ಕೊನೆಗೂ ನರಭಕ್ಷಕ ಹುಲಿ ಸೆರೆ
ಮೈಸೂರು

ಕೊನೆಗೂ ನರಭಕ್ಷಕ ಹುಲಿ ಸೆರೆ

February 2, 2019

ಹೆಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ಅಭಯಾರಣ್ಯದ ಡಿ.ಬಿ.ಕುಪ್ಪೆ ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿಯನ್ನು ಇಂದು ಮಧ್ಯಾಹ್ನ ಸೇಬಿನಕೊಲ್ಲಿ ಎಂಬಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮೊದಲು ಮಾನಿಮೂಲೆ ಹಾಡಿಯ ಮಧು ಎಂಬಾತನನ್ನು ಬಲಿ ಪಡೆದಿದ್ದ ವ್ಯಾಘ್ರ, ಜ.28ರಂದು ಹುಲ್ಮಟ್ಟು ಗ್ರಾಮದ ಚಿನ್ನಪ್ಪ ಮತ್ತು ಜ.31ರಂದು ಸಂಜೆ ಹೊಸೂರು ಹಾಡಿಯ ಕೆಂಚ ಅವರನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆರಂಭಿಸಿದ್ದರು. ಸಾಕಾನೆಗಳಾದ ಅರ್ಜುನ, ಅಭಿಮನ್ಯು, ದ್ರೋಣ, ಸರಳ, ಕೃಷ್ಣ ಮತ್ತು ಕುಮಾರಸ್ವಾಮಿ ಯೊಂದಿಗೆ ಅರಣ್ಯ ಸಿಬ್ಬಂದಿ ಕಾರ್ಯಾ ಚರಣೆಗಿಳಿದಿದ್ದರು. ಗುರುವಾರ ಸಂಜೆ ಕೆಂಚನನ್ನು ಹುಲಿ ಬಲಿ ಪಡೆದಿದ್ದ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಕರುವೊಂದನ್ನು ಕಟ್ಟಿ ಹುಲಿ ನಿರೀಕ್ಷೆಯಲ್ಲಿದ್ದರು. ಮಧ್ಯಾಹ್ನ 12.50ರ ವೇಳೆಗೆ ಅನತಿ ದೂರದಲ್ಲೇ ಮತ್ತೊಂದು ಕರುವನ್ನು ಕಟ್ಟಲು ಗ್ರಾಮದ ಯುವಕರು ಮುಂದಾದಾಗ ನರ ಭಕ್ಷಕ ಹುಲಿ ಪತ್ತೆಯಾಗಿದೆ. ಇದರಿಂದ ಭಯಭೀತರಾದ ಯುವಕರು ಹೆದ್ದಾರಿಗೆ ಓಡಿ ಬಂದು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಅರಣ್ಯ ಸಿಬ್ಬಂದಿ ಆರು ಸಾಕಾನೆಗಳೊಂದಿಗೆ ಆ ಪ್ರದೇಶದ ಸುತ್ತಮುತ್ತ ಕಾರ್ಯಾ ಚರಣೆಗಿಳಿದರು. ಹುಲಿ ಪ್ರತ್ಯಕ್ಷವಾದ ತಕ್ಷಣ ಸಾಕಾನೆ ಮೇಲೆ ಕುಳಿತ್ತಿದ್ದ ಪಶು ವೈದ್ಯಾಧಿಕಾರಿಗಳಾದ ಡಾ. ಉಮಾಶಂಕರ್ ಮತ್ತು ಡಾ. ಮುಜೀಬ್, ಹುಲಿಗೆ ಬಂದೂಕಿನ ಮೂಲಕ ಅರವಳಿಕೆ ಚುಚ್ಚುಮದ್ದನ್ನು ಹಾರಿಸಿದರು. ಮೊದಲ ಡಾಟ್ ಬಿದ್ದರೂ ಪ್ರಜ್ಞೆ ತಪ್ಪದ ಹುಲಿ, ಓಡಲಾರಂಭಿಸಿದಾಗ ಮತ್ತೊಂದು ಡಾಟ್ ಚುಚ್ಚುಮದ್ದು ಹಾರಿಸಲಾಯಿತು. ಸ್ವಲ್ಪ ದೂರ ಓಡಿದ ಹುಲಿ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಸಿಬ್ಬಂದಿ ಬಲೆಯ ಸಹಾಯದಿಂದ ಹುಲಿಯನ್ನು ಬೋನ್‍ಗೆ ಹಾಕಿ ಬಂಧಿಸಿದರು.

ಸೆರೆ ಸಿಕ್ಕಿರುವ ನರ ಭಕ್ಷಕ ಹುಲಿ 8ರಿಂದ 10 ವರ್ಷ ವಯಸ್ಸಿನದಾಗಿದ್ದು, ಅದರ ಎರಡು ಮುಂಗಾಲುಗಳಿಗೆ ಪೆಟ್ಟು ಬಿದ್ದು ಊತ ಕಾಣಿಸಿಕೊಂಡಿತ್ತು. ಅದಕ್ಕೆ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇಂದಿನ ಕಾರ್ಯಾಚರಣೆಯಲ್ಲಿ ಪಿಸಿಸಿಎಫ್ ಜಯರಾಂ, ಎಪಿಸಿಸಿಎಂ ಬಿ.ಪಿ.ರವಿ, ಸಿಸಿಎಫ್‍ಗಳಾದ ನಾರಾಯಣ ಸ್ವಾಮಿ, ಲಿಂಗರಾಜು, ಎಸಿಎಫ್ ಕೇಶವೇಗೌಡ, ವಲಯ ಅರಣ್ಯಾಧಿಕಾರಿಗಳಾದ ಸುಬ್ರಹ್ಮಣ್ಯ, ವಿನಯ್, ಮಧುಕುಮಾರ್, ಪಶು ವೈದ್ಯರಾದ ಡಾ. ಉಮಾಶಂಕರ್, ಡಾ. ಮುಜೀಬ್, ಅವರ ಸಹಾಯಕ ಅಕ್ರಂ ಪಾಷ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್, ಸಬ್ ಇನ್ಸ್‍ಪೆಕ್ಟರ್‍ಗಳಾದ ವಿ.ಸಿ.ಅಶೋಕ್, ಪುಟ್ಟಸ್ವಾಮಿ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು.

Translate »