ವಿರಾಜಪೇಟೆ: ವಿರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಡಿ.30 ರಿಂದ ಜನವರಿ 1ರ ತನಕ ಶ್ರಿ ಅಯ್ಯಪ್ಪ ಸ್ವಾಮಿ ಉತ್ಸವವು ಮೂರು ದಿನಗಳ ಕಾಲ ಹಾಗೂ ವಿಜೃಂಭಣೆಯಿಂದ ಜರುಗಿತು.
ಜನವರಿ 1 ರಂದು ಮುಂಜಾನೆ 5.30 ಗಂಟೆಗೆ ಗಣಪತಿ ಹೋಮ ನಡೆದು ನಂತರ 9 ಗಂಟೆಯಿಂದ ತುಲಾಭಾರ, 10 ಗಂಟೆಗೆ ಅಯ್ಯಪ್ಪ ಸ್ವಾಮಿ ವ್ರತಾ ಧಾರಿಗಳಿಂದ ಲಕ್ಷಾರ್ಚನೆ, 12.45ಕ್ಕೆ ಮಹಾಪೂಜಾ ಸೇವೆ, ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ 7 ಗಂಟೆಗೆ ಮಲೆತಿರಿಕೆ ಬೆಟ್ಟದಿಂದ ಅಯ್ಯಪ್ಪ ಸ್ವಾಮಿಯ ಅದ್ದೂ ರಿಯ ಮೆರವಣಿಗೆಯಲ್ಲಿ ದೀಪಾರತಿ, ಅಯ್ಯಪ್ಪ ಸ್ವಾಮಿ [ಮಣಿಕಂಠ]ಯ ಚಲನ ವಲನಗಳಿರುವ ವಿಗ್ರಹ, ಕೇರಳದ ಚಂಡೆ ಮದ್ದಳೆ, ಗೊಂಬೆ ಕುಣಿತ ಹಾಗೂ ವಿವಿಧ ಮನರಂಜನಾ ತಂಡಗಳು ಪಟ್ಟಣದ ತೆಲುಗರ ಬೀದಿ, ಜೈನರಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಮಲಬಾರ್ ರಸ್ತೆ, ಮೀನುಪೇಟೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹಿಂದಿರುಗಿ ಬಂದು ರಾತ್ರಿ 12.30 ಗಂಟೆ ವೇಳೆಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಲಾಯಿತು. ಡಿ.30 ರಂದು ದೇವರಿಗೆ ವಿಶೇಷ ಪೂಜೆಗಳು ನಡೆದು ತಾ,31 ರಂದು ಬೆಳಗಿನಿಂದಲೇ ಸಂಪ್ರದಾಯಿಕ ಪೂಜೆ ವಿಧಿ ವಿಧಾನಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಿತು. ಉತ್ಸವದಲ್ಲಿ ಅಯ್ಯಪ್ಪ ಸೇವಾ ಸಮಿತಿ ಸದಸ್ಯರುಗಳು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.