ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ
ಮೈಸೂರು

ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ

January 1, 2019

ಮೈಸೂರು: ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿರುವ ತಿ.ನರಸೀಪುರದ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಗಳ ಸಂಗಮ ಕ್ಷೇತ್ರದಲ್ಲಿ 2019ರ ಫೆ.17ರಿಂದ ಮೂರು ದಿನಗಳ ಕಾಲ ಕುಂಭ ಮೇಳ ನಡೆಯಲಿದೆ. 1989ರಲ್ಲಿ ಆರಂಭಗೊಂಡ ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆದು ಕೊಂಡು ಬರುತ್ತಿದ್ದು, ಈ ಬಾರಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಉತ್ತರ ಭಾರತದ ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಾದ ಅಲಹಾಬಾದ್, ಹರಿದ್ವಾರ್ ಹಾಗೂ ಪ್ರಯಾಗ್ ಮೊದಲಾದ ಕಡೆಗಳಲ್ಲಿ ಕುಂಭಮೇಳ ನಡೆದುಕೊಂಡು ಬರುತ್ತಿದೆ. ಮೇಳದಲ್ಲಿ ಮಾಘಸ್ನಾನ ವಿಶೇಷವಾಗಿದೆ. ಇಂತಹ ಧಾರ್ಮಿಕ ಕಾರ್ಯವನ್ನು ದಕ್ಷಿಣ ಭಾರತದ ಭಕ್ತಾದಿಗಳಿಗೂ ಕಲ್ಪಿ ಸುವ ನಿಟ್ಟಿನಲ್ಲಿ 1989ರಲ್ಲಿ ತಿ.ನರಸೀಪುರದ ಮೂರು ನದಿಗಳ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಯಲಿದೆ. ಬೆಂಗಳೂರಿನ ಶ್ರೀಕೈಲಾಸಾಶ್ರಮದ ಸ್ವಾಮೀಜಿ, ಶ್ರೀಆದಿ ಚುಂಚನಗಿರಿ ಸ್ವಾಮೀಜಿ ಹಾಗೂ ಶ್ರೀಸುತ್ತೂರು ಸ್ವಾಮೀಜಿ ಅವರ ಪ್ರಯತ್ನದ ಫಲವಾಗಿ ಇದು ಸಾಕಾರಗೊಂಡಿತು.

11ನೇ ಕುಂಭಮೇಳಕ್ಕೆ ಸಂಬಂಧಿಸಿದಂತೆ ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ವಿವಿಧ ಮಠಗಳ ಸ್ವಾಮೀಜಿ ಗಳ ಸಾನಿಧ್ಯದಲ್ಲಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು. ಸಕಲ ಸಿದ್ಧತೆ ಮಾಡಿಕೊಳ್ಳಲು ವಿವಿಧ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಸಚಿವರು, 11ನೇ ಕುಂಭಮೇಳ ಯಶಸ್ವಿಗೊಳಿಸಲು ಪೂರ್ವ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿವಿಧ ಇಲಾಖೆಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ನೀಡಲಾಗಿದೆ. ಹಿಂದಿನ ಕುಂಭಮೇಳಗಳಲ್ಲಿ ಎದುರಾಗಿದ್ದ ಸಮಸ್ಯೆಗಳು ಮರುಕಳಿಸದಂತೆ ಕಾರ್ಯತಂತ್ರ ರೂಪಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜ.2ರಂದು ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿಗಳು ಸದ್ಯದಲ್ಲೇ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಿದ್ದಾರೆ. 2019ರ ಜ.2ರಂದು ಬೆಳಿಗ್ಗೆ ವಿವಿಧ ಮಠಗಳ ಸ್ವಾಮೀಜಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಕ್ಷೇತ್ರದಲ್ಲೇ ಇದ್ದು ಮುಂದಿನ ಸಿದ್ಧತೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಬಳಿಕ ಕುಂಭಮೇಳದಲ್ಲಿ ಪಾಲ್ಗೊಳ್ಳಲಿರುವ ಭಕ್ತಾದಿಗಳ (ನಿರೀಕ್ಷಿತ) ಸಂಖ್ಯೆ ಸೇರಿದಂತೆ ಎಲ್ಲಾ ಕಾರ್ಯಗಳ ಬಗ್ಗೆ ಒಂದು ಚಿತ್ರಣ ದೊರೆಯಲು ಸಾಧ್ಯವಾಗಲಿದೆ. ಅಲ್ಲದೆ, ಕುಂಭಮೇಳಕ್ಕೆ ಅಗತ್ಯವಿರುವ ಅನುದಾನದ ಬಗ್ಗೆಯೂ ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಟಿಡಿ ವಿವರಿಸಿದರು.

ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ಇಂದಿನ ಸಭೆಗೆ ಬರಲು ಸಾಧ್ಯವಾಗಿಲ್ಲ. ಇದು ಪಕ್ಷಾತೀತವಾಗಿ ನಡೆಯುವ ಕುಂಭಮೇಳವಾಗಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ವಾಟಾಳು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಬಾರಿ ಸುವ್ಯವಸ್ಥಿತ ಹಾಗೂ ಸಡಗರದಿಂದ ಕುಂಭಮೇಳ ನಡೆದರೂ ಪ್ರಚಾರದ ಕೊರತೆಯಿಂದ ಭಕ್ತರು ನಿರೀಕ್ಷಿತ ಪ್ರಮಾಣದಲ್ಲಿ ಸೇರಲಿಲ್ಲ. ಈ ಬಾರಿ ಮೂರು ದಿನಗಳೂ ಲಕ್ಷಾಂತರ ಭಕ್ತರು ಸೇರುವಂತೆ ವ್ಯಾಪಕ ಪ್ರಚಾರ ಮಾಡಬೇಕು. ಕುಂಭಮೇಳದ ಬಗ್ಗೆ ಹಳ್ಳಿಗಳಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ಸಭೆಗೆ ಸಲಹೆ ನೀಡಿದರು.

ಬೆಂಗಳೂರು ಶ್ರೀ ಕೈಲಾಸಾಶ್ರಮದ ಶ್ರೀಜಯೇಂದ್ರಪುರಿ ಸ್ವಾಮೀಜಿ ಮಾತನಾಡಿ, ಉತ್ತರ ಭಾರತದಂತೆ ದಕ್ಷಿಣ ಭಾರತದ ಜನರಿಗೂ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಈ ಕುಂಭಮೇಳದಿಂದ ಸಾಧ್ಯವಾಗಿದೆ. ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಯಲ್ಲಿ ಪುಣ್ಯಸ್ನಾನ ಕೈಗೊಳ್ಳುವುದು ಮಹತ್ವದ ಧಾರ್ಮಿಕ ಕಾರ್ಯವಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಆತ್ಮಾನಂದ, ಕಾಗಿನೆಲೆ ಮಠದ ಶ್ರೀ ನಿತ್ಯಾನಂದಪುರಿ ಸ್ವಾಮೀಜಿ, ಓಂಕಾರ ಆಶ್ರಮದ ಮಧುಸೂದನಾನಂದ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಲಕ್ಷ್ಮೀಜಿ, ಶಾಸಕ ಎಂ.ಅಶ್ವಿನ್‍ಕುಮಾರ್, ಜಿಪಂ ಸದಸ್ಯ ಮಂಜುನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಎಸಿ ಶಿವೇಗೌಡ, ಜೆಎಸ್‍ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಸಿ.ಜಿ.ಬೆಟಸೂರಮಠ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಫೆ.19ಕ್ಕೆ ಪುಣ್ಯಸ್ನಾನ…: 2019ರ ಫೆ.17ರಂದು ಆರಂಭಗೊಳ್ಳುವ ಕುಂಭಮೇಳಕ್ಕೆ ಫೆ.19ರಂದು ಪುಣ್ಯಸ್ನಾನದ ಮೂಲಕ ತೆರೆ ಬೀಳಲಿದೆ. ಅಂದು ಬೆಳಿಗ್ಗೆ 9.35ರಿಂದ 9.50ರ ಮೀನ ಲಗ್ನದಲ್ಲಿ ಪುಣ್ಯಸ್ನಾನ ನಡೆಯಲಿದೆ. ಫೆ.17ರಂದು ಪ್ರಾತಃಕಾಲದಲ್ಲಿ ಅಗಸ್ತ್ಯ ಪುಣ್ಯಸ್ನಾನ, ಫೆ.18ರಂದು ಪೂರ್ಣಾಹುತಿ, ಹೋಮ, ರುದ್ರಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. -ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ


ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ನಿಗಾ: ಈ ಬಾರಿ ಹೆಚ್ಚಿನ ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿದೆ. ಬ್ಯಾರಿಕೇಡ್‍ಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಬೇಕು. ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಬಹುತೇಕ ಸುಸ್ಥಿತಿಯಲ್ಲಿದ್ದು, ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. – ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿ, ಮೈಸೂರು.

Translate »