ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್  ಉದ್ಯಮಿ ಅಪಹರಣ: ಮತ್ತೆ ಐವರ ಬಂಧನ
ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್  ಉದ್ಯಮಿ ಅಪಹರಣ: ಮತ್ತೆ ಐವರ ಬಂಧನ

August 31, 2018

ಹೆಚ್.ಡಿ.ಕೋಟೆ: ಸಿಸಿಬಿ ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿ ಸಿದ್ದ ಅಪಹರಣಕಾರರಲ್ಲಿ ಮತ್ತೆ ಐವರನ್ನು ಬಂಧಿಸುವಲ್ಲಿ ಹೆಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕು ಹೊಮ್ಮರ ಗಳ್ಳಿಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅಲಿಯಾಸ್ ಲೋಕಿ ಅವರನ್ನು 16 ಮಂದಿಯ ತಂಡ ಅಪಹರಿಸಿ, 10 ಲಕ್ಷ ಒತ್ತೆ ಹಣ ಪಡೆದು ಬಿಡುಗಡೆ ಮಾಡಿತ್ತು. ಅವರಲ್ಲಿ ಐವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದು, ಅವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಮತ್ತೆ ಐವರನ್ನು ಬಂಧಿಸಿರುವ ಪೊಲೀಸರು, ಉಳಿದ 6 ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ. ಮಂಡ್ಯದ ಕಲ್ಲಹಳ್ಳಿ ನಿವಾಸಿ ಶರತ್ (23), ಹಾಸನದ ಶಿವ ಅಲಿಯಾಸ್ ಗುಂಡ, ಬೆಂಗಳೂರಿನ ರಾಜು ಅಲಿಯಾಸ್ ನಿಂಗರಾಜು ಅಲಿ ಯಾಸ್ ರಾಜು ಶೆಟ್ಟಿ, ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಜೆ.ಶಿವಪ್ರಸಾದ್ ಅಲಿಯಾಸ್ ಶಿವು ಅಲಿಯಾಸ್ ಚಕ್ಲಿ, ಹೊಳೆನರಸೀಪುರದ ರಾಮಚಂದ್ರ ಅಲಿಯಾಸ್ ರಾಮ ಈಗ ಬಂಧಿತರಾಗಿದ್ದು, ಹಾಸನದ ಮನೋಜ್ ಅಲಿಯಾಸ್ ಮನು, ರವಿ, ಕನಕಪುರದ ಸುರೇಶ್ ಅಲಿಯಾಸ್ ಅರುಣ, ಶೇಖರ, ಸುಧಾಕರ ಅಲಿಯಾಸ್ ದಿವಾಕರ, ಬೆಂಗಳೂರಿನ ವೆಂಕಟೇಶ ಅಲಿಯಾಸ್ ಕೆಂಚ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 1 ಕಾರು ಮತ್ತು 1.73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಹಿನ್ನೆಲೆ: ಹೊಮ್ಮರಗಳ್ಳಿಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅವರ ಮನೆಗೆ ಒಂದು ದಿನ ರಾತ್ರಿ 11 ಗಂಟೆ ಸುಮಾರಿನಲ್ಲಿ ಇನ್ನೋವಾ ಕಾರಿನಲ್ಲಿ ಆಗಮಿಸಿದ್ದ ಅಪಹರಣಕಾರರು, ತಾವು ಸಿಸಿಬಿ ಪೊಲೀ ಸರೆಂದು ಪರಿಚಯಿಸಿಕೊಂಡು, ಗೋವಾದಲ್ಲಿ ನಡೆದಿರುವ ಹಣ ದ್ವಿಗುಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕೆಂದು ಲೋಕೇಶ್ ಅವರನ್ನು ಕರೆದೊಯ್ದಿದ್ದರು. ನಂತರ ತಾವು ಅಪಹರಣಕಾರರೆಂಬುದನ್ನು ತಿಳಿಸಿ 2 ಕೋಟಿ ರೂ. ಗಳಿಗೆ ಬೇಡಿಕೆ ಇಟ್ಟಿದ್ದರು. ಲೋಕೇಶ್ ಸೂಚನೆ ಮೇರೆಗೆ ಅವರ ಪತ್ನಿಯಿಂದ 6 ಲಕ್ಷ ನಗದು ಪಡೆದಿದ್ದಲ್ಲದೇ, ಲೋಕೇಶ್ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲವಾದರೂ, ಅಪಹರಣ ನಡೆದು ಮೂರು ದಿನಗಳ ನಂತರ ಮಾಹಿತಿ ಪಡೆದಿದ್ದ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿದ್ದರು. ಈ ಮಧ್ಯೆ ಅಪಹರಣಕಾರರು ಮೇಲುಕೋಟೆ ಬಳಿ ಲೋಕೇಶ್ ಅವರನ್ನು ಆಗಸ್ಟ್ 11ರಂದು ರಾತ್ರಿ ಬಿಡುಗಡೆ ಮಾಡಿದ್ದರು.

ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಮಾರ್ಗದರ್ಶನ ದಲ್ಲಿ ಡಿವೈಎಸ್‍ಪಿ ಭಾಸ್ಕರ್ ರೈ, ಹೆಚ್.ಡಿ.ಕೋಟೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್, ಸಬ್ ಇನ್ಸ್‍ಪೆಕ್ಟರ್ ಅಶೋಕ್, ಮುಖ್ಯ ಪೇದೆಗಳಾದ ಶಿವಕುಮಾರ್, ಗುರು, ಲತೀಫ್, ನಾಗರಾಜು, ಕಾನ್ಸ್‍ಟೇಬಲ್ಗಳಾದ ಎಸ್.ಶ್ರೀನಿವಾಸ್, ರವಿಕುಮಾರ್, ಮೋಹನ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »