ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ
ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ

August 14, 2018

ಮೈಸೂರು:  ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ್ದ ಗುಂಪೊಂದು, ಪೊಲೀಸರು ಬೆನ್ನತ್ತಿರುವುದನ್ನು ಅರಿತು, ಮೇಲುಕೋಟೆ ಬಳಿ ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೆಚ್.ಡಿ.ಕೋಟೆ ತಾಲೂಕು, ಹೊಮ್ಮರಗಳ್ಳಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅಲಿಯಾಸ್ ಲೋಕಿ (42) ಅಪಹರಣಕ್ಕೊಳಗಾಗಿ, ಸದ್ಯ ದುಷ್ಕರ್ಮಿಗಳಿಂದ ಪಾರಾಗಿ ಬಂದಿದ್ದಾರೆ. ಅಪಹರಣಕಾರರು ಥಳಿಸಿದ್ದ ರಿಂದ ನಿತ್ರಾಣರಾಗಿರುವ ಲೋಕೇಶ್ ಅವರನ್ನು ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಹರಿಸಿದ್ದು ಹೀಗಂತೆ: ಹೊಮ್ಮರ ಗಳ್ಳಿಯಿಂದ ಆ.11ರಂದು ಅಪಹರಿಸಿದ್ದ ಲೋಕೇಶ್ ಅವರನ್ನು ಭಾನುವಾರ ರಾತ್ರಿ ಮಂಡ್ಯ ಜಿಲ್ಲೆ, ಮೇಲುಕೋಟೆ ಬಳಿ ಬಿಡುಗಡೆ ಮಾಡಿದ್ದಾರೆ. ಬಳಿಕ ಪೊಲೀಸರ ಸಂಪರ್ಕಕ್ಕೆ ಸಿಕ್ಕಿದ ಲೋಕೇಶ್, ಘಟನೆ ಬಗ್ಗೆ ವಿವರಿಸಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದ 6 ಮಂದಿ, ನಾವು ಸಿಸಿಬಿ ಪೊಲೀಸರೆಂದು ಪರಿಚಯಿಸಿಕೊಂಡು, ಗೋವಾದಲ್ಲಿ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿರುವ ಪ್ರಕರಣ ಸಂಬಂಧ ವಿಚಾರಣೆ ನಡೆಸಬೇಕೆಂದು ಹೇಳಿ ಲೋಕೇಶ್ ಅವರಿಗೆ ತಿಳಿಸಿದ್ದಾರೆ. ಆರೋಪವನ್ನು ನಿರಾಕರಿಸಿದ ಲೋಕೇಶ್, ಪೊಲೀಸರ ವಿಚಾರಣೆಗೆ ಸಹಕರಿಸಬೇಕೆಂಬ ಕಾರಣಕ್ಕೆ ಅವರೊಂದಿಗೆ ಹೋಗಲು ಒಪ್ಪಿದ್ದಾರೆ. ಲೋಕೇಶ್ ಅವರ ಕಾರಿನಲ್ಲೇ ನಾಲ್ವರು ಖದೀಮರು ತೆರಳಿದ್ದಾರೆ. ಇನ್ನೋವಾ ಕಾರಿನಲ್ಲಿ ಇಬ್ಬರು ಹಿಂಬಾಲಿಸಿದ್ದಾರೆ. ಪೊಲೀಸರ ಸೋಗಿನಲ್ಲಿದ್ದವರ ವಿಚಾರಣೆಯಿಂದ ಕಂಗಾಲಾದ ಲೋಕೇಶ್, ಹೇಗೋ ಇವರಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ, ತಮ್ಮ ಪತ್ನಿಗೆ ಕರೆ ಮಾಡಿ, ಪೊಲೀಸರು ಮನೆಗೆ ಬರುತ್ತಾರೆ. ಅವರಿಗೆ 6 ಲಕ್ಷ ರೂ. ಹಣ ಕೊಟ್ಟು ಕಳುಹಿಸುವಂತೆ ತಿಳಿಸಿದ್ದಾರೆ. ಕೆಲ ಹೊತ್ತಿನಲ್ಲೇ ಪೊಲೀಸ್ ಸಮವಸ್ತ್ರದಲ್ಲಿ ಲೋಕೇಶ್ ಮನೆಗೆ ತೆರಳಿದ ಖದೀಮ 6 ಲಕ್ಷ ರೂ.