ರಾಹುಲ್‍ಗಾಂಧಿ ಕಿವಿಮಾತು: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ
ಮೈಸೂರು

ರಾಹುಲ್‍ಗಾಂಧಿ ಕಿವಿಮಾತು: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ

February 1, 2019

ಬೆಂಗಳೂರು,: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಾತ್ಕಾಲಿಕ ತಡೆ ಹಾಕಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ಸಾರ್ವಜನಿಕವಾಗಿ ಸಿದ್ದ ರಾಮಯ್ಯ ವಿರುದ್ಧ ಹರಿಹಾಯ್ದು, ದೋಸ್ತಿ ಪಕ್ಷಕ್ಕೆ ಎಚ್ಚರಿಕೆ ನೀಡುತ್ತಿದ್ದಂತೆ, ಎಚ್ಚೆತ್ತ ಕಾಂಗ್ರೆಸ್ ವರಿಷ್ಠರು ಮಧ್ಯ ಪ್ರವೇಶಿಸಿ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಂತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರನ್ನು ಹಠಾತ್ತನೆ ನಿನ್ನೆ ದೆಹಲಿಗೆ ಕರೆಸಿಕೊಂಡ ರಾಹುಲ್, ಉಭಯ ನಾಯಕರೊಂದಿಗೆ ಸುದೀರ್ಘ ಚರ್ಚಿಸಿ, ದೋಸ್ತಿಯ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಅಲ್ಲದೆ, ಲೋಕಸಭಾ ಚುನಾವಣೆ ವರೆಗೂ ನಿಮ್ಮ ಎಲ್ಲಾ ವೈಮನಸ್ಸನ್ನು ಪಕ್ಷದ ಹಿತಕ್ಕಾಗಿ ಬದಿಗಿಟ್ಟು ಮೈತ್ರಿ ಸರ್ಕಾರಕ್ಕೆ ಸಹಕಾರ ನೀಡಿ ಎಂದು ಕಿವಿಮಾತು ಹೇಳಿದ್ದಾರೆ. ನೀವು ಮತ್ತು ನಿಮ್ಮವರು ಸರ್ಕಾ ರದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾ ಹೋದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡರೂ ಪ್ರಯೋಜನ ಇಲ್ಲದಂತಾಗುತ್ತದೆ. ಈಗಲೇ ಕಿತ್ತಾಡುತ್ತಿದ್ದಾರೆ ಎಂದುಕೊಳ್ಳುವ ಜನತೆ, ಮುಂದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮತವನ್ನೇ ಹಾಕುವುದಿಲ್ಲ. ನೀವು ಮಾಡುತ್ತಿರುವ ಕೆಲಸ, ಚುನಾ ವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‍ಗೆ ಅನುಕೂಲ ಉಂಟು ಮಾಡುತ್ತದೆ, ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದಿದ್ದಾರೆ.

ನಿಮ್ಮ ಕೋಪ-ತಾಪ ದೂರ ಇಡಿ. ಎಲ್ಲವನ್ನೂ ಸಹಿಸಿಕೊಂಡು ಹೋಗಿ. ಸರ್ಕಾರದಲ್ಲಿ ಏನಾದರೂ ತೊಂದರೆಯಾದರೆ ಅದನ್ನು ಪ್ರಶ್ನಿಸಲು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಇದ್ದಾರೆ. ಅದನ್ನು ಹೊರತುಪಡಿಸಿ ನಮ್ಮ ಶಾಸಕರೇ ದಿನನಿತ್ಯ ನಾಯಕತ್ವ ಮತ್ತು ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದರೆ ಹೇಗೆ? ಎಂದು ಸಿದ್ದರಾಮಯ್ಯ ಅವರನ್ನು ರಾಹುಲ್ ಪ್ರಶ್ನಿಸಿದ್ದಾರೆ. ಪ್ರತಿಯಾಗಿ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಮತ್ತು ಅವರ ಆಡಳಿತ ವೈಖರಿ ಬಗ್ಗೆ ದೂರಿನ ಸರಮಾಲೆಯನ್ನೇ ಇಟ್ಟಿರುವುದಲ್ಲದೆ, ಇದೇ ರೀತಿ ದೋಸ್ತಿ ಮುಂದುವರೆದರೆ ನಮ್ಮ ಪಕ್ಷ ಸಂಘಟನೆಗೆ ಹಿನ್ನಡೆ ಖಂಡಿತ ಎಂದಿದ್ದಾರೆ. ನಾವೂ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಕೆಲವು ಸಚಿವರು, ಶಾಸಕರು ಮುಖ್ಯಮಂತ್ರಿ ಕಾರ್ಯವೈಖರಿಯನ್ನು ಸಾರ್ವಜನಿಕವಾಗಿ ಟೀಕಿಸಿರುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇದಕ್ಕೆ ರಾಹುಲ್, ಲೋಕಸಭಾ ಚುನಾವಣೆವರೆಗೂ ತಾಳ್ಮೆ ಕಳೆದುಕೊಳ್ಳುವುದು ಬೇಡ, ಸರ್ಕಾರದ ವಿಷಯವನ್ನು ಉಪಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ, ನಮಗೆ ಇಡೀ ರಾಷ್ಟ್ರದಲ್ಲಿ ಎನ್‍ಡಿಎ ವಿರುದ್ಧ ಹೋರಾಟ ನಡೆಸಬೇಕಿದೆ. ಅದನ್ನು ಬಿಟ್ಟು ಮೈತ್ರಿ ಪಕ್ಷಗಳೊಂದಿಗೆ ಕಾದಾಡುವುದು ಸರಿಯಲ್ಲ. ನಾವು ಈಗ ಸಹಿಸಿಕೊಳ್ಳಬೇಕಾದ ಸಮಯವಿದು. ಪಕ್ಷದ ಹಿತದೃಷ್ಟಿಯಿಂದ ಸಹಕಾರ ನೀಡಿ ಎಂದು ಕಿವಿಮಾತು ಹೇಳಿ ಕಳುಹಿಸಿದ್ದಾರೆ.

Translate »