ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ
ಕೊಡಗು

ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ

August 27, 2018

ಮಡಿಕೇರಿ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸದಸ್ಯ ಸ್ಥಾನ ನೀಡಲೇಬೇಕು. ಅವರು ಬೇಡ ಇವರು ಬೇಡ ಎಂದು ಸಿದ್ದರಾಮಯ್ಯ ಹಠ ಹಿಡಿದಿರೋದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲಾ 22 ಮಿತ್ರ ಪಕ್ಷಗಳ ಅಧ್ಯಕ್ಷರೂ ಸಮನ್ವಯ ಸಮಿತಿಯ ಸದಸ್ಯರಾಗಿದ್ದರು. ಹೀಗಿರುವಾಗ ಎರಡು ಪಕ್ಷಗಳು ಸೇರಿರುವ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಸದಸ್ಯರಾಗಿರಲೇ ಬೇಕು ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆ ನಡೆಸಲಿ ಎಂದು ಸಲಹೆ ನೀಡಿದ ವಿಶ್ವನಾಥ್, ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಸಿದ್ದರಾಮಯ್ಯ ತಮ್ಮ ಅನುಭವವನ್ನು ಸಮ್ಮಿಶ್ರ ಸರ್ಕಾರದ ಯಶಸ್ವಿ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದೂ ಸಲಹೆ ನೀಡಿದರು. 2 ಪಕ್ಷಗಳಾದ ಜೆಡಿಎಸ್ – ಕಾಂಗ್ರೆಸ್ ಸೇರಿಕೊಂಡೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿರುವಾಗ ಆ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸಮಿತಿಯಲ್ಲಿ ಸದಸ್ಯ ಸ್ಥಾನ ಸಿಗಬೇಕಾಗಿದೆ ಎಂದು ವಿಶ್ವನಾಥ್ ಆಗ್ರಹಿಸಿದರು. ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ.ಗಣೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.

Translate »