ಗಳನ್ನು ಪಡೆದು, ವಾಪಸ್ಸಾಗಿದ್ದಾರೆ. ಏಕಾಏಕಿ ಸಿಕ್ಕ ಲಕ್ಷಾಂತರ ರೂ. ಹಣದಿಂದ ಖದೀಮರ ದುರಾಸೆ ಹೆಚ್ಚಾಗಿ, ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಅವರ ವರ್ತನೆಯಿಂದ ಅನುಮಾನಗೊಂಡ ಲೋಕೇಶ್, ಪ್ರಶ್ನಿಸಿದಾಗ ಅವರು ಪೊಲೀಸರಲ್ಲ, ಅಪಹರಣಕಾರರು ಎಂಬುದು ಸ್ಪಷ್ಟವಾಗಿದೆ. ಬಳಿಕ ಜಿಲ್ಲೆಯ ವಿವಿಧೆಡೆ ಸುತ್ತಾಡಿಸಿದ್ದ ಅಪಹರಣಕಾರರು ಲೋಕೇಶ್ ಮೊಬೈಲ್ ನಿಂದಲೇ ಅವರ ಪತ್ನಿಗೆ ಕರೆ ಮಾಡಿ, ನಿಮ್ಮ ಪತಿಯನ್ನು ಅಪಹರಣ ಮಾಡಿದ್ದೇವೆ. ಎರಡು ಕೋಟಿರೂ ನೀಡಿದರೆ ಮಾತ್ರ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಲೋಕೇಶ್ ಅವರ ಪತ್ನಿ, ಹೆಚ್.ಡಿ.ಕೋಟೆ ಪೊಲೀಸರಿಗೆ ಘಟನೆಯ ಬಗ್ಗೆ ವಿವರಿಸಿ, ದೂರು ನೀಡಿದ್ದಾರೆ.

ಪೊಲೀಸರ ಕಾರ್ಯಾಚರಣೆ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಾಲ್ಕು ತಂಡಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ತಂಡ, ಲೋಕೇಶ್ ಅವರ ಭಾವಮೈದುನನ ಜೊತೆ, ಅಪಹರಣಕಾರರಿಗೆ 4 ಲಕ್ಷ ರೂ. ಒಪ್ಪಿಸುವ ಕಾರ್ಯಕ್ಕಿಳಿದಿತ್ತು. ಮತ್ತೊಂದು ತಂಡ ಲೋಕೇಶ್ ಅವರ ಮೊಬೈಲ್ ಸಿಗ್ನಲ್ ಜಾಡು ಹಿಡಿದು ತನಿಖೆ ನಡೆಸಿತ್ತು. ಆಗ ಮೈಸೂರು, ಮಂಡ್ಯ, ಹುಣಸೂರು, ಪಾಂಡವಪುರದ ಲೊಕೇಶನ್‍ಗಳಲ್ಲಿರುವುದು ಪತ್ತೆಯಾಗಿತ್ತು. ಆದರೆ ಚಾಣಾಕ್ಷ ಅಪಹರಣಕಾರರು ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಲ್ಲದೆ, ಕರೆ ಮಾಡಿದ ನಂತರ ಲೋಕೇಶ್ ಅವರ ಮೊಬೈಲ್‍ನ್ನು ಸ್ವಿಚ್ ಆಫ್ ಮಾಡುತ್ತಿದ್ದರು. ಪೊಲೀಸರು ಬೆನ್ನತ್ತಿರಬಹುದೆಂದು ಅರಿತ ಅಪಹರಣಕಾರರು ಭಾನುವಾರ ಮಧ್ಯರಾತ್ರಿ ಮೇಲುಕೋಟೆ ಅರಣ್ಯ ಪ್ರದೇಶದಲ್ಲಿ ಲೋಕೇಶ್ ಹಾಗೂ ಅವರ ಕಾರನ್ನೂ ಬಿಟ್ಟು, ತಮ್ಮ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ. ಆಘಾತಕ್ಕೊಳಗಾಗಿದ್ದ ಲೋಕೇಶ್ ಕಾರು ಚಾಲನೆ ಮಾಡಲಾಗದೆ, ಲಾರಿಯೊಂದನ್ನು ಹತ್ತಿ ಜಕ್ಕನಹಳ್ಳಿ ಕ್ರಾಸ್‍ಗೆ ಬಂದು ತಮ್ಮ ಮೊಬೈಲ್ ಆನ್ ಮಾಡಿದ್ದಾರೆ. ಮೊಬೈಲ್ ಆನ್ ಆಗಿದ್ದನ್ನು ಅರಿತ ಪೊಲೀಸರು ತಕ್ಷಣ ಕರೆ ಮಾಡಿ ವಿಚಾರಿಸಿದಾಗ ಲೋಕೇಶ್ ತಾವಿರುವ ಸ್ಥಳವನ್ನು ತಿಳಿಸಿದ್ದಾರೆ. ಸಮೀಪದ ಪಾಂಡವಪುರದಲ್ಲಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು, ಜಕ್ಕನಹಳ್ಳಿ ಕ್ರಾಸ್‍ಗೆ ದೌಡಾಯಿಸಿದ್ದಾರೆ. ಅಪಹರಣಕಾರರ ಹಲ್ಲೆಯಿಂದ ನಿತ್ರಾಣವಾಗಿದ್ದ ಲೋಕೇಶ್ ಅವರನ್ನು ಮೈಸೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐಷಾರಾಮಿ ಜೀವನ: ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಲೋಕೇಶ್, ಪ್ರಾಧ್ಯಾಪಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಮೈಸೂರಿನ ಕುಂಬಾರಕೊಪ್ಪಲು, ನಂಜನಗೂಡಿನಲ್ಲಿ ವಾಸವಿದ್ದ ಇವರು, ಹೊಮ್ಮರಗಳ್ಳಿಯಲ್ಲಿ ಮನೆ ಖರೀದಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದರು. ಅಪಹರಣಕ್ಕೆ ಮುನ್ನ ದಿನ ಲೋಕೇಶ್ ಬೆಂಗಳೂರಿನ ರೇಸ್‍ಕ್ಲಬ್‍ಗೆ ತೆರಳಿ ಬಾಜಿಯಲ್ಲಿ ಆರು ಲಕ್ಷ ರೂ.ಗಳನ್ನು ಸಂಪಾದಿಸಿದ್ದರು ಎನ್ನಲಾಗಿದೆ. ಈ ವಿಷಯವನ್ನು ತಿಳಿದೇ ದುಷ್ಕರ್ಮಿಗಳು, ಲೋಕೇಶ್ ಅಪಹರಣಕ್ಕೆ ಸಂಚು ರೂಪಿಸಿರಬಹುದು ಎಂದು ಶಂಕಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್ಪಿ ಭಾಸ್ಕರ್ ರೈ ಅವರ ಮಾರ್ಗದರ್ಶನದಲ್ಲಿ ಹೆಚ್.ಡಿ.ಕೋಟೆ ಇನ್ಸ್‍ಪೆಕ್ಟರ್ ಹರೀಶ್, ಸಬ್‍ಇನ್ಸ್‍ಪೆಕ್ಟರ್ ಅಶೋಕ್, ಮುಖ್ಯ ಪೇದೆಗಳಾದ ಶಿವಕುಮಾರ್, ಗುರು, ಲತೀಫ್, ನಾಗರಾಜು, ಸಿಬ್ಬಂದಿ ಎಸ್.ಶ್ರೀನಿವಾಸ್, ರವಿಕುಮಾರ್, ಮೋಹನ್ ಮತ್ತಿತರರು ಅಪಹರಣ ಪ್ರಕರಣದ ಕಾರ್ಯಾಚರಣೆಗಿಳಿದಿದ್ದಾರೆ.

Translate »