೀ ಪುರದಲ್ಲಿ ಕೆನರಾ ಬ್ಯಾಂಕ್ ಎಟಿಎಂ ನೋಡಿ ಅದರಲ್ಲಿ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ವಿವಿಧ ಖಾತೆಗಳಿಂದ 1.39 ಲಕ್ಷ ಡ್ರಾ ಮಾಡಿರುವುದಾಗಿ ತಿಳಿಸಿದ್ದಾನೆ. ಆತನ ಬಳಿ ಇದ್ದ ನಕಲಿ ಎಟಿಎಂ ಕಾರ್ಡ್ ಮೂಲಕ ಬಿಡದಿ-ಮೈಸೂರು ರಸ್ತೆಯಲ್ಲಿರುವ ಎಟಿಎಂನಲ್ಲೂ ಡ್ರಾ ಮಾಡಿರುವುದು ಕಂಡು ಬಂದಿದೆ.

ಕಳೆದ ಎರಡು ತಿಂಗಳಿಂದ ಈತ ಒಟ್ಟು 8.50 ಲಕ್ಷ ರೂ. ಡ್ರಾ ಮಾಡಿರುವುದು ವಿಚಾರಣೆ ವೇಳೆ ಪತ್ತೆಯಾಗಿದ್ದು, ಈ ಹಣದಲ್ಲಿ 6.50 ಲಕ್ಷ ಮೌಲ್ಯದ ವೋಕ್ಸ್‍ವ್ಯಾಗನ್ ಕಾರು, 50 ಸಾವಿರ ರೂ ಮೌಲ್ಯದ ಲ್ಯಾಪ್‍ಟಾಪ್ ಹಾಗೂ 1 ಲಕ್ಷ ರೂ.ಗಳಿಗೆ ಮೈಸೂರಿನ ವಿಜಯನಗರದಲ್ಲಿ ಮನೆ ಲೀಸ್‍ಗೆ ಹಾಕಿಕೊಂಡು ಮನೆಗೆ ಫ್ರಿಡ್ಜ್, ಸೋಫಾ, ಚೇರ್ ಇತ್ಯಾದಿ ವಸ್ತುಗಳನ್ನು ಖರೀದಿ ಮಾಡಿ ಉಳಿದ ಹಣವನ್ನು ಮೋಜು-ಮಸ್ತಿಗೆ ಖರ್ಚು ಮಾಡಿರುವುದಾಗಿ ಆತ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

Translate »