ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ
ಮೈಸೂರು

ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ

February 1, 2019

ಹೆಚ್.ಡಿ.ಕೋಟೆ: ಸಾಕು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿ ರುವ ಕಾರ್ಯಾಚರಣೆ ನಡುವೆಯೇ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಕಾಡಂಚಿನ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ.

ಸೋಮವಾರದಂದು ಹುಲ್ಮಟ್ಲು ಗ್ರಾಮದ ಚಿನ್ನಪ್ಪನನ್ನು ಕೊಂದು ಹಾಕಿದ್ದ ಹುಲಿ, ಇಂದು ಬೆಳಿಗ್ಗೆ ತಿಮ್ಮನ ಹೊಸಳ್ಳಿ ಗ್ರಾಮದ ಕೆಂಚ(55) ಎಂಬಾತನನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟಹಾಸವನ್ನು ಮುಂದು ವರೆಸಿದೆ. ಕಾಡಂಚಿನ ಸೇಬನಕೊಲ್ಲಿ ಎಂಬಲ್ಲಿ ಕೆಂಚ ಮತ್ತು 12 ವರ್ಷದ ಬಳ್ಳ ಎಂಬ ಬಾಲಕ ಇಂದು ಸಂಜೆ 4.30ರ ಸುಮಾರಿನಲ್ಲಿ ಗೆಣಸು ಅಗೆಯುತ್ತಾ ಮೇಕೆ ಗಳನ್ನು ಮೇಯಿಸುತ್ತಿದ್ದಾಗ ಕೆಂಚನ ಮೇಲೆ ಹುಲಿ ಹಠಾತ್ತಾಗಿ ದಾಳಿ ನಡೆಸಿ, ಸುಮಾರು 200 ಮೀ. ದೂರ ಎಳೆದೊಯ್ದಿದೆ. ಈ ವೇಳೆ ಬಾಲಕ ಬಳ್ಳ ಕೈಯ್ಯಲ್ಲಿದ್ದ ದೊಣ್ಣೆಯಿಂದ ಹೊಡೆದು ಹುಲಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದಾಗ ಹುಲಿಯು ಕೆಂಚನನ್ನು ಬಳ್ಳನ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಆತ ಮರಹತ್ತಿ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಅಷ್ಟರಲ್ಲಿ ಕೆಂಚ ಕೊನೆಯುಸಿರೆಳೆದಿದ್ದಾನೆ.

ಈ ಭಾಗದಲ್ಲಿ ಹುಲಿಯೊಂದು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳನ್ನು ತಿಂದು ಹಾಕುತ್ತಿದೆ. ಕೆಲ ದಿನಗಳ ಹಿಂದೆ ಮಾನಿಮೂಲೆ ಹಾಡಿಯ ಮಧು ಎಂಬಾತನನ್ನು ಕೊಂದು ಹಾಕಿದ ಹಿನ್ನೆಲೆಯಲ್ಲಿ ಹುಲಿ ಸೆರೆಗಾಗಿ ಅರಣ್ಯ ಸಿಬ್ಬಂದಿ ಸಾಕು ಆನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಸೋಮವಾರ ಬೆಳಿಗ್ಗೆ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದ ಕೆಲ ಮೀಟರ್‍ಗಳ ಅಂತರದಲ್ಲೇ ಬಹಿರ್ದೆಸೆಗೆಂದು ಹೋಗಿದ್ದ ಹುಲ್ಮಟ್ಲುವಿನ ಚಿನ್ನಪ್ಪ ಎಂಬಾತನನ್ನು ಆತನ ಸಹೋದರನ ಮುಂದೆಯೇ ಹುಲಿ ಎಳೆದೊಯ್ದು ಕೊಂದು ಹಾಕಿದೆ.

ನರ ಭಕ್ಷಕ ಹುಲಿಯ ಅಟ್ಟಹಾಸದಿಂದ ಭಯಭೀತರಾಗಿರುವ ಗ್ರಾಮಸ್ಥರು, ಹುಲಿ ಸೆರೆಗಾಗಿ ಆಗ್ರಹಿಸಿ ಇಂದು ರಸ್ತೆ ತಡೆ ನಡೆಸಿದರು. ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿದರು. ಬೆಂಗಳೂರಿನಿಂದ ಹುಲಿ ಸೆರೆಗೆ ವಿಶೇಷ ತಂಡ ಆಗಮಿಸುತ್ತಿದ್ದು, ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗುವುದು ಅಥವಾ ಅದನ್ನು ಫೈರ್ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು. ಬುಧವಾರವೂ ಹುಲಿ ಸೆರೆಗಾಗಿ ಅರಣ್ಯ ಸಿಬ್ಬಂದಿ ಐದು ಸಾಕಾನೆಗಳ ಸಹಕಾರದಿಂದ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೇ ಹುಲಿ ಸೆರೆ ಹಿಡಿಯಲು ಕೆಲವೆಡೆ ಬೋನನ್ನು ಇರಿಸಿದ್ದರು. ಬುಧವಾರದಂದು ಗುಂಡ್ರಿ ಹಿನ್ನೀರಿನ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಮಚ್ಚೂರು-ಜಾಗನಕೋಟೆ ಸುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ವ್ಯಾಘ್ರ, ಕಾಡಂಚಿನ ಗ್ರಾಮಸ್ಥರನ್ನು ಕೊಲ್ಲುವ ಮೂಲಕ ಭಯ ಹುಟ್ಟಿಸಿದೆ.

Translate »