ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ
ಮೈಸೂರು

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ

January 1, 2019

ಮೈಸೂರು: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿದರ (ಗೈಡ್‍ಲೈನ್ಸ್ ರೇಟ್) ನಾಳೆ(ಜ.1)ಯಿಂದಲೇ ಅನ್ವಯ ವಾಗಲಿದ್ದು, ಮೈಸೂರಿನಲ್ಲಿ ಶೇ.5ರಿಂದ 25ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಆಸ್ತಿ ನೋಂದಣಿ ಶುಲ್ಕವೂ ಹೆಚ್ಚಾಗಿದೆ.

ಮೈಸೂರು ನಗರದ 4 ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಜಮೀನು, ಮನೆ, ನಿವೇಶನ, ಫ್ಲ್ಯಾಟ್ ನೋಂದಣಿ ವೆಚ್ಚದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೃಷಿ ಜಮೀನು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿ, ವಾಣಿಜ್ಯ ಹಾಗೂ ವಸತಿಯೇತರ ಉದ್ದೇಶಿತ ಸ್ಥಿರಾಸ್ತಿ, ಮೂಲೆ ನಿವೇಶನ, ಎರಡೂ ಕಡೆಗಳಲ್ಲಿ ರಸ್ತೆ ಹೊಂದಿರುವ ನಿವೇಶನ, ಕೈಗಾರಿಕೋಪಯೋಗಿ ನಿವೇಶನ, ವಿಲ್ಲಾಮೆಂಟ್, ಅಪಾರ್ಟ್ ಮೆಂಟ್, ಬಹುಮಹಡಿ ಕಟ್ಟಡಗಳು ಸೇರಿದಂತೆ ವಿವಿಧ ಬಗೆಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಈಗಾಗಲೇ ಪ್ರಕಟಿಸ ಲಾಗಿದ್ದು, ಇದರೊಂದಿಗೆ ನೋಂದಣಿ ಶುಲ್ಕವೂ ಹೆಚ್ಚಾಗಿದೆ.

ಪರಿಷ್ಕೃತ ಮಾರ್ಗಸೂಚಿ ದರದನ್ವಯ ನೋಂದಣಿ ಶುಲ್ಕದಲ್ಲೂ ಏರಿಕೆಯಾಗುವುದರಿಂದ ಮೈಸೂರು ನಗರದ ಒಂದೊಂದು ರಸ್ತೆಯ ಆಸ್ತಿಯ ದರ ಹಾಗೂ ನೋಂದಣಿ ಶುಲ್ಕದಲ್ಲೂ ಬದಲಾ ವಣೆಯಾಗಲಿದೆ. ಉದಾಹರಣೆಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಪ್ರತಿ ಚದರ ಮೀಟರ್‍ಗೆ ವಾಣಿ ವಿಲಾಸ ಮಾರುಕಟ್ಟೆಯಿಂದ ಡಿ.ಬನುಮಯ್ಯ ವೃತ್ತದವರೆಗೆ 32 ಸಾವಿರ ರೂ., ಬನುಮಯ್ಯ ವೃತ್ತದಿಂದ ಕೆ.ಆರ್.ವೃತ್ತದವರೆಗೆ 68,200ರೂ., ಕೆ.ಆರ್.ವೃತ್ತದಿಂದ ಆಯುರ್ವೇದ ಆಸ್ಪತ್ರೆ ವೃತ್ತದವರೆಗೆ 1.15 ಲಕ್ಷ ರೂ. ಆಯುರ್ವೇದ ಆಸ್ಪತ್ರೆ ವೃತ್ತದಿಂದ ಆರ್‍ಎಂಸಿ ವೃತ್ತದವರೆಗೆ 49,100ರೂ., ಆರ್‍ಎಂಸಿ ವೃತ್ತದಿಂದ ಹೈವೇ ವೃತ್ತದವರೆಗೆ 32600ರೂ., ಕುಂಬಾರಕೊಪ್ಪಲು ಮುಖ್ಯರಸ್ತೆಯಲ್ಲಿ 12900ರೂ., ಕ್ರಾಸ್ ರಸ್ತೆ 9600ರೂ., ಒಳಗಿನ ಕ್ರಾಸ್ ರಸ್ತೆ 9900ರೂ., ಕಾಲೋನಿ 6500ರೂ., ದಕ್ಷಿಣ ಭಾಗ 13 ಸಾವಿರ ರೂ., ಗೋಕುಲಂ ಮುಖ್ಯರಸ್ತೆ 38,400ರೂ., ಕ್ರಾಸ್ ರಸ್ತೆ 19,800ರೂ., 1ಮತ್ತು 2ನೇ ಹಂತ 25 ಸಾವಿರ ರೂ., 3ನೇ ಹಂತ 28 ಸಾವಿರ ರೂ., 4ನೇ ಹಂತ(ಮಂಜುನಾಥಪುರ) 20 ಸಾವಿರ ರೂ., ಕಾಂಟೂರ್ ರಸ್ತೆ ಇಡಬ್ಲ್ಯೂಎಸ್ 19,700ರೂ., ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಮನೆಗಳಿಗೆ 8600ರೂ., ಬೋಗಾದಿ 1ಮತ್ತು 2ನೇ ಹಂತ ಶಾರದಾದೇವಿನಗರ 28 ಸಾವಿರ ರೂ., ಜನತಾನಗರ 11800ರೂ., ಶ್ರೀರಾಂಪುರ 1ನೇ ಹಂತ 23 ಸಾವಿರ ರೂ., 2ನೇ ಹಂತ 24 ಸಾವಿರ ರೂ., ಮೇಟಗಳ್ಳಿ ಮುಖ್ಯ ರಸ್ತೆ 18,300ರೂ., ಹಳೇ ಊರು 8500ರೂ., ಅಂಬೇಡ್ಕರ್ ಕಾಲೋನಿ 3500ರೂ., ಬಿ.ಎಂ.ಶ್ರೀನಗರ ಮುಖ್ಯ ರಸ್ತೆ 10100ರೂ., ಕ್ರಾಸ್ ರಸ್ತೆಗಳು 8300ರೂ., ಕರಕುಶಲನಗರ(ಅಂಬೇಡ್ಕರ್ ಜ್ಞಾನಲೋಕ) 5400ರೂ., ಹೀಗೆ ಪರಿಷ್ಕೃತ ದರದಲ್ಲಿ ವ್ಯತ್ಯಾಸವಿದೆ.

ಹೀಗೆಯೇ ಕೃಷಿ ಭೂಮಿ, ಗ್ರಾಮ ಠಾಣಾ ವ್ಯಾಪ್ತಿಯ ವಸತಿ ನಿವೇಶನಗಳ ಮಾರ್ಗಸೂಚಿ ದರವನ್ನೂ ಪರಿಷ್ಕರಿಸಲಾಗಿದೆ. ಉದಾಹರಣೆಗೆ ಮೈಸೂರು ಉತ್ತರ ಉಪ ನೋಂದಣಿ ಕಚೇರಿ ವ್ಯಾಪ್ತಿಯ ಅಜ್ಜಯ್ಯನಹುಂಡಿ ಗ್ರಾಮದಲ್ಲಿ ಒಂದು ಎಕರೆ ಖುಷ್ಕಿ ಭೂಮಿಗೆ 51 ಲಕ್ಷ ರೂ., ತರಿ ಭೂಮಿಗೆ 53 ಲಕ್ಷ ರೂ., ವಸತಿ ನಿವೇಶನಗಳ ಪ್ರತಿ ಚದರ ಮೀಟರ್‍ಗೆ 4750ರೂ., ಪ್ರಾಧಿಕಾರದಿಂದ ಅನುಮೋದಿ ಸಲ್ಪಟ್ಟ ಬಡಾವಣೆ ನಿವೇಶನಗಳಿಗೆ 10,900ರೂ., ಚೌಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಎಕರೆ ಖುಷ್ಕಿ ಭೂಮಿಗೆ 30 ಲಕ್ಷ, ತರಿ ಭೂಮಿಗೆ 32 ಲಕ್ಷ ರೂ., ಮೈಸೂರು ಪೂರ್ವ ಕಚೇರಿ ವ್ಯಾಪ್ತಿಯ ಆಯರಹಳ್ಳಿಯಲ್ಲಿ ಎಕರೆ ಕೃಷಿ ಭೂಮಿಗೆ 8.5 ಲಕ್ಷ ರೂ., ತರಿ ಭೂಮಿಗೆ 9 ಲಕ್ಷ ರೂ., ಮುಡಾ ವ್ಯಾಪ್ತಿಯ ಸರ್ಕಾರಿ ಉತ್ತನಹಳ್ಳಿಯಲ್ಲಿ 32 ಲಕ್ಷ ರೂ., ಇನಾಂ ಉತ್ತನಹಳ್ಳಿಯಲ್ಲಿ 8 ಲಕ್ಷ ರೂ., ಇಲವಾಲ ಹೋಬಳಿ ವ್ಯಾಪ್ತಿಯ ಅಮಚವಾಡಿಯಲ್ಲಿ ಎಕರೆಗೆ 3.50 ಲಕ್ಷ ರೂ., ಆನಂದೂರಿನಲ್ಲಿ 20 ಲಕ್ಷ ರೂ., ಇಲವಾಲ ಮುಡಾ ವ್ಯಾಪ್ತಿ, ಮೈಸೂರು-ಹುಣಸೂರು ರಸ್ತೆಯಲ್ಲಿ ಎಕರೆಗೆ 35 ಲಕ್ಷ ರೂ. ಮೈಸೂರು ಪಶ್ಚಿಮ ಕಚೇರಿ ವ್ಯಾಪ್ತಿಯ ಅಣಗಹಳ್ಳಿಯಲ್ಲಿ 8 ಲಕ್ಷ ರೂ., ಅರಸಿನಕೆರೆಯಲ್ಲಿ 5 ಲಕ್ಷ ರೂ., ಮುಡಾ ವ್ಯಾಪ್ತಿ ಉದ್ಬೂರಿನಲ್ಲಿ 22 ಲಕ್ಷ ರೂ., ಕಡಕೊಳದಲ್ಲಿ 35 ಲಕ್ಷ ರೂ., ಹೀಗೆ ಪ್ರದೇಶವಾರು ಅಂದಾಜು ಮಾರುಕಟ್ಟೆ ಮೌಲ್ಯದ ಅನ್ವಯ ಈಗಾಗಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾರ್ಗಸೂಚಿ ದರಪಟ್ಟಿಯನ್ನು ಪ್ರಕಟಿಸಿದೆ.

ಮಾರ್ಗಸೂಚಿ ದರವನ್ನು ಸಾಮಾನ್ಯವಾಗಿ ಪ್ರತಿವರ್ಷ ಪರಿಷ್ಕರಿಸಲಾಗುತ್ತಿತ್ತು. ಆದರೆ ಚುನಾವಣೆಗಳು ಇನ್ನಿತರ ಕಾರಣಗಳಿಂದ 2016ರಿಂದ ಪರಿಷ್ಕರಣೆ ಆಗಿರಲಿಲ್ಲ. ಇದೀಗ 2 ವರ್ಷಗಳ ನಂತರ ಪರಿಷ್ಕೃತ ಮಾರ್ಗಸೂಚಿ ದರ ರಾಜ್ಯಾದ್ಯಂತ ಜಾರಿಯಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳೆದ ಸೆಪ್ಟೆಂಬರ್‍ನಲ್ಲೇ ಈ ಸಂಬಂಧ ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿ, ಅಂತಿಮವಾಗಿ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮಾರ್ಗಸೂಚಿ ದರವನ್ನು ನಿಗದಿ ಮಾಡಿದೆ. ಒಟ್ಟಾರೆ ಹೊಸವರ್ಷದ ಮೊದಲ ದಿನದಿಂದಲೇ ಸ್ಥಿರಾಸ್ತಿಗಳ ಮಾರುಕಟ್ಟೆ ಪರಿಷ್ಕೃತ ದರ ಜಾರಿಯಾಗುತ್ತಿದ್ದು, ಇದರೊಂದಿಗೆ ನೋಂದಣಿಗೂ ಹೆಚ್ಚಿನ ಶುಲ್ಕ ಭರಿಸಬೇಕಿದೆ.

Translate »