ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ
ಮೈಸೂರು, ಹಾಸನ

ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ

August 14, 2018

ಹಾಸನ:  `ನಾನು ಪ್ರಧಾನಿ ಅಭ್ಯರ್ಥಿಯಲ್ಲ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ.

ಹಾಸನದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ(ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ, ಸಚಿವ ಹೆಚ್.ಡಿ. ರೇವಣ್ಣರ ಮಗ)ರನ್ನು ಕಣಕ್ಕಿಳಿಸಲಿದ್ದೇವೆ. ಈ ಹಿಂದೆಯೇ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದೆ. ಅದರಂತೆ ಈಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಲಿದ್ದಾನೆ. ಹಲವು ವರ್ಷಗಳಿಂದ ಪ್ರಜ್ವಲ್ ಜೆಡಿಎಸ್ ನಲ್ಲಿ ಸಕ್ರಿಯವಾಗಿದ್ದು, ರಾಜಕೀಯದಲ್ಲಿ ಆತನಿಗೆ ಉತ್ತಮ ಭವಿಷ್ಯವಿದೆ ಎಂದರು.

ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ: ಪ್ರಸ್ತುತ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದ್ದು, ಅದನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯ ನಂತರವೂ ಬೀಳುವುದಿಲ್ಲ. ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಸ್ವತಂತ್ರ ಸ್ಪರ್ಧೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಮೇರೆಗೆ ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧಿಸುತ್ತಿದೆ. ಆದರೂ ಕಾಂಗ್ರೆಸ್‍ನೊಂದಿಗಿನ ಮೈತ್ರಿ ಸರ್ಕಾರಕ್ಕೆ ಅಪಾಯವಾಗದಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತೇವೆ. ಸ್ವತಂತ್ರ ಸ್ಪರ್ಧೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಇನ್ನು ನಾಲ್ಕೈದು ದಿನಗಳ ಕಾಲ ಇಲ್ಲೇ ಉಳಿದು ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯಿಂದ ಟಾರ್ಗೆಟ್: ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಮುನ್ನವೇ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದು ಫಲಿಸು ವುದಿಲ್ಲ. ಲೋಕಸಭಾ ಚುನಾವಣೆಗಿಂತ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಹೆಚ್ಚು ತಲೆಕೆಡಿಸಿಕೊಂಡಿದೆ ಎಂದು ಕಿಡಿಕಾರಿದರು.

ಲೋಕಸಭೆ ಮೈತ್ರಿ ನಿರ್ಧಾರವಾಗಿಲ್ಲ: ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದ ದೇವೇಗೌಡರು, ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಜತೆ ಮೈತ್ರಿ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.

ದೇವೇಗೌಡರು ನನ್ನನ್ನು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ನನಗೆ ತುಂಬಾ ಖುಷಿಯಾಗಿದೆ. ಆದರೆ, ಇನ್ನೂ ದೇವೇಗೌಡರು ನನಗೆ ಏನನ್ನೂ ಹೇಳಿಲ್ಲ. ನಾನು ಅಭ್ಯರ್ಥಿ ಆಗಬೇಕೋ, ಬೇಡವೋ ಎಂಬುದನ್ನು ಪಕ್ಷದ ಹಿರಿಯರು ನಿರ್ಧಾರ ಮಾಡುತ್ತಾರೆ. ಯಾವ ಚುನಾವಣೆಯಾದರೂ ಪರವಾಗಿಲ್ಲ, ಸಕ್ರಿಯವಾಗಿ ತೊಡಗುತ್ತೇನೆ. ಸ್ಪರ್ಧಿಸುವ ಅವಕಾಶ ಸಿಕ್ಕರೆ ಖಂಡಿತ ಕಣಕ್ಕಿಳಿಯುತ್ತೇನೆ. -ಪ್ರಜ್ವಲ್‍ರೇವಣ್ಣ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

Translate »