ಇಬ್ಬರು ಮಾವುತರ ಬಲಿ ಪಡೆದಿದ್ದ `ಕಾರ್ತಿಕ್’ ಸಾವು
ಮೈಸೂರು

ಇಬ್ಬರು ಮಾವುತರ ಬಲಿ ಪಡೆದಿದ್ದ `ಕಾರ್ತಿಕ್’ ಸಾವು

February 1, 2019

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದಲ್ಲಿ ಇಬ್ಬರು ಮಾವುತರ ಬಲಿ ಪಡೆದಿದ್ದ ಪುಂಡಾನೆ ಕಾರ್ತಿಕ ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡು ಕೊನೆಗೆ ಇಂದು ಸಾವಿಗೀಡಾಗಿದ್ದಾನೆ.

ಸಾಕಾನೆ ಶಿಬಿರದ ವಿಜಯ ಜನ್ಮ ನೀಡಿದ್ದ, ಹಾಲಿ 9 ವರ್ಷದ ಕಾರ್ತಿಕ್ ಕಳೆದ ವರ್ಷ ಮಾವುತ ಅಣ್ಣು ಹಾಗೂ ಮಣಿಯನ್ನು ಕೊಂದಿತ್ತು. ಅಲ್ಲದೆ ಕಾರ್ಮಿಕ ಚಂದ್ರು ಹಾಗೂ ನವೀನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಇದರಿಂದ ಸಾಕಾನೆ ಶಿಬಿರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾ ಗಿತ್ತು. ನಂತರ ಕಾರ್ತಿಕ್ ಚಲನವಲನ ಕೂಡ ಭಿನ್ನವಾಗಿತ್ತು. ಕಾರ್ತಿಕ ರೌಡಿ ವರ್ತನೆಗೆ ಹೆದರಿದ ಮಾವುತರು ಹಾಗೂ ಕಾವಾಡಿ ಗಳು ಅವನ ನಿರ್ವಹಣೆಗೆ ಹಿಂದೇಟು ಹಾಕಿದ್ದರು. ಇದರಿಂದ ಅರಣ್ಯಾಧಿಕಾರಿಗಳಿಗೆ ಕಾರ್ತಿಕನನ್ನು ನೋಡಿಕೊಳ್ಳುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಕಳೆದ ಜ.13 ರಂದು ಮಾವುತ ನವೀನ್‍ಗೆ ಕೋರೆಯಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಕಾರ್ತಿಕನನ್ನು ಸರಪಳಿಯಿಂದ ಬಂಧಿಸಲಾಗಿತ್ತು. ನಂತರ ಶಿಬಿರದ ಪ್ರತ್ಯೇಕ ಸ್ಥಳದಲ್ಲಿ ಮರವೊಂದಕ್ಕೆ ಕಟ್ಟಿ ಹಾಕಲಾಗಿತ್ತು. ಅಲ್ಲಿಗೇ ಆಹಾರ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಕೆಲವು ದಿನಗಳ ಹಿಂದೆ ಹೆಜ್ಜೇನು ದಾಳಿಯಿಂದ ಕಾರ್ತಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಹೊಟ್ಟೆ ಹಾಗೂ ಹಿಂಬದಿಯಲ್ಲಿ ಸೋಂಕಾಗಿ (ಸೇಫ್ಟಿಕ್) ಕೊನೆಗೆ ಇಂದು ಮೃತಪಟ್ಟಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದ್ದಾರೆ. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿ ಕಾರಿ ಡಾ. ಮುಜೀಬ್, ಕಾರ್ತಿಕ್ ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗಳು ದುಬಾರೆ ಅರಣ್ಯದಲ್ಲಿ ಕಾರ್ತಿಕ್ ಕಳೇಬರವನ್ನು ಸುಟ್ಟು ಹಾಕುವ ಮೂಲಕ ಅಂತ್ಯಕ್ರಿಯೆ ನಡೆಸಿದರು.

Translate »