ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ
ಮೈಸೂರು

ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ

August 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಣ ಮಳೆಯಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ವಿವಿಧೆಡೆ ತೆರೆಯಲಾಗಿರುವ 31 ನಿರಾಶ್ರಿತ ಕೇಂದ್ರಗಳಲ್ಲಿ ಒಟ್ಟು 3824 ಮಂದಿ ಆಶ್ರಯ ಪಡೆದಿದ್ದಾರೆ. ಹಲವು ಮಂದಿ ಸಂತ್ರಸ್ತರು ಸಂಬಂಧಿಕರ ಮನೆ ಸೇರಿದರೆ, ಮತ್ತೆ ಕೆಲವರು ಹೋಂ ಸ್ಟೇಗಳಲ್ಲಿ ಇಂದಿಗೂ ಆಶ್ರಯ ಪಡೆದಿದ್ದಾರೆ.

ಆರ್‍ಎಸ್‍ಎಸ್‍ನ ಅಂಗಸಂಸ್ಥೆ ಸೇವಾ ಭಾರತೀಯ 9 ನಿರಾಶ್ರಿತ ಕೇಂದ್ರಗಳಲ್ಲಿ 1500 ಮಂದಿ ಆಶ್ರಯ ಪಡೆದಿದ್ದು, ಈ ಕೇಂದ್ರದಲ್ಲಿರುವವರಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಈ ಕೇಂದ್ರಕ್ಕೆ ದಾಖಲಾಗಿರುವ ಪ್ರತಿಯೊಬ್ಬರ ವಿವರವನ್ನು ಕೂಡ ದಾಖಲು ಮಾಡಲಾಗಿದೆ. ಕುಟುಂಬ ಸದಸ್ಯರ ಸಂಖ್ಯೆ, ಅವರು ಮಾಡುತ್ತಿದ್ದ ವೃತ್ತಿ, ಮಕ್ಕಳ ವಿದ್ಯಾಭ್ಯಾಸ ವಿವರ ಮತ್ತು ಮಹಾ ಮಳೆಯಿಂದ ಸಂಭವಿಸಿರುವ ಹಾನಿಯ ಸಂಪೂರ್ಣ ವಿವರ ಸಂಗ್ರಹಿಸಲಾಗಿದೆ.

ಆದರೆ ಜಿಲ್ಲಾಡಳಿತ ಮಾತ್ರ ನಿರಾಶ್ರಿತರ ಕೇಂದ್ರ ತೆರೆದು ಆಶ್ರಯ ನೀಡಿದೆ ಹೊರತು, ಅವರ ಸಂಪೂರ್ಣ ವಿವರವನ್ನು ದಾಖಲಿಸುವ ಕೆಲಸ ಇಂದಿಗೂ ಮಾಡಿಲ್ಲ. ಮಾತ್ರವಲ್ಲದೆ ನಿರಾಶ್ರಿತ ಕೇಂದ್ರಗಳಲ್ಲಿ ನೆಲೆ ನಿಂತಿರುವವರಿಗೆ ಯಾವುದೇ ಗುರುತಿನ ಚೀಟಿಯನ್ನು ಕೂಡ ವಿತರಿಸಿಲ್ಲ. ಹೀಗಾಗಿ ನಿರಾಶ್ರಿತರ ಕೇಂದ್ರದಿಂದ ಬಂದು -ಹೋಗುವವರ ಬಗ್ಗೆಯೂ ವಿವರ ಸಿಗದಂತಾಗಿದೆ.

ಜಿಲ್ಲಾಡಳಿತ ಕಂಟ್ರೋಲ್ ರೂಂ ಮಾಹಿತಿಯಂತೆ ನಿರಾಶ್ರಿತ ಕೇಂದ್ರ ತೆರೆದ ಸಂದರ್ಭ ಒಟ್ಟು 7080 ಮಂದಿ ಆಶ್ರಯ ಪಡೆಯದಿದ್ದರು. ಆ.25ರ ಮಾಹಿತಿಯಂತೆ ಜಿಲ್ಲೆಯ ವಿವಿಧೆಡೆ ಒಟ್ಟು 3824 ಮಂದಿ ಆಶ್ರಯ ಪಡೆದಿದ್ದಾರೆ. ಇದನ್ನು ಹೊರತುಪಡಿಸಿದರೆ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದವರು, ಹೋಂ ಸ್ಟೇಗಳಲ್ಲಿ ನೆಲೆ ಕಂಡು ಕೊಂಡವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿಲ್ಲ. ಹೀಗಾಗಿ ನಿರಾಶ್ರಿತರ ಸಂಖ್ಯೆ ಹೆಚ್ಚಿಕೆಯಾಗಿದ್ದರೂ ಕೂಡ, ಅವರ ಮಾಹಿತಿ ಕಲೆ ಹಾಕುವಲ್ಲಿ ಜಿಲ್ಲಾಡಳಿತ ಎಡವಿದೆ.

ನೆರವಿನ ರೂಪದಲ್ಲಿ ರಾಜ್ಯದ ಎಲ್ಲೆಡೆಯಿಂದ ಆಹಾರ, ಧಾನ್ಯ, ವಸ್ತುಗಳು ಜಿಲ್ಲೆಗೆ ಬಂದ ಸಂದರ್ಭ ಅದರ ವ್ಯವಸ್ಥಿತ ದುರುಪಯೋಗ ಕೂಡ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಇಂದಿಗೂ ಕೂಡ ನಿರಾಶ್ರಿತ ಕೇಂದ್ರಗಳನ್ನು ಹೊರತು ಪಡಿಸಿದರೆ ಸಂತ್ರಸ್ತ ಗ್ರಾಮಗಳಲ್ಲಿರುವವರಿಗೆ ಯಾವುದೇ ವಸ್ತುಗಳು ಮತ್ತು ಆಹಾರ ಧಾನ್ಯ ಪೂರೈಕೆಯಾಗದಿರುವ ಆರೋಪಗಳು ವ್ಯಕ್ತವಾಗುತ್ತಿದೆ.

ಕೋಟೆ ಲೂಟಿಯಾದ ಬಳಿಕ ಊರ ಬಾಗಿಲು ಹಾಕಿದರು ಎಂಬಂತೆ ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ, ತನ್ನ ಮೂಲಕವೇ ಆಹಾರಧಾನ್ಯ ಪೂರೈಸುವುದಾಗಿ ಜಿಲ್ಲಾಡಳಿತ ಹೇಳಿ, ನೆರವು ನೀಡುವ ವಸ್ತುಗಳನ್ನು ಸಂಗ್ರಹಿಸಿದೆ. ಗ್ರಾಮ ಗ್ರಾಮಗಳಿಗೆ ಆಹಾರಧಾನ್ಯ ಪೂರೈಕೆಗಾಗಿ ಜೀಪುಗಳ ವ್ಯವಸ್ಥೆ ಮಾಡಿದೆಯಾದರೂ ಈ ಕಾರ್ಯಕ್ಕೆ ಇಂದಿಗೂ ಚಾಲನೆ ದೊರೆತ್ತಿಲ್ಲ. ಹೀಗಾಗಿ ನಿರಾಶ್ರಿತರ ಕೇಂದ್ರ ಹೊರತು ಪಡಿಸಿದರೆ ಭೂಕುಸಿತ ಮತ್ತು ನೆರೆ ಸಂತ್ರಸ್ತ ಕುಟುಂಬಗಳ ಹಸಿವು ನೀಗಿಸಲು ಜಿಲ್ಲಾಡಳಿತ ವಿಫಲವಾಗಿದೆ.

Translate »