ಮೈಸೂರು: ರಿಯಾಯಿತಿ ಮತ್ತು ಸುಲಭ ಕಂತಿನಲ್ಲಿ ವಿವಿಧ ಬಡಾವಣೆಗಳಲ್ಲಿ ನಿವೇಶನ ಕೊಡುವುದಾಗಿ ಕೋಟ್ಯಾಂತರ ರೂ. ವಂಚಿಸಿ 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಜೀವ ನಗರದಲ್ಲಿ ಮೈಸೂರು ಹೋಂ ಡೆವಲಪರ್ಸ್ ಎಂಬ ಕಂಪನಿ ನಡೆಸುತ್ತಿದ್ದ ಸಯ್ಯದ್ ನಿಜಾಂ ಅಲಿ ಎಂಬಾತನೇ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಇದೀಗ ಸೆರೆ ಸಿಕ್ಕವ ನಾಗಿದ್ದಾನೆ. ಆರೋಪಿ ಸಯ್ಯದ್ ನಿಜಾಂ ಅಲಿ ಮೈಸೂರು ತಾಲೂಕು, ಕಸಬಾ ಹೋಬಳಿ ಹಾಗೂ ಲಿಂಗಾಂಬುಧಿ ಗ್ರಾಮ, ರಾಜಾಜಿನಗರ ಬಡಾವಣೆ, ಆರ್.ಆರ್. ನಗರದಲ್ಲಿ ರಿಯಾಯಿತಿ ದರದಲ್ಲಿ ಮತ್ತು ಸುಲಭ ಕಂತುಗಳಲ್ಲಿ ನಿವೇಶನ ಕೊಡುವು ದಾಗಿ ಜನರನ್ನು ನಂಬಿಸಿ ಕೋಟ್ಯಾಂತರ ರೂ. ಹಣ ಸಂಗ್ರಹಿಸಿ ತಲೆಮರೆಸಿಕೊಂಡಿದ್ದ.
ಈ ಸಂಬಂಧ ಮೈಸೂರಿನ ವಿವಿಧ ಠಾಣೆಗಳಲ್ಲಿ ಸಯ್ಯದ್ ನಿಜಾಂ ಅಲಿ ವಿರುದ್ಧ 300ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಂದಿನಿಂದ ಆರೋಪಿ ಸಯ್ಯದ್ ನಿಜಾಂ ಅಲಿ ನ್ಯಾಯಾಲಯಕ್ಕೂ ಹಾಜರಾಗದೇ, ಪೊಲೀಸರಿಗೂ ಸಿಗದೇ 14 ವರ್ಷದಿಂದ ತಲೆಮರೆಸಿಕೊಂಡಿದ್ದ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬ್ಬಂದಿಗಳೊಂದಿಗೆ ಶನಿವಾರ ಬೆಂಗಳೂರಿಗೆ ತೆರಳಿ ಆರೋಪಿ ಸಯ್ಯದ್ ನಿಜಾಂ ಅಲಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸರಿ ಸುಮಾರು ಒಂದೂವರೆ ದಶಕಗಳಿಂದ ಹಾಗೇ ಉಳಿದಿದ್ದ ವಂಚನೆ ಪ್ರಕರಣ ಆರೋಪಿ ಸೆರೆಸಿಕ್ಕಂತಾಗಿದೆ. ಈತನ ವಿರುದ್ಧ ಮೈಸೂರು-ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ, ಮೈಸೂರಿನ ಎರಡನೇ ಜೆಎಂಎಫ್‍ಸಿ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಯಾಗಿತ್ತು.
ಆರೋಪಿ ನಿಜಾಂ ಅಲಿ 2 ಸಾವಿರಕ್ಕೂ ಹೆಚ್ಚು ನಕಲಿ ನಿವೇಶನಗಳ ದಾಖಲೆಗಳನ್ನು ಸೃಷ್ಟಿಸಿ ಲಿಂಗಾಂಬುದಿ ಪಾಳ್ಯದ ಬಳಿ 10 ಎಕರೆ ವಿಸ್ತೀರ್ಣದಲ್ಲಿ ನಿವೇಶನ ಇರುವುದಾಗಿ ಜಾಹೀರಾತು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದ. 2005ರಿಂದ ಈತ ನಿವೇಶನ ನೀಡುವುದಾಗಿ ಜನರನ್ನು ನಂಬಿಸಿ ಸಾಕಷ್ಟು ಹಣ ಅಮಾಯಕರಿಂದ ಪಡೆದುಕೊಂಡು ತಲೆಮರೆಸಿಕೊಂಡಿದ್ದ. ಪೊಲೀಸರು ಇದೀಗ ಆರೋಪಿಯನ್ನು ಸೆರೆ ಹಿಡಿದಿದ್ದು, ವಂಚನೆಗೊಳಗಾದ ಗ್ರಾಹಕರು ತಮಗೆ ಹಣ ಹಿಂತಿರುಗಿಸಿ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಈ ಸಂಬಂಧ ಪೊಲೀಸರು ಉದಯಗಿರಿ ಪೊಲೀಸರು ಆರೋಪಿಯನ್ನು ಇನ್ನಷ್ಟು ವಿಚಾರಣೆಗೊಳಪಡಿಸಲು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಆರೋಪಿಯ ಬಂಧನದ ಕಾರ್ಯಾಚರಣೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಎಂ.ಜಯಕೀರ್ತಿ, ಎಸ್.ರಾಜು, ಸಿಬ್ಬಂದಿಗಳಾದ ಪುಟ್ಟರಾಜು, ಮಂಜುನಾಥ್, ವಿನೋದಾ ರಾಥೋಡ್, ಭವ್ಯ ಹಾಗೂ ಇನ್ನಿತರರು ಪಾಲ್ಗೊಂಡು ಚಾಲಾಕಿ ವಂಚಕನನ್ನು ಮೈಸೂರಿಗೆ ಕರೆತಂದಿದ್ದಾರೆ